ರಸ್ತೆ ಮೇಲೆ ಬಿದ್ದಿರುವ ಬೃಹದಾಕಾರದ ಪೈಪ್‌ಗಳು, ಹೆಜ್ಜೆಗೊಂದು ಸಿಗುವ ಗುಂಡಿ, ಇಕ್ಕೆಲುಗಳಲ್ಲಿ ಕಸದ ರಾಶಿಗಳು, ವರ್ಷದಿಂದ ನಡೆಯುತ್ತಿರುವ ರಸ್ತೆ ಅಗಲೀಕಣ ಕಾಮಗಾರಿ. ತುಸು ದೂರ ಸಾಗಲು ಪರದಾಡುವ ವಾಹನ ಸವಾರರು. ಇದು ರಾಜ್ಯದ ಪ್ರಮುಖ ಸಚಿವರಾದ ಬಿ.ಸಿ.ಪಾಟೀಲ್‌, ಶಶಿಕಲಾ ಜೊಲ್ಲೆ, ಶಿವರಾಮ ಹೆಬ್ಬಾರ್‌ ಸೇರಿದಂತೆ ಮೂವರು ಸಚಿವರಿರುವ ಬಂಗಲೆಯ ಜಯಮಹಲ್‌ ರಸ್ತೆಯ ಅವ್ಯವಸ್ಥೆ.

ಸಂಪತ್‌ ತರೀಕೆರೆ

ಬೆಂಗಳೂರು (ಅ.19): ರಸ್ತೆ ಮೇಲೆ ಬಿದ್ದಿರುವ ಬೃಹದಾಕಾರದ ಪೈಪ್‌ಗಳು, ಹೆಜ್ಜೆಗೊಂದು ಸಿಗುವ ಗುಂಡಿ, ಇಕ್ಕೆಲುಗಳಲ್ಲಿ ಕಸದ ರಾಶಿಗಳು, ವರ್ಷದಿಂದ ನಡೆಯುತ್ತಿರುವ ರಸ್ತೆ ಅಗಲೀಕಣ ಕಾಮಗಾರಿ. ತುಸು ದೂರ ಸಾಗಲು ಪರದಾಡುವ ವಾಹನ ಸವಾರರು. ಇದು ರಾಜ್ಯದ ಪ್ರಮುಖ ಸಚಿವರಾದ ಬಿ.ಸಿ.ಪಾಟೀಲ್‌, ಶಶಿಕಲಾ ಜೊಲ್ಲೆ, ಶಿವರಾಮ ಹೆಬ್ಬಾರ್‌ ಸೇರಿದಂತೆ ಮೂವರು ಸಚಿವರಿರುವ ಬಂಗಲೆಯ ಜಯಮಹಲ್‌ ರಸ್ತೆಯ ಅವ್ಯವಸ್ಥೆ.

ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಸಂಚಾರ ದಟ್ಟಣೆ ನಿವಾರಣೆಗೆಂದು ಮೇಕ್ರಿ ವೃತ್ತದಿಂದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡು ವರ್ಷ ಕಳೆದಿದ್ದರೂ ಯೋಜನೆ ಪೂರ್ಣಗೊಂಡಿಲ್ಲ. ಒಂದು ಬದಿಯಲ್ಲಿ ಕಾಮಗಾರಿ ನಡೆದಿದ್ದು, ಮತ್ತೊಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ವಾಹನ ಸಂಚಾರಕ್ಕೆ ಅವಕಾಶವಿರುವ ರಸ್ತೆ ಸಂಪೂರ್ಣ ಗುಂಡಿಗಳಿಂದ ಆವೃತವಾಗಿದ್ದು, ಮಳೆ ಸುರಿದಾಗ ಈ ರಸ್ತೆ ಬೃಹತ್‌ ಗುಂಡಿಗಳಿರುವ ಕೆಸರು ಗದ್ದೆಯಂತಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಚಿಂತನೆ: ಸಚಿವ ಎಂಟಿಬಿ ನಾಗರಾಜ್‌

ಬಳ್ಳಾರಿ ರಸ್ತೆ ಮತ್ತು ಮೇಕ್ರಿ ವೃತ್ತದಿಂದ ದಂಡು ರೈಲ್ವೆ ನಿಲ್ದಾಣದವರೆಗೆ ರಸ್ತೆ ವಿಸ್ತರಣೆಗೆ 2019-20ರಲ್ಲಿಯೇ ಯೋಜನೆ ರೂಪಿಸಲಾಗಿತ್ತು. ಮೆ!ಜೆ.ಎಂ.ಸಿ.ಕನ್ಸ್‌ಟ್ರಕ್ಷನ್ಸ್‌ ಪ್ರೈ.ಲಿ. ಎಂಬ ಗುತ್ತಿಗೆ ಸಂಸ್ಥೆಗೆ 2020-21ನೇ ಸಾಲಿನಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಈ ಯೋಜನೆಗೆ ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ .52.81 ಕೋಟಿ ಮೀಸಲಿಡಲಾಗಿತ್ತು. ಅದಲ್ಲದೇ 9 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಕಾಲಾವಧಿ ನಿಗದಿಪಡಿಸಲಾಗಿತ್ತು. ಆದರೆ ಈವರೆಗೂ ಯೋಜನೆಯ ಶೇ.50ರಷ್ಟುಕಾಮಗಾರಿ ಮುಗಿದಿಲ್ಲ. ಮೇಕ್ರಿ ವೃತ್ತದಿಂದ ಸ್ನೋ ಸಿಟಿ ವರೆಗೆ ಒಂದು ಬದಿಯಲ್ಲಿ ಮಾತ್ರ ಪುಟ್‌ಪಾತ್‌ ನಿರ್ಮಿಸಲಾಗಿದೆ.

ಜಯಮಹಲ್‌ ರಸ್ತೆಯು ಬಳ್ಳಾರಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಈ ರಸ್ತೆ ಕಾಮಗಾರಿಯಿಂದಾಗಿ ಮೇಕ್ರಿ ವೃತ್ತದಿಂದ ಶಿವಾಜಿ ನಗರದ ಕಡೆಗೆ ಸಾಗುವ ಮಾರ್ಗದ ಎಡಬದಿಯಲ್ಲಿ ಸುಮಾರು ನೂರು ಮೀಟರ್‌ನಷ್ಟುರಸ್ತೆಯನ್ನು ಕಾಮಗಾರಿ ಸಾಮಗ್ರಿಗಳನ್ನು ಇಡಲು ಬಳಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಪೈಪ್‌ಗಳನ್ನು ಸಂಗ್ರಹಿಸಿಡಲಾಗಿದೆ. ಹೀಗಾಗಿ, ಒಂದೇ ರಸ್ತೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದಟ್ಟಣೆ ಸಮಯದಲ್ಲಿ ವಾಹನ ಸಂಚಾರ ಆತಂಕ ಮೂಡಿಸುತ್ತಿದೆ. ಅಲ್ಲದೇ, ಈ ರಸ್ತೆಯುದ್ದಕ್ಕೂ ಗುಂಡಿಗಳು ಬಾಯ್ತೆರೆದಿದ್ದು, ವಾಹನ ಸವಾರರಿಗೆ ನರಕದ ದರ್ಶನ ಮಾಡಿಸುತ್ತಿವೆ.

ಕೆಸರು ಗದ್ದೆಯಾದ ರಸ್ತೆ: ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಇರುವ ರಸ್ತೆಯ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ್ದು ಬಿಬಿಎಂಪಿ ಜವಾಬ್ದಾರಿ. ಆದರೆ, ಕಳೆದ ಆರೇಳು ತಿಂಗಳಿನಿಂದ ಇಲ್ಲಿ ಒಂದೇ ಒಂದು ಗುಂಡಿ ಮುಚ್ಚಿಲ್ಲ. ಹೀಗಾಗಿ ಪ್ರತಿ ಮಳೆಗೂ ಗುಂಡಿಗಳು ದೊಡ್ಡವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಜೊತೆಗೆ ಪೈಪ್‌ಲೈನ್‌ ಅಳವಡಿಸಲು ಜೆ.ಸಿ.ರಸ್ತೆ ಪೊಲೀಸ್‌ ಠಾಣೆ ವೃತ್ತದ ಸಮೀಪ ರಸ್ತೆ ಬದಿಯಲ್ಲಿ ತೆಗೆದಿರುವ ಗುಂಡಿಯ ಮಣ್ಣು ಮಳೆಯಿಂದ ರಸ್ತೆಗೆ ಬಂದಿದ್ದು ಕೆಸರು ಗದ್ದೆಯನ್ನೇ ಸೃಷ್ಟಿಸಿದೆ.

ಮೇಸ್ತ ಕೇಸಲ್ಲಿ ಸುಳ್ಳು: ಬಿಜೆಪಿಗರ ವಿರುದ್ಧ ಕೇಸ್‌ ಹಾಕಿ

ದಂಡು ರೈಲ್ವೆ ನಿಲ್ದಾಣದಿಂದ ಸಾಗಿ ರೈಲ್ವೇ ಅಂಡರ್‌ ಪಾಸ್‌ನಿಂದ ಮೇಕ್ರಿ ವೃತ್ತದ ಕಡೆಗೆ ಸಾಗುವ ರಸ್ತೆಯ ಎಡಬದಿ ತೆಗೆದಿರುವ ಗುಂಡಿಯೂ ಸಹ ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಕೇವಲ ಐದಾರು ಅಡಿ ಜಾಗದಲ್ಲಿ ದ್ವಿಚಕ್ರ ವಾಹನಗಳು, ಕಾರು, ಆಟೋಗಳು, ಲಾರಿಗಳು ಸಹ ಓಡಾಡಬೇಕಾದ ಅನಿವಾರ್ಯತೆ ಇದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ರಸ್ತೆ ಕಾಮಗಾರಿ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಸಂಬಂಧಪಟ್ಟಎಂಜಿನಿಯರ್‌ಗಳಿಗೆ ಕರೆ ಮಾಡಿದರೂ ಮಾಹಿತಿ ನೀಡಲು ಯಾರೂ ತಯಾರಿಲ್ಲ. ತಮ್ಮ ಜವಾಬ್ದಾರಿಯನ್ನು ಮೇಲಾಧಿಕಾರಿಗಳ ಹೆಗಲಿಗೆ ವರ್ಗಾಯಿಸಿ ನುಣುಚಿಕೊಂಡರು!