ಲೋಕಸಭೆ ಚುನಾವಣೆ 2024: ಮನೆಯಿಂದ ಮತದಾನದ ಹಕ್ಕು ತಪ್ಪಿಸಿದರೆ ಮತ್ತೆ ಅವಕಾಶ ಇಲ್ಲ
85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕರಿಗೆ ಏ.13ರ ಶನಿವಾರದಿಂದ ಅಂಚೆ ಮತದಾನ ಆರಂಭಗೊಳ್ಳಲಿದೆ. ನಗರದ ಮೂರು ಲೋಕಸಭಾ ಕ್ಷೇತ್ರಗಳಿಂದ 85 ವರ್ಷ ಮೇಲ್ಪಟ್ಟ 6,206 ಮತದಾರರು ಹಾಗೂ 201 ಅಂಗವಿಕರ ಮತದಾರರು ಅಂಚೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಬೆಂಗಳೂರು(ಏ.13): ಮನೆಯಿಂದ ಅಂಚೆ ಮತದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡವರ ಮನೆಗೆ ಏ.13ರಿಂದ ಏ.18ರವರೆಗೆ ಎರಡು ಬಾರಿ ಮಾತ್ರ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕರಿಗೆ ಏ.13ರ ಶನಿವಾರದಿಂದ ಅಂಚೆ ಮತದಾನ ಆರಂಭಗೊಳ್ಳಲಿದೆ. ನಗರದ ಮೂರು ಲೋಕಸಭಾ ಕ್ಷೇತ್ರಗಳಿಂದ 85 ವರ್ಷ ಮೇಲ್ಪಟ್ಟ 6,206 ಮತದಾರರು ಹಾಗೂ 201 ಅಂಗವಿಕರ ಮತದಾರರು ಅಂಚೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತಪೆಟ್ಟಿಗೆಗಳೊಂದಿಗೆ ಪ್ರತಿ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಭೇಟಿ ನೀಡುವ ಬಗ್ಗೆ ಮತದಾರರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿರುತ್ತದೆ. ಒಂದು ವೇಳೆ ಮೊದಲ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಮನೆಯಲ್ಲಿ ಲಭ್ಯವಾಗದಿದ್ದರೆ ಎರಡನೇ ಬಾರಿ ಮಾಹಿತಿ ನೀಡಿ ಭೇಟಿ ನೀಡಲಾಗುತ್ತದೆ. ಆದರೂ ಮತದಾರರು ಲಭ್ಯವಾಗದಿದ್ದರೆ ಮತ್ತೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ.
ಲೋಕಸಭೆ ಚುನಾವಣೆ 2024: ಮನೆಯಿಂದ ಮತದಾನಕ್ಕೆ ಹಿರಿಯರ ನಿರಾಸಕ್ತಿ..!
ಇನ್ನು ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡವು ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸಲಾಗುತ್ತದೆ. ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ವೀಡಿಯೋಗ್ರಫಿ ಮೂಲಕ ಸೆರೆಹಿಡಿಯಲಾಗುತ್ತದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.