ಚಿಕ್ಕೋಡಿಯಲ್ಲಿ ಮಾಜಿ ಸಂಸದ ಪ್ರಕಾಶ್‌ರಿಂದ ಸತ್ಕಾರ್ಯ| ಯಕ್ಸಂಬಾ, ಅಂಕಲಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ನೇಮಕ| ತಮ್ಮ ತಾಯಿಯ ಹೆಸರಲ್ಲಿರುವ ಫೌಂಡೇಷನ್‌ ಮೂಲಕ ಸಂಸದರಿಂದ ಈ ಕಾರ್ಯ| ಎರಡೂ ಆರೋಗ್ಯ ಕೇಂದ್ರಗಳ ಸೋಂಕಿತರಿಗೆ ಉಚಿತ ಆಹಾರ ವಿತರಣೆಗೂ ಕ್ರಮ|  

ಚಿಕ್ಕೋಡಿ(ಮೇ.08): ಮಾಜಿ ಸಂಸದ ಪ್ರಕಾಶ ಹುಕ್ಕೇರಿ ತಮ್ಮ ಸ್ವಂತ ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಮತ್ತು ಅಂಕಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸೋಂಕಿತರ ಆರೈಕೆಗೆ 14 ನುರಿತ ಸಿಬ್ಬಂದಿ ನೇಮಕ ಮಾಡಿದ್ದಾರೆ. ಮಾಜಿ ಸಂಸದರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಇದೀಗ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೋನಾ 2ನೇ ಅಲೆಗೆ ನಗರದ ಬಹುತೇಕ ಆಸ್ಪತ್ರೆಗಳು ತತ್ತರಿಸಿ ಹೋಗಿವೆ. ಇಂಥ ಪರಿಸ್ಥಿತಿಯಲ್ಲಿ ಹೋಬಳಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಈಗ ಸೋಂಕಿತರಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಅವರು ಯಕ್ಸಂಬಾ ಮತ್ತು ಅಂಕಲಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳೆರಡಕ್ಕೂ ಇಬ್ಬರು ವೈದ್ಯರು ಸೇರಿ ಒಟ್ಟು 14 ಮಂದಿಯನ್ನು ನೇಮಿಸಿದ್ದಾರೆ. ತಮ್ಮ ತಾಯಿಯ ಹೆಸರಲ್ಲಿ ನಡೆಸುತ್ತಿರುವ ಶ್ರೀ ಅನ್ನಪೂರ್ಣೇಶ್ವರಿ ಫೌಂಡೇಶನ್‌ ವತಿಯಿಂದ ಈ ಕೊಡುಗೆ ನೀಡುತ್ತಿದ್ದಾರೆ. ಕೋವಿಡ್‌ನ ಈ ಸಂಕಷ್ಟದ ಹೊತ್ತಿನಲ್ಲಿ ತಾಲೂಕಿನ ಕೆಲ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದ ಹಿನ್ನೆಲೆಯಲ್ಲಿ ಕೊರೋನಾ 2ನೇ ಅಲೆ ಗಂಭೀರತೆ ಅರಿತು ಜನರ ಹಿತದೃಷ್ಟಿಯಿಂದ ಸರ್ಕಾರದ ಆದೇಶಕ್ಕೆ ಕಾಯದೆ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಪ್ರಕಾಶ ಹುಕ್ಕೇರಿ ಹೇಳಿದರು.

ಬೆಳಗಾವಿ: 'ಸುವರ್ಣ ಸೌಧದಲ್ಲಿ ಕೋವಿಡ್ ಕೇರ್ ಸೆಂಟರ್‌ ಓಪನ್‌ ಮಾಡಿ ಜನರ ಜೀವ ಉಳಿಸಿ'

ಇಬ್ಬರು ಎಂಬಿಬಿಎಸ್‌ ವೈದ್ಯಾಧಿಕಾರಿಗಳು, 6 ನರ್ಸ್‌ಗಳು ಹಾಗೂ 6 ಮಂದಿ ಡಿ-ಗ್ರೂಪ್‌ ಸಿಬ್ಬಂದಿ ಹೀಗೆ ಒಟ್ಟು 14 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಜತೆಗೆ ವೈದ್ಯರು ನೀಡಿದ ಔಷಧ ಒಂದು ವೇಳೆ ಎರಡೂ ಸಮುದಾಯ ಕೇಂದ್ರಗಳಲ್ಲಿ ಲಭ್ಯವಾಗದೇ ಇದ್ದಲ್ಲಿ, ಹೊರಗಡೆ ಎರಡು ಔಷಧೀಯ ಮಳಿಗೆಗಳಲ್ಲಿ ಚೀಟಿ ನೀಡಿದರೆ ಉಚಿತ ಔಷಧ ನೀಡುವ ವ್ಯವಸ್ಥೆಯನ್ನೂ ಹುಕ್ಕೇರಿ ಮಾಡಿದ್ದಾರೆ.

ಈಗಾಗಲೇ ಅನ್ನಪೂರ್ಣೇಶ್ವರಿ ಫೌಂಡೇಶನ್‌ ವತಿಯಿಂದ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಉಚಿತ ಆಹಾರ ಕೂಡ ನೀಡಲಾಗುತ್ತಿದೆ. ಈ ಸೇವೆಯನ್ನು ಯಕ್ಸಂಬಾ ಮತ್ತು ಅಂಕಲಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೋಂಕಿತರಿಗೂ ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona