Asianet Suvarna News Asianet Suvarna News

Toddy ತೆಗೆಯಲು ಅನುಮತಿಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹ

ಈಡಿಗ ಸಮಾಜದ ಕುಲಕಸುಬು ಸೇಂದಿ ತೆಗೆಯಲು ಅನುಮತಿ ನೀಡುವಂತೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 

Pranavananda Swamiji hunger strike in kalaburagi  demand for Toddy tapping gow
Author
Bengaluru, First Published Jun 20, 2022, 5:29 PM IST

ವರದಿ : ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್   

ಕಲಬುರಗಿ (ಜೂ.‌20):  ಈಡಿಗ ಸಮಾಜದ ಕುಲಕಸುಬು ಸೇಂದಿ ತೆಗೆಯಲು ಅನುಮತಿ ನೀಡುವಂತೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಕಲಬುರಗಿ ಯಲ್ಲಿ ಇಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 

ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಪ್ರಣವಾನಂದ ಸ್ವಾಮಿಗಳು, ಸರ್ಕಾರ ಈಡಿಗ ಸಮಾಜ ಬಾಂಧವರ ಕುಲಕಸುಬು ಮುಂದುವರಿಸಲು ಅನುಮತಿ ನೀಡಬೇಕು. ಈಡಿಗ ಸಮಾಜದವರಿಗಾಗಿ ನನ್ನ ಪ್ರಾಣ ಹೋದರೂ ಸರಿ ಬೇಡಿಕೆ ಈಡೇರುವವರೆಗೆ ಉಪವಾಸ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರಣವಾನಂದ ಸ್ವಾಮಿಗಳು ಘೋಷಿಸಿದರು. 

ಮಹಾರಾಷ್ಟ್ರ, ಆಂಧ್ರಪ್ರದೇಶ ,ಗುಜರಾತ್ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಸೇಂದಿ ತೆಗೆಯಲು ಅವಕಾಶ ಇದೆ. ನಮ್ಮ ರಾಜ್ಯದಲ್ಲಿ ಮಾತ್ರ ಇದಕ್ಕೆ ಅವಕಾಶ ನೀಡುತ್ತಿಲ್ಲ. ಇದು ಕೂಡಲೇ ಸರಿಪಡಿಸಬೇಕು. ದೇಶಿ ಉತ್ಪನ್ನಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿರುವುದಾಗಿ ಪ್ರಧಾನಿ ಹೇಳುತ್ತಾರೆ. ಸಿಂಧಿ ಸಹಾ ದೇಶಿಯ ಉತ್ಪನ್ನವಾಗಿದೆ. ಇದನ್ನು ತೆಗೆಯಲು ರಾಜ್ಯ ಸರಕಾರ ಯಾಕೆ ಅನುಮತಿ ನೀಡುತ್ತಿಲ್ಲ ? ಎಂದು ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. 

ಬಾಲ್ಯದಲ್ಲಿ ಭಿಕ್ಷುಕನಾಗಿದ್ದ UTTAR PRADESHದ ಹುಡುಗನಿಗೆ ಅಗ್ನಿವೀರನಾಗುವ ಕನಸು

ಈಡಿಗ ಸಮಾಜದವರು ಮೊದಲಿನಿಂದಲೂ ಇದನ್ನೇ ವೃತ್ತಿಯಾಗಿ ಪರಿಗಣಿಸಿದ್ದಾರೆ. ಇದೀಗ ನಮ್ಮ ರಾಜ್ಯದಲ್ಲಿ ಇದಕ್ಕೆ ಅವಕಾಶ ಇಲ್ಲದಿರುವುದರಿಂದ ಈಡಿಗ ಸಮಾಜದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೇಂದಿ ತೆಗೆಯಲು ಅನುಮತಿ ನೀಡಬೇಕು. ಇದು ನಮ್ಮ ಕೊನೆಯ ಎಚ್ಚರಿಕೆ ಎಂದರು. 

ಚಿತ್ರನಟ ಸುಮನ್ ಭಾಗಿ: ಕಲಬುರಗಿಯಲ್ಲಿ ಪ್ರಣವಾನಂದ ಸ್ವಾಮೀಜಿ ಆರಂಭಿಸಿರುವ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಹುಭಾಷಾ ಚಿತ್ರ ನಟ ಸುಮನ್ ಸಹ, ಪ್ರಣವಾನಂದ ಸ್ವಾಮೀಜಿ ಆರಂಭಿಸಿದ ಸತ್ಯಾಗ್ರಹ ವೇದಿಕೆಗೆ ಆಗಮಿಸಿ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. 

ಕರ್ನಾಟಕದಲ್ಲಿ ಮಂಗಳೂರು, ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸೇಂದಿ ತೆಗೆಯಲು ಅನುಮತಿ ನೀಡಲಾಗಿದೆ. ಇನ್ನುಳಿದ ಭಾಗಕ್ಕೆ ಏಕೆ ಮಲತಾಯಿ ಧೋರಣೆ ಮಾಡುತ್ತೀರಿ ? ರಾಜ್ಯಾದ್ಯಂತ ಸೇಂದಿ ತೆಗೆಯಲು ಅವಕಾಶ ಕೊಡಿ. ಈ ವಿಚಾರದಲ್ಲಿ ಆಡಳಿತದಲ್ಲಿರುವವರು ಅನುಮತಿ ನೀಡುವ ತ್ವರಿತ ನಿರ್ಣಯ ಕೈಗೊಳ್ಳಬೇಕು ಎಂದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ನಟ ಸುಮನ್ ಒತ್ತಾಯಿಸಿದರು. 

ರಾಜಕೀಯ ನಾಯಕರ ಬೆಂಬಲ: ಸೇಂದಿ ತೆಗೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಪ್ರಣವಾನಂದ ಸ್ವಾಮಿ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ರಾಜಕೀಯ ಪಕ್ಷಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ನ ನಾಯಕರುಗಳು ಸ್ವಾಮೀಜಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. 

ಪ್ರಿಯಾಂಕ ಖರ್ಗೆ ಆಗ್ರಹ: ಪ್ರಣವಾನಂದ ಸ್ವಾಮೀಜಿ ಆರಂಭಿಸಿರುವ ಸತ್ಯಾಗ್ರಹ ವೇದಿಕೆಗೆ ಆಗಮಿಸಿದ ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ, ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈಡಿಗರ ಕುಲಕಸುಬಾದ ಸೇಂದಿ ತೆಗೆಯುವುದಕ್ಕೆ ಸರ್ಕಾರ ಅನುಮತಿ ನೀಡಬೇಕು. ಹಿಂದೆ ನಮ್ಮ ಸರ್ಕಾರವೇ ಅನುಮತಿ ನೀಡುವುದಕ್ಕೆ ಮುಂದಾಗಿತ್ತು. ಆದರೆ ಅಷ್ಟೊತ್ತಿಗೆ ಸರ್ಕಾರ ಉರುಳಿ ಬಿತ್ತು. ಈಗಿರುವ ಬಿಜೆಪಿ ಸರ್ಕಾರ ಆದರೂ ಇದಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. 

Tumakuruನಲ್ಲಿ ಕಾರು - ಸರಕಾರಿ ಬಸ್ ಭೀಕರ ಅಪಘಾತ, ಇಬ್ಬರು ಬಲಿ

ಸಂಸದ ಜಾಧವ್ ಭೇಟಿ: ಸೇಂದಿ ಇಳಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಕಲಬುರಗಿ ಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಪ್ರಿಯಾಂಕ ಖರ್ಗೆ ಬೆಂಬಲ ವ್ಯಕ್ತಪಡಿಸಿ ಹೋಗುತ್ತಿದ್ದಂತೆಯೇ ಬಿಜೆಪಿ ಪರವಾಗಿ ಸಂಸದ ಉಮೇಶ ಜಾಧವ್ ಸಹ ಆಗಮಿಸಿ ಪ್ರಣವಾನಂದ ಸ್ವಾಮೀಜಿ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಿಮ್ಮ ಈ ಬೇಡಿಕೆ ಕೂಡಲೇ ಈಡೇರಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ಉಮೇಶ್ ಜಾಧವ್ ಭರವಸೆ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಈಡಿಗ ಸಮಾಜದ ನೂರಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Follow Us:
Download App:
  • android
  • ios