ಮುಖ್ಯಮಂತ್ರಿ ಯಡಿಯೂರಪ್ಪಗೆ ಗಡುವು ನೀಡಿದ ಪ್ರಸನ್ನಾನಂದಪುರಿ ಸ್ವಾಮೀಜಿ

ವಾಲ್ಮೀಕಿ ಸಮಾಜದ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ| ಫೆ. 9 ರೊಳಗೆ ಮೀಸಲಾತಿ ಘೋಷಣೆಗೆ ಗಡುವು: ಪ್ರಸನ್ನಾನಂದಪುರಿ ಶ್ರೀ|ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಯ ದೇಗುಲವನ್ನು ರಾಮಮಂದಿರ ಬಳಿಯೇ ನಿರ್ಮಿಸಬೇಕು|

Prasannanandpuri Swamiji Talks Over Valmiki Community Reservation

ಬಳ್ಳಾರಿ(ಡಿ.29): ಮೀಸಲಾತಿಯಿಂದ ಚುನಾಯಿತಗೊಂಡಿರುವ ವಾಲ್ಮೀಕಿ ಸಮಾಜದ ಶಾಸಕರು ಹಾಗೂ ಸಂಸದರು ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ಫೆ. 9ರೊಳಗೆ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕು ಎಂದು ಗಡುವು ನೀಡಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಾಲ್ಮೀಕಿ ಸಮಾಜದ ಶಾಸಕರು, ಸಂಸದರು ರಾಜೀನಾಮೆ ನೀಡಲು ಬದ್ಧರಾಗಿದ್ದಾರೆ. ಸಮಾಜದ ಹಿತ ಕಾಯಲು ನಾವು ಪಕ್ಷಾತೀತವಾಗಿ ರಾಜೀನಾಮೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಅವರು ತಮ್ಮ ಬದ್ಧತೆಯನ್ನು ಕಾಯ್ದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಮಾಧ್ಯಮಗಳ ಮುಂದೆ ಎಷ್ಟೇ ಸುಳ್ಳು ಹೇಳಬಹುದು. ಆದರೆ, ಸಮುದಾಯವನ್ನು ವಂಚಿಸಲು ಸಾಧ್ಯವಿಲ್ಲ. ನಾವು ಸಹ ವಾಲ್ಮೀಕಿ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಅನೇಕ ಸಭೆಗಳನ್ನು ನಡೆಸಿ, ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ನಮ್ಮ ಸಮಾಜದ ಎಲ್ಲ ಶಾಸಕರು, ಸಂಸದರು ಸಹ ಸಮುದಾಯದ ಹಿತ ಕಾಯುವ ದಿಸೆಯಲ್ಲಿ ರಾಜೀನಾಮೆಗೂ ಸಿದ್ಧರಿದ್ದಾರೆ ಎಂದು ತಿಳಿಸಿದರು. 

ನಮ್ಮವರನ್ನು ಡಿಸಿಎಂ ಮಾಡಿ: 

ರಾಜ್ಯ ಸರ್ಕಾರ ನಮ್ಮ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನನ್ನ ಒತ್ತಾಯವಾಗಿದೆ. ಇಂತಹವರಿಗೆ ಕೊಡಿ ಎನ್ನುವುದಿಲ್ಲ. ನಮ್ಮ ಸಮಾಜಕ್ಕೆ ಒಬ್ಬರಿಗೆ ಕೊಡಲೇಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ. ಮೀಸಲಾತಿ ಅನುಭವಿಸಿದವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿಯ ಲಾಭ ಸಿಗಬೇಕು. ಜಾತಿಯಿಂದ ಗೆದ್ದವರು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸಮುದಾಯಕ್ಕೆ ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೊರಬರಬೇಕು ಎಂದು ಕರೆ ನೀಡಿದರು. 

'ಉಪಮುಖ್ಯಮಂತ್ರಿ ಹುದ್ದೆ ನೀಡದ ಸಿಎಂ ಯಡಿಯೂರಪ್ಪಗೆ ಉಗಿದಿದ್ದೇನೆ'

ಫೆ. 9ರ ತನಕ ಕಾಯುತ್ತೇವೆ: ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡುವ ಸಂಬಂಧ ನ್ಯಾ. ನಾಗಮೋಹನ್ ದಾಸ್ ಅವರಿಗೆ ವರದಿ ನೀಡಲು ಸರ್ಕಾರ ತಿಳಿಸಿದೆ. ಜನವರಿ ಅಂತ್ಯದೊಳಗೆ ವರದಿ ನೀಡುವಂತೆ ನಾವು ಮನವಿ ಮಾಡುತ್ತಿದ್ದೇವೆ. ಫೆ. 8 ಮತ್ತು  9 ರೊಳಗೆ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕು. ಫೆ. 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ಇದ್ದು, ಅಂದು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದರು. 

ನಕಲಿ ಜಾತಿ ಪ್ರಮಾಣಪತ್ರ ತಡೆಯಿರಿ: 

ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಯುವ ಕೆಲಸವಾಗಬೇಕು. ವಾಲ್ಮೀಕಿ ಹೆಸರಿನಲ್ಲಿ ಬೇರೆಯವರು ಪ್ರಮಾಣಪತ್ರ ಪಡೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಕ್ರಮ ವಹಿಸಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಅವರ ಹೆಸರಿಡಬೇಕು. ಶ್ರೀರಾಮನನ್ನು ಬಿಜೆಪಿಯವರು ಐಕಾನ್ ಮಾಡಿಕೊಂಡಿದ್ದಾರೆ. ಇದೇ ಹೆಸರಿನಲ್ಲಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಯ ದೇಗುಲವನ್ನು ರಾಮಮಂದಿರ ಬಳಿಯೇ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

'ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡದಿದ್ದರೆ 15 ಶಾಸಕರ ರಾಜೀನಾಮೆ'

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಮುನ್ನೆಲೆಗೆ ತರಬೇಕಾದ ಕರ್ತವ್ಯ ಸರ್ಕಾರದ್ದು. ಹೀಗಾಗಿಯೇ ಈ ಸಮಾಜಕ್ಕೆ ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ. ಶೋಷಿತ ಸಮುದಾಯದ ಪ್ರಗತಿಗೆ ಅಸ್ತಿತ್ವಕ್ಕೆ ಬರುವ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು  ರಾಜನಹಳ್ಳಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios