Asianet Suvarna News Asianet Suvarna News

ಮಡಿಕೇರಿ: ವ್ಯಕ್ತಿಯ ಅಪಹರಣ ಐದು ಲಕ್ಷಕ್ಕೆ ಬೇಡಿಕೆ ಇಟ್ಟ ನಟೋರಿಯಸ್ ಗ್ಯಾಂಗ್!

ತೆರೆದ ಬಾವಿಯೊಂದನ್ನು ಸ್ವಚ್ಛ ಮಾಡುವ ಕೆಲಸವಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರನ್ನು ಕರೆಸಿಕೊಂಡು ಬಳಿಕ ಅವರನ್ನು ಅಪಹರಿಸಿ 5 ಲಕ್ಷ ರೂಪಾಯಿ ಕೊಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ವೊಂದು ಈಗ ಮಡಿಕೇರಿಯಲ್ಲಿ ಪೊಲೀಸರ ಅತಿಥಿಯಾಗಿದೆ. 

Kidnapping a person and demanding money accused arrested by madikeri police at madikeri rav
Author
First Published Sep 17, 2023, 7:00 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 

ಕೊಡಗು  (ಸೆ.17) : ತೆರೆದ ಬಾವಿಯೊಂದನ್ನು ಸ್ವಚ್ಛ ಮಾಡುವ ಕೆಲಸವಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರನ್ನು ಕರೆಸಿಕೊಂಡು ಬಳಿಕ ಅವರನ್ನು ಅಪಹರಿಸಿ 5 ಲಕ್ಷ ರೂಪಾಯಿ ಕೊಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ವೊಂದು ಈಗ ಮಡಿಕೇರಿಯಲ್ಲಿ ಪೊಲೀಸರ ಅತಿಥಿಯಾಗಿದೆ. 

ಹೌದು ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ವಾಸವಾಗಿರುವ ಒಟ್ಟು 14 ಜನರ ತಂಡ ಕಂಬಿ ಎಣಿಸುತ್ತಿದೆ. ರಶೀದ್, ಪ್ರಮೋದ್, ಡಾಲಿ, ದರ್ಶನ್, ಮದನ್ ರಾಜ್,  ಎಸ್. ದರ್ಶನ್, ಜೀವನ್ ಕುಮಾರ್, ಮಣಿಕಂಠ, ಪರುಶೋಷತ್ತಮ, ಕಿರಣ್, ಮಂಜು, ಕೀರ್ತಿ, ಸಂದೀಪ್ ಮತ್ತು ತಬಸ್ಯಾ ಎಂಬುವರನ್ನು ಬಂಧಿಸಲಾಗಿದೆ. 

ಮಕ್ಕಳು ಶಾಲೆಗೆ ಹೋಗಿದ್ದಾರಾ.. ಪೋಷಕರೇ ಎಚ್ಚರ ! ಅಪಹರಣಕಾರರ ಪತ್ತೆ ಹಚ್ಚದ ಖಾಕಿ !

ಮೂಲತಃ ಮೈಸೂರಿನವರಾದ ನಿಜಾಮುದ್ದಿನ್ ಕಳೆದ 30 ವರ್ಷಗಳಿಂದ ಮಡಿಕೇರಿಯ ಗೌಳಿ ಬೀದಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದು ಬದುಕಿಗಾಗಿ ವಿವಿಧ ಕೆಲಸಗಳನ್ನು ಮಾಡುತಿದ್ದರು. ಶುಕ್ರವಾರ ಬೆಳಗ್ಗೆಯೇ ಪ್ಲಾನ್ ಮಾಡಿದ್ದ ಆರೋಪಿ ಮೊಹಮ್ಮದ್ ರಶೀದ್ ಮತ್ತು ತಂಡ ನಿಜಾಮುದ್ದೀನ್ ಗೆ ಕರೆ ಮಾಡಿ ಇಲ್ಲೊಂದು ಬಾವಿ ಸ್ವಚ್ಛಗೊಳಿಸುವ ಕೆಲಸವಿದೆ ಬಾ ಎಂದು ಕರೆಸಿಕೊಂಡಿದ್ದಂತೆ. ಅಲ್ಲಿಂದ ನಿಜಾಮುದ್ದಿನ್ ನನ್ನು ಅಪಹರಿಸಿ ಚಾಮುಂಡೇಶ್ವರಿ ನಗರದ ನಿರ್ಜನ ಪ್ರದೇಶದಲ್ಲಿ ಹೊಡೆದು ಕಾರನ್ನು ಮೇಲೆ ಹತ್ತಿಸಿ ಸಾಯಿಸುವುದಾಗಿ ಬೆದರಿಸಿತ್ತಂತೆ. ಅಲ್ಲಿಂದ ಪುನಃ ನಗರದ ಹೊರವಲಯದಲ್ಲಿರುವ ಮಂಗಳಾದೇವಿ ನಗರಕ್ಕೆ ಕರೆದೊಯ್ದು ಅಲ್ಲಿ ಆರೋಪಿ ಕಿರಣ್ ಎಂಬುವರ ಮನೆಯಲ್ಲಿ ಇಡೀ ದಿನ ಕೂಡಿಹಾಕಿ ಒಡೆದು ಚಿತ್ರಹಿಂಸೆ ನೀಡಿದ್ದಾರೆ. 

ಕುತ್ತಿಗೆಗೆ ಚಾಕು ಹಿಡಿದು ಈಗ ಕೊಂದು ಬಿಡುತ್ತೇವೆ ಎಂದು ಬೆದರಿಕೆಯೊಡ್ಡಿದೆ. ಇದೆಲ್ಲವನ್ನೂ ನಿಜಾಮುದ್ದಿನ್ ಅವರ ಹೆಂಡತಿಗೆ ನಿಜಾಮುದ್ದಿನ್ ಅವರ ಮೊಬೈಲ್ ನಿಂದಲೇ ವಿಡಿಯೋ ಕರೆಮಾಡಿಸಿ ನೀವು ಐದು ಲಕ್ಷ ಹಣ ತಂದುಕೊಡಿ ಇಲ್ಲದಿದ್ದರೆ ನಿಮ್ಮ ಗಂಡನನ್ನು ಜೀವಂತ ಬಿಡುವುದಿಲ್ಲ ಎಂದು ತಿಳಿಸಿದೆ. ಜೊತೆಗೆ ನಿಜಾಮುದ್ದಿನ್‌ಗೆ ಒಡೆಯುತ್ತಿರುವುದನ್ನು ಲೈವ್ ಆಗಿಯೇ ವಾಟ್ಸಾಪ್ ವಿಡಿಯೋ ಕರೆ(whatsapp video call)ಯಲ್ಲಿ ತೋರಿಸಿದ್ದಾರೆ. ಇದರಿಂದ ಹೆದರಿದ ನಿಜಾಮುದ್ದಿನ್ ಅವರ ಪತ್ನಿ ಹಾಗೂ ಮಗ ಮೊಹಮ್ಮದ್ ಸೈಫುದ್ದಿನ್ ಮೈಸೂರಿನಿಂದ ಮಡಿಕೇರಿಗೆ ಬಂದು ಘಟನೆ ಸಂಬಂಧ ಮಡಿಕೇರಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಪ್ರಕರಣದ ಗಂಭೀರತೆಯನ್ನು ಗಮನಿಸಿದ ಮಡಿಕೇರಿ ನಗರ ಠಾಣೆ ಪೊಲೀಸರು ಸೋಮವಾರಪೇಟೆ ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗಿದೆ. ಶುಕ್ರವಾರ ತಡರಾತ್ರಿ 12 ಗಂಟೆ ಸಮಯಕ್ಕೆ ಮೊಬೈಲ್ ಟವರ್ ಲೊಕೇಶ್ ಆಧರಿಸಿ ಆ ಮನೆಗೆ ಹೋಗಿದ್ದಾರೆ. ಹೋದವರೆ ಸಿನಿಮಾ ಸ್ಟೈಲಿನಲ್ಲೇ ಗನ್‌ಗಳನ್ನು ಹಿಡಿದು ಮನೆಯ ಸುತ್ತಲೂ ಕವರ್ ಆಗಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಅಷ್ಟರಲ್ಲೇ ಅರೆ ಜೀವವಾಗಿ ಬಿದ್ದಿದ್ದ ನಿಜಾಮುದ್ದಿನ್ ಅವರನ್ನು ರಕ್ಷಿಸಿ ಕೂಡಲೇ ಕೊಡಗು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  

 

ಲ್ಯಾಪ್‌ಟಾಪ್‌ ಡೀಲರ್‌ನ ಅಪಹರಿಸಿ ತಮಿಳುನಾಡಲ್ಲಿ ಬಚ್ಚಿಟ್ಟು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಅರೆಸ್ಟ್ 

ಸದ್ಯ ನಿಜಾಮುದ್ದಿನ್ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹದಿನಾಲ್ಕು ಜನರನ್ನು ಬಂಧಿಸಿರುವ ಪೊಲೀಸರು ಅಷ್ಟೂ ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಚ್ಚರಿ ಎಂದರೆ ಇದೇ ಗ್ಯಾಂಗ್ ಹಿಂದೆಯೂ ಇಂತಹ ಎರಡು ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

 ಹದಿನಾಲ್ಕು ಜನರ ಪೈಕಿ ಕೆಲವರ ಮೇಲೆ ರೌಡಿ ಶೀಟರ್ ಕೇಸ್ ಇದ್ದರೆ, ಇನ್ನು ಕೆಲವರು ದರೋಡೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಎಂತಹವರನ್ನು ಭಯ ಹುಟ್ಟಿಸುವಂತಿದೆ ಖದೀಮರ ತಂಡ.

Follow Us:
Download App:
  • android
  • ios