ಸಿಗ್ನಲ್‌ಮುಕ್ತ ಕಾರಿಡಾರ್‌ ಕಾಮಗಾರಿ ನಡೆಯುತ್ತಿರುವ ಪಶ್ಚಿಮ ಕಾರ್ಡ್‌ ರಸ್ತೆಯ ಸವೀರ್ಸ್‌ ರಸ್ತೆಗಳ ಗುಂಡಿಗಳು ವಾಹನ ಸವಾರರಿಗೆ ನರಕದ ದರ್ಶನ ಮಾಡಿಸುತ್ತಿವೆ. ಹೆಜ್ಜೆ ಹೆಜ್ಜೆಗೂ ಸಿಗುವ ಗುಂಡಿಗಳನ್ನು ಹತ್ತಿಳಿಯುವ ವಾಹನಗಳು ಅವಧಿಗೂ ಮುನ್ನವೇ ರಿಪೇರಿಗೆ ಬರುವ ಪರಿಸ್ಥಿತಿಗೆ ಸಿಲುಕುವಂತಾಗಿದೆ ಎಂದು ದ್ವಿಚಕ್ರ ವಾಹನ ಸವಾರರು ಆರೋಪಿಸುತ್ತಾರೆ.

ಸಂಪತ್‌ ತರೀಕೆರೆ

ಬೆಂಗಳೂರು (ಅ.20): ಸಿಗ್ನಲ್‌ಮುಕ್ತ ಕಾರಿಡಾರ್‌ ಕಾಮಗಾರಿ ನಡೆಯುತ್ತಿರುವ ಪಶ್ಚಿಮ ಕಾರ್ಡ್‌ ರಸ್ತೆಯ ಸವೀರ್ಸ್‌ ರಸ್ತೆಗಳ ಗುಂಡಿಗಳು ವಾಹನ ಸವಾರರಿಗೆ ನರಕದ ದರ್ಶನ ಮಾಡಿಸುತ್ತಿವೆ. ಹೆಜ್ಜೆ ಹೆಜ್ಜೆಗೂ ಸಿಗುವ ಗುಂಡಿಗಳನ್ನು ಹತ್ತಿಳಿಯುವ ವಾಹನಗಳು ಅವಧಿಗೂ ಮುನ್ನವೇ ರಿಪೇರಿಗೆ ಬರುವ ಪರಿಸ್ಥಿತಿಗೆ ಸಿಲುಕುವಂತಾಗಿದೆ ಎಂದು ದ್ವಿಚಕ್ರ ವಾಹನ ಸವಾರರು ಆರೋಪಿಸುತ್ತಾರೆ. ಮೈಸೂರು ರಸ್ತೆಯಿಂದ ವಿಜಯ ನಗರ ಮಾರ್ಗವಾಗಿ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ 8 ಕಿ.ಮೀ. ಉದ್ದದ ಪಶ್ಚಿಮ ಕಾರ್ಡ್‌ ರಸ್ತೆಯನ್ನು ಸಿಗ್ನಲ್‌ಮುಕ್ತ ಕಾರಿಡಾರ್‌ ಮಾಡಲು ಮೇಲ್ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

ಹೀಗಾಗಿ ಸವೀರ್ಸ್‌ ರಸ್ತೆಗಳ ಕಡೆಗೆ ಹೆಚ್ಚಿನ ಗಮನ ಕೊಡದ ಬಿಬಿಎಂಪಿ ಈ ರಸ್ತೆಗಳ ಗುಂಡಿಗಳನ್ನು ಮರೆತಿದ್ದು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ. ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಕೇವಲ 5 ಕಿ.ಮೀ. ಅಂತರದಲ್ಲಿ 2 ಗ್ರೇಡ್‌ ಸೆಪರೇಟರ್‌ ಮತ್ತು 5 ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ಮಾಗಡಿ ರಸ್ತೆ ಟೋಲ್‌ಗೇಟ್‌ ಗ್ರೇಡ್‌ ಸೆಪರೇಟರ್‌, ಶಿವನಗರ ಜಂಕ್ಷನ್‌ ಮೇಲ್ಸೇತುವೆ, ಮಂಜುನಾಥ ನಗರ ಮೇಲ್ಸೇತುವೆ, ನವರಂಗ್‌ ಸಮೀಪದ ಗ್ರೇಡ್‌ ಸೆಪರೇಟರ್‌, ರಾಜಾಜಿನಗರ 1ನೇ ಬ್ಲಾಕ್‌ ಮೇಲ್ಸೇತುವೆ, ಮಹಾಲಕ್ಷ್ಮಿ ಲೇಔಟ್‌ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ.

Bengaluru: 3 ಸಚಿವರ ಮನೆ ಹಾದಿಯೇ ಕೆಸರು ಗದ್ದೆ!

ತಿಂಗಳಿನಿಂದ ಮೇಲ್ಸೇತುವೆ ಬಂದ್‌: ಸುಮಾರು .20 ಕೋಟಿ ವೆಚ್ಚದ ಬಸವೇಶ್ವರ ನಗರ 1ನೇ ಮೈನ್‌ ಜಂಕ್ಷನ್‌ ಮೇಲ್ಸೇತುವೆ ಮತ್ತು .28 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾ 72ನೇ ಕ್ರಾಸ್‌ ರಸ್ತೆ ಮೇಲ್ಸೇತುವೆ ಕಾಮಗಾರಿ ನಿರ್ಮಾಣ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ ಶಿವನಗರ ಮೇಲ್ಸೇತುವೆಯನ್ನು ಕಳೆದೊಂದು ತಿಂಗಳಿನಿಂದ ವಾಹನಗಳ ಓಡಾಟಕ್ಕೆ ಬಂದ್‌ ಮಾಡಿದ್ದು, ಅನಿವಾರ್ಯವಾಗಿ ಸವೀರ್ಸ್‌ ರಸ್ತೆಯಲ್ಲೇ ಸಂಚರಿಸಬೇಕಿದೆ.

ಯಶವಂತಪುರ ಕಡೆಯಿಂದ ವಿಜಯ ನಗರದ ಕಡೆಗೆ ಸಾಗುವ ಮಾರ್ಗದಲ್ಲಿ ಶಿವನಗರ ಜಂಕ್ಷನ್‌ನಿಂದ ಮಾಗಡಿ ರಸ್ತೆ ಟೋಲ್‌ಗೇಟ್‌ ಗ್ರೇಡ್‌ ಸೆಪರೇಟರ್‌ವರೆಗೂ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಮೆಟ್ರೋ ನಿಲ್ದಾಣ ಹೊಸಹಳ್ಳಿ ವರೆಗಿನ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ರಸ್ತೆ ಗುಂಡಿಗಳಿವೆ. ವಾಹನ ಸವಾರರು ಸ್ವಲ್ಪ ನಿರ್ಲಕ್ಷ್ಯಿಸಿದರೂ ಅಪಾಯ ಕಟ್ಟಿಟ್ಟಬುತ್ತಿ. ಈ ಸವೀರ್ಸ್‌ ರಸ್ತೆಯಲ್ಲಿ ಈಗಾಗಲೇ ಹಲವರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿರುವ ಘಟನೆಗಳು ಸಹ ನಡೆದಿವೆ. ಜೀವಕ್ಕೆ ಹಾನಿಯಾಗುವ ಘಟನೆಗಳು ನಡೆಯುವುದಕ್ಕೂ ಮುನ್ನವೇ ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಶಿವನಗರದ ನಿವಾಸಿ ಕೆ.ಗೋಪಾಲ್‌ ಒತ್ತಾಯಿಸಿದ್ದಾರೆ.

ಮೇಲ್ಸೇತುವೆ ನಿರ್ಮಾಣಕ್ಕೆ ಮಳೆ ಅಡ್ಡಿ: ಪಶ್ಚಿಮ ಕಾರ್ಡ್‌ ರಸ್ತೆಯು ಮೈಸೂರು ರಸ್ತೆ-ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಜೊತೆಗೆ ಟೋಲ್‌ಗೇಟ್‌ ಬಳಿಯಲ್ಲಿ ಮಾಗಡಿ ರಸ್ತೆಗೂ ಹೊಂದಿಕೊಂಡಿರುವುದರಿಂದ ನಿತ್ಯವೂ ಹತ್ತಾರು ಸಾವಿರ ವಾಹನಗಳು ಓಡಾಡುತ್ತಿರುತ್ತವೆ. ಹಾಗಾಗಿಯೇ ಈ ರಸ್ತೆಯನ್ನು ಸಿಗ್ನಲ್‌ ಮುಕ್ತ ಮಾಡಬೇಕೆಂದು 5 ಮೇಲ್ಸೇತುವೆಗಳು ಮತ್ತು 2 ಗ್ರೇಡ್‌ ಸೆಪರೇಟರ್‌ ನಿರ್ಮಾಣಕ್ಕೆ ಬಿಬಿಎಂಪಿ ಕೈ ಹಾಕಿತ್ತು. ಆದರೆ, ನಿಗದಿತ ಅವಧಿಗೆ ಬಸವೇಶ್ವರ ನಗರ 1ನೇ ಮೈನ್‌ ಜಂಕ್ಷನ್‌ ಮೇಲ್ಸೇತುವೆ, ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾ 72ನೇ ಕ್ರಾಸ್‌ ರಸ್ತೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಮಳೆ ಅಡ್ಡಿಯಾಗಿದೆ. ಸವೀರ್ಸ್‌ ರಸ್ತೆಯಲ್ಲಿ ಸುಮಾರು 1 ಕಿ.ಮೀನಷ್ಟುದೂರದವರೆಗೆ ನೂರಾರು ರಸ್ತೆ ಗುಂಡಿಗಳಿದ್ದು, ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ.

ಡಾ.ರಾಜ್‌ ರಸ್ತೆ ದುರಸ್ತಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಸೂಚನೆ

ಬಸವೇಶ್ವರ ನಗರ 1ನೇ ಮೈನ್‌ ಜಂಕ್ಷನ್‌ ಮೇಲ್ಸೇತುವೆ ಮತ್ತು ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾ 72ನೇ ಕ್ರಾಸ್‌ ರಸ್ತೆ ಮೇಲ್ಸೇತುವೆ ನಿರ್ಮಾಣ ಪ್ರಗತಿಯಲ್ಲಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮಳೆ ನಿಂತ ಕೂಡಲೇ ಈ ಮೇಲ್ಸೇತುವೆ ಕೆಳಗಿರುವ ಸವೀರ್ಸ್‌ ರಸ್ತೆಯ ಗುಂಡಿಗಳನ್ನು ಮುಚ್ಚುತ್ತೇವೆ.
-ಲೋಕೇಶ್‌, ಮುಖ್ಯ ಅಭಿಯಂತರ (ಯೋಜನೆ), ಬಿಬಿಎಂಪಿ.