ಧಾರವಾಡ(ನ.02):  ಸಿದ್ದರಾಮಯ್ಯ ಇರುವ ಕಾಂಗ್ರೆಸ್‌ ಪಕ್ಷವು ನಕಲಿ ಎಂಬುದು ಅವರಿಗೆ ಗೊತ್ತಿಲ್ಲ. ಮಹಾತ್ಮ ಗಾಂಧೀಜಿ, ಸರ್ದಾರ ವಲ್ಲಭಭಾಯಿ ಪಟೇಲ್‌ ಸೇರಿದಂತೆ ದೇಶಕ್ಕೆ ಹೋರಾಡಿದ ಕೊಡುಗೆ ನೀಡಿದವರು ಇದ್ದ ಪಕ್ಷ ಒರಿಜಿನಲ್‌ ಕಾಂಗ್ರೆಸ್‌ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಪಾದಿಸಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ಗೂ ಏನು ಸಂಬಂಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಅದಕ್ಕಾಗಿ ಸ್ಪಷ್ಟಪಡಿಸುತ್ತಿದ್ದು, ಇಂದಿನ ಕಾಂಗ್ರೆಸ್‌ಗೂ ಅಂದಿನ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಅಂದಿನ ಕಾಂಗ್ರೆಸ್‌ ವಿಸರ್ಜನೆ ಆಗಬೇಕು ಎಂದು ಅಂದೇ ಗಾಂಧೀಜಿ ಹೇಳಿದ್ದರು ಎಂಬುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಬೇಕೆಂದು ಎಂದು ಟಾಂಗ್‌ ನೀಡಿದ್ದಾರೆ. 

ಇಲ್ಲಿಯ ವರೆಗೂ ಇಂದಿರಾಗಾಂಧಿ, ನೆಹರು, ರಾಜೀವಗಾಂಧಿ, ಸಂಜಯ ಗಾಂಧಿ ಬಿಟ್ಟರೆ ಈಗಿನ ಕಾಂಗ್ರೆಸ್‌ ಮುಖಂಡರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹೆಸರನ್ನೂ ಎತ್ತಿಲ್ಲ. ದೆಹಲಿಯಲ್ಲಿನ ಅನೇಕ ಕ್ರೀಡಾ ಸಮುಚ್ಚಯ ಹಾಗೂ ಮಹತ್ವದ ಸ್ಥಳಗಳಿಗೆ ನೆಹರು, ಗಾಂಧಿ ಹೆಸರು ಇಡಲಾಗಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾದ ಬಳಿಕ ಪಟೇಲ್‌ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸುವ ಪೂರ್ವದಲ್ಲಿ ಕಾಂಗ್ರೆಸ್‌ ನಾಯಕರು ಪಟೇಲ್‌ ಅವರನ್ನು ಎಷ್ಟುಬಾರಿ ನೆನಪು ಮಾಡಿದ್ದಾರೆ ಎಂದು ಜೋಶಿ ಪ್ರಶ್ನಿಸಿದರು. ಪಟೇಲ್‌ ಅವರ ಪುಣ್ಯತಿಥಿ ಹಾಗೂ ಜನ್ಮದಿನ ಮಾಡಲಾಗದ ನಾಲಾಯಕ್‌ ಕಾಂಗ್ರೆಸ್‌ ನಾಯಕರಿಗೆ ಪಟೇಲ್‌ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಲೋಕಸಭಾ ಬೈಎಲೆಕ್ಷನ್‌: ಟಿಕೆಟ್ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ನಡೆದಿಲ್ಲ, ಶೆಟ್ಟರ್‌

ಹೆಸರಿಗೆ ಉತ್ತಮ ಬೆಲೆ:

ಹೆಸರು ಬೆಳೆಯನ್ನು ಬೆಂಬಲ ಬೆಲೆ ಅಡಿ ಖರೀದಿಸಲು ಪ್ರಾರಂಭಿಸಿ ಉತ್ತಮ ಬೆಲೆ ನೀಡಲಾಗಿದೆ. ಯುಪಿಎ ಕಾಲದಲ್ಲಿ (2014ರಲ್ಲಿ) ಕ್ವಿಂಟಲ್‌ಗೆ 4500 ಇತ್ತು. ಈಗ 7196ಕ್ಕೆ ಏರಿಸಲಾಗಿದೆ. ಬೆಂಬಲ ಬೆಲೆ ನಿಗದಿ ಮಾಡುವುದು ಖರೀದಿ ಮಾಡುವುದಕ್ಕೆ ಅಷ್ಟೇ ಅಲ್ಲ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಲು ಈ ಕೆಲಸ. ಕಳೆದ 5 ವರ್ಷದಲ್ಲಿ ಶೇ. 70ರಷ್ಟು ಹೆಚ್ಚು ಬೆಂಬಲ ಬೆಲೆ ಹೆಚ್ಚಿಸಿದ್ದು ರೈತರಲ್ಲಿ ಸಂತಸ ಮೂಡಿಸಿದೆ ಎಂದರು.

ಇನ್ನು, ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ನಮ್ಮೊಂದಿಗೆ ಯಾರೂ ಚರ್ಚೆ ನಡೆಸಿಲ್ಲ. ಅವರು ಬರುವ ವಿಚಾರ ನನಗೆ ಗೊತ್ತಿಲ್ಲ. ಈ ವಿಚಾರವಾಗಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಘಟಕದ ಎದುರು ಪ್ರಸ್ತಾವ ಇಲ್ಲ. ಹೀಗಾಗಿ ಈ ಕುರಿತು ಚರ್ಚಿಸುವ ಅಗತ್ಯವಿಲ್ಲ ಎಂದರು.

ಆದರ್ಶ ಗ್ರಾಮವಾದ ಕಬ್ಬೇನೂರ-ಹಾರೋಬೆಳವಡಿ ಗ್ರಾಮಗಳಲ್ಲಿ ತಾಂತ್ರಿಕ ಕಾರ್ಯಗಳಿಂದ ಕೆಲವು ಕಾರ್ಯಗಳು ಮಾತ್ರ ಬಾಕಿ ಉಳಿದಿವೆ. ಕೊರೋನಾ ಕಾರಣದಿಂದ ಸಿಎಸ್‌ಆರ್‌ ಅನುದಾನ ಬರಲು ವಿಳಂಬವಾಗಿದೆ. ಹೀಗಾಗಿ ಕೆಲ ದಿನಗಳಲ್ಲೇ ಅದನ್ನು ಸರಿಪಡಿಸಿ ಕಾಮಗಾರಿ ಪೂರ್ಣ ಮಾಡಲಾಗುವುದು ಎಂದರು.