ರೈತರ ತರಕಾರಿ ವಿದೇಶಕ್ಕೂ ಹೊತ್ತೊಯ್ಯಲಿದ್ದಾನೆ ಅಂಚೆಯಣ್ಣ..!
ತರಕಾರಿಯನ್ನು ದೇಶ, ವಿದೇಶದಾದ್ಯಂತ ಮನೆ ಬಾಗಲಿಗೆ ತಲುಪಿಸುವ ಅಂಚೆ ಇಲಾಖೆ, ನೀವು ಬೆಳೆದ ಟೊಮೆಟೋ, ಈರುಳ್ಳಿ ಮನೆಯಿಂದಲೇ ವಿದೇಶಕ್ಕೂ ರಫ್ತು ಮಾರಾಟ ಮಾಡಿ.
ಸೋಮರಡ್ಡಿ ಅಳವಂಡಿ
ಕೊಪ್ಪಳ(ಆ.21): ದೇಶದ ಮಾರುಕಟ್ಟೆಯಲ್ಲಿಯೇ ಕೇಂದ್ರ ಸರ್ಕಾರ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದು, ಸ್ಥಳೀಯವಾಗಿಯೇ ರೈತರು ಬೆಳೆಯುವ ತರಕಾರಿ, ಸಣ್ಣ ಕೈಗಾರಿಕಾ ಉತ್ಪಾದನೆಗಳನ್ನು ದೇಶಾದ್ಯಂತ ಹಾಗೂ ವಿದೇಶಗಳಿಗೂ ಅಂಚೆ ಇಲಾಖೆಯೇ ಹೊತ್ತೊಯ್ಯಲಿದೆ.
ಈಗಾಗಲೇ ದೇಶಾದ್ಯಂತ ಪ್ರಾರಂಭವಾಗಿರುವ ಈ ಸೇವೆ ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದಲ್ಲೂ ಆ. 21ರಿಂದ ಲಭ್ಯವಾಗಲಿದ್ದು, ಇದಕ್ಕಾಗಿ ಕೊಪ್ಪಳದಲ್ಲೂ ‘ಡಾಕ್ ಘರ್ ನಿರ್ಯಾತ ಕೇಂದ್ರ’ (ಅಂಚೆ ರಫ್ತು ಕೇಂದ್ರ) ಪ್ರಾರಂಭವಾಗಲಿದೆ.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲೂ ಅಂಚೆ ಇಲಾಖೆಯ 'ಪಾರ್ಸೆಲ್ ಆನ್ ವೀಲ್ಸ್' ಸೇವೆ ಆರಂಭ
ಈ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿಯೇ ಆಗಲಿದೆ. ರೈತರು ತಮ್ಮ ಉತ್ಪಾದನೆಗಳನ್ನು ಮನೆಯಲ್ಲೇ ಕುಳಿತು ವಿದೇಶದಲ್ಲೂ ಮಾರಾಟ ಮಾಡಬಹುದಾಗಿದೆ. ಅದನ್ನು ಅಂಚೆ ಇಲಾಖೆ ಹೊತ್ತೊಯ್ದು ಮನೆ ಬಾಗಲಿಗೆ ತಲುಪಿಸಲಿದೆ.
ದೇಶಾದ್ಯಂತ 1001 ಕೇಂದ್ರಗಳಲ್ಲಿ ಹಾಗೂ ರಾಜ್ಯದಲ್ಲಿ 73 ಅಂಚೆ ಇಲಾಖೆಯಲ್ಲಿ ಈ ಸೇವೆಗೆ ಅವಕಾಶವಿದೆ. ಈ ಮೂಲಕ ರೈತರು, ಸಣ್ಣ ಕೈಗಾರಿಕೆಗಳ ಉತ್ಪಾದಕರು ತಮ್ಮ ಉತ್ಪಾದನೆಯನ್ನು ದೇಶ, ಜಗತ್ತಿನಾದ್ಯಂತ ಮೂಲ ಮೂಲೆಗೆ ರಫ್ತು ಮಾಡುವ ಅವಕಾಶ ದೊರೆಯಲಿದೆ.
ಮಾರುಕಟ್ಟೆಯ ಕ್ರಾಂತಿ:
ಅಂಚೆ ಇಲಾಖೆಯಲ್ಲಿ ಇದಕ್ಕಾಗಿ ಉಚಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಹೀಗೆ ನೋಂದಾಯಿಸಿಕೊಂಡವರು ಮನೆಯಲ್ಲಿಯೇ ಕುಳಿತು ತಮ್ಮ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಬಹುದಾಗಿದೆ. ಹೀಗೆ ಮಾರಾಟ ಮಾಡಿದ ಮಾಹಿತಿ ತನ್ನಿಂದ ತಾನೇ ಸಂಬಂಧಪಟ್ಟಅಂಚೆ ಇಲಾಖೆಗೆ ರವಾನೆಯಾಗುತ್ತದೆ. ಹೀಗೆ ಮಾಹಿತಿ ಆಧರಿಸಿ, ಅಂಚೆಯಣ್ಣ ನಿಮ್ಮ ಮನೆ ಬಾಗಿಲಿಗೆ ಬಂದು ಪ್ಯಾಕ್ ಮಾಡಿದ ಉತ್ಪನ್ನಗಳನ್ನು ಸಂಗ್ರಹಿಸಿ, ತಲುಪಿಸಿಬೇಕಾದ ಸ್ಥಳಕ್ಕೆ ಕಳುಹಿಸಿಕೊಡುತ್ತಾನೆ. ಅದು ದೇಶದ ಒಳಗೆ ಆಗಿದ್ದರೂ ಸರಿ, ವಿದೇಶದಲ್ಲಿಯೇ ಆಗಿದ್ದರೂ ಸರಿ, ಅದನ್ನು ತಲುಪಿಸುವ ಹೊಣೆ ಆತನದು. ಇದಕ್ಕಾಗಿ ಕೇಂದ್ರ ಸರ್ಕಾರ ಅನ್ಯ ದೇಶಗಳ ಅಂಚೆ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.
ಸಣ್ಣ ಕೈಗಾರಿಕಾ ಉತ್ಪನ್ನಗಳು, ರೈತರು ಬೆಳೆದ ತರಕಾರಿಗಳು, ಗುಡಿ ಕೈಗಾರಿಕಾ ವಸ್ತುಗಳು ಸೇರಿದಂತೆ ಯಾವುದನ್ನಾದರೂ ಸರಿ, ಎಲ್ಲಿ ಬೇಕಾದರೂ ಕಳುಹಿಸಿಕೊಡಬಹುದಾಗಿದೆ. ಉದಾಹರಣೆಗೆ ಕಿನ್ನಾಳ ಕಲೆಯ ಕೆಲವೊಂದು ಸಾಮಗ್ರಿಗಳನ್ನು ನೀವು ವಿದೇಶಿಗರಿಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಾದರೆ ಅವುಗಳನ್ನು ಅಂಚೆ ಇಲಾಖೆ ಮೂಲಕ ಕಳುಹಿಸಿಕೊಡಬಹುದು. ಮಾವು ಕೂಡ ಇದೇ ರೀತಿ ಕಳುಹಿಸಿಕೊಡಬಹುದು.
ಈ ಮೂಲಕ ರೈತರ ಉತ್ಪನ್ನಗಳಿಗೆ ಹಾಗೂ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಯ ಉತ್ಪನ್ನಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಒದಗಿಸಿದಂತಾಗುತ್ತದೆ. ರಫ್ತು ಎಂದರೆ ಕೇವಲ ದೊಡ್ಡ ಕಂಪನಿಯವರು ಮಾತ್ರ ಮಾಡಬಹುದು ಎನ್ನುವುದನ್ನು ಸರಳಗೊಳಿಸಿ, ಸಾಮಾನ್ಯರು ರಫ್ತು ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ವೆಚ್ಚ ತೀರಾ ಕಡಿಮೆಯಾಗುತ್ತದೆ.
ಮನೆ ಬಾಗಿಲಿಗೆ ಬಂದು ಪಾರ್ಸೆಲ್ ಒಯ್ಯುವ ವಾಹನ ಸೇವೆ ವಿಸ್ತರಣೆ
ರೈತರ ಉತ್ಪನ್ನಗಳು, ಸಣ್ಣ ಕೈಗಾರಿಕೆಗಳ ಉತ್ಪನ್ನಗಳು ಸೇರಿದಂತೆ ಯಾವುದೇ ಉತ್ಪನ್ನಗಳನ್ನು ದೇಶ, ವಿದೇಶಕ್ಕೂ ಕಳುಹಿಸಿಕೊಡುವ ವ್ಯವಸ್ಥೆ ಜಾರಿಯಾಗಿದೆ. ಕೊಪ್ಪಳದಲ್ಲೂ ರಫ್ತು ಕೇಂದ್ರ ಪ್ರಾರಂಭವಾಗಲಿದೆ. ಇದರ ಸದುಪಯೋಗವಾಗಲಿ ಎಂದು ಕೊಪ್ಪಳ ಅಂಚೆ ಇಲಾಖೆ ಮಾರುಕಟ್ಟೆ ಮ್ಯಾನೇಜರ್ ಅಡಿವೆಪ್ಪ ಹೇಳಿದ್ದಾರೆ.
ಮಾರುಕಟ್ಟೆ ವ್ಯವಸ್ಥೆಯಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ. ರೈತರ ಉತ್ಪನ್ನ ಸೇರಿದಂತೆ ಸಣ್ಣ ಕೈಗಾರಿಕೆಗಳ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅಂಚೆ ಇಲಾಖೆ ಒದಗಿಸಲಿದೆ, ತಲುಪಿಸುವ ಹೊಣೆ ಹೊರಲಿದೆ. ಯಾರು ಬೇಕಾದರೂ ರಫ್ತು ಮಾಡುವುದಕ್ಕೆ ಅವಕಾಶ ದೊರೆಯಲಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.