ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದು 5 ಜಾನುವಾರು ಸ್ಥಳದಲ್ಲಿಯೇ ಸಾವು

ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. 
 

Power line fell and 5 cattle died on the spot At Kodagu district gvd

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಅ.01): ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ ಅಲೇಮಾಡ ನಾಣಯ್ಯ ಅವರು ಶ್ರೀನಿವಾಸ್ ಎಂಬುವರ ಗದ್ದೆಯಲ್ಲಿ ಐದು ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದೆ. ಪರಿಣಾಮ ಹಸುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಹಸುಗಳು ವಿದ್ಯುತ್ ಸ್ಪರ್ಶದಿಂದ ಒದ್ದಾಡುತ್ತಿರುವುದನ್ನು ಕಂಡ ಮನೆಯವರು ಮತ್ತು ಸ್ಥಳೀಯರು ಕೂಡಲೇ ಕೆಇಬಿಗೆ ಕರೆಮಾಡಿ ತಿಳಿಸಿದ್ದಾರೆ. 

ಆದರೆ ವಿದ್ಯುತ್ ಲೈನ್ ಆಫ್ ಮಾಡುವಷ್ಟರಲ್ಲಿ ಹಸುಗಳು ಸಾವನ್ನಪ್ಪಿದ್ದವು. ಹಸುಗಳು ಸಾವನ್ನಪ್ಪಿದ್ದರಿಂದ ಸ್ಥಳಕ್ಕೆ ಬಂದ ಕೆಇಬಿ ಸಿಬ್ಬಂದಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ನೀವುಗಳು ಕಳೆದ ಹಲವು ವರ್ಷಗಳಿಂದ ಇತ್ತ ತಿರುಗಿ ನೋಡಿಲ್ಲ. ವಿದ್ಯುತ್ ಲೈನ್ ಗಳು ಏನಾಗಿವೆ ಎಂದು ಗಮನಿಸಿಲ್ಲ. ವಿದ್ಯುತ್ ಲೈನ್ ಗಳ ನಿರ್ವಹಣೆ ಮಾಡದೇ ಇರುವುದರಿಂದ ಇಂತಹ ಅವಘಡ ಸಂಭವಿಸುವುದಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಣಯ್ಯ ಅವರ ಕುಟುಂಬ ಈ ಹಸುಗಳನ್ನು ನಂಬಿಕೊಂಡು ಹೈನುಗಾರಿಕೆ ಮೂಲಕ ಸಣ್ಣ ಆದಾಯದಿಂದ ಜೀವನ ನಿರ್ವಹಣೆ ಮಾಡುತ್ತಿತ್ತು. 

ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು: ಸಿ.ಎಸ್.ಪುಟ್ಟರಾಜು

ಇದೀಗ ಐದು ಹಸುಗಳ ಸಾವಿನಿಂದ ಕುಟುಂಬ ದಿಕ್ಕು ತೋಚದಂತೆ ಆಗಿದೆ. ಐದು ಹಸುಗಳು ಒಂದೇ ಬಾರಿ ಈ ರೀತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಂಡ ಕುಟುಂಬ ತೀವ್ರ ದುಃಖಕ್ಕೆ ಒಳಗಾಗಿದೆ. ಐದು ಹಸುಗಳಿಂದ ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದ್ದು ನಮಗೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬ ಆಗ್ರಹಿಸಿದೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಗೋಣಿಕೊಪ್ಪ ಚೆಸ್ಕಾಂ ವಿಭಾಗದ ಕಿರಿಯ ಅಭಿಯಂತರ ಹೇಮಂತ್, ಕಾನೂರು ಗ್ರಾಮದ ಪಶು ವೈದ್ಯಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿ: ಕೆ.ಎಸ್‌.ಈಶ್ವರಪ್ಪ

ವಿರಾಜಪೇಟೆ ಕ್ಷೇತ್ರ ಶಾಸಕ ಪೊನ್ನಣ್ಣ ಅವರ ಸೂಚನೆ ಮೇರೆ ತೀತಮಾಡ ಯಶ್ವಿನ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಕಿರುಗೂರು ಗ್ರಾಮ ಪಂಚಾಯಿತಿ ಮಾಜೀ ಅಧ್ಯಕ್ಷ ಪುತ್ತಾಮನೆ ಜೀವನ್ ಅವರು, ಕಳೆದ 2 ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬೀಳುವ ಸಂಭವ ಇತ್ತು. ಇದನ್ನು ಪೊನ್ನಂಪೇಟೆ ಚೆಸ್ಕಾಂ ವಿಭಾಗದ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಆದರೂ ಲೈನ್ ದುರಸ್ಥಿ ಮಾಡದೇ ನಿರ್ಲಕ್ಷ್ಯವಹಿಸಿರುವುದು ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಚೆಸ್ಕಾಂ ಕಿರಿಯ ಅಭಿಯಂತರ ಹೇಮಂತ್ ಅವರು ಪ್ರತಿಕ್ರಿಯಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ ಎಂದು  ಭರವಸೆ ನೀಡಿದ್ದಾರೆ.

Latest Videos
Follow Us:
Download App:
  • android
  • ios