ಬೆಂಗಳೂರು [ಡಿ.31]:  ಇತ್ತೀಚಿಗೆ ಬೆಳಕಿಗೆ ಬಂದಿದ್ದ ‘ನೆದರ್‌ಲ್ಯಾಂಡ್‌ ಡ್ರಗ್ಸ್‌ ಜಾಲ’ದ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ದಂಧೆಯಲ್ಲಿ ಶಾಮೀಲಾಗಿದ್ದ ಅಂಚೆ ಇಲಾಖೆಯ ನಾಲ್ವರು ನೌಕರರನ್ನು ಸೆರೆ ಹಿಡಿದಿದೆ.

ಶ್ರೀರಾಮಪುರದ ಎಚ್‌.ಸುಬ್ಬ, ದೇವರಚಿಕ್ಕನಹಳ್ಳಿ ರಮೇಶ್‌ ಕುಮಾರ್‌, ಆರ್‌.ಟಿ.ನಗರದ ಸೈಯದ್‌ ಅಹಮ್ಮದ್‌ ಹಾಗೂ ವಿಜಯರಾಜನ್‌ ಬಂಧಿತರಾಗಿದ್ದು, ಆರೋಪಿಗಳಿಂದ 20 ಲಕ್ಷ ರು. ಮೌಲ್ಯದ 339 ಎಕ್ಸ್‌ಟೆನ್ಸಿ ಮಾತ್ರೆಗಳು, 10 ಗ್ರಾಂ ಎಂಡಿಎಎ ಕ್ರಿಸ್ಟೆಲ್‌, 30 ಗ್ರಾಂ ತೂಕದ ಬ್ರೌನ್‌ ಶುಗರ್‌ ಹಾಗೂ ವಿದೇಶಗಳ ಪೋಸ್ಟ್‌ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದೆ ಅಂಚೆ ಮೂಲಕ ವಿದೇಶದಿಂದ ಡ್ರಗ್ಸ್‌ ತರಿಸಿಕೊಂಡು ನಗರದಲ್ಲಿ ವ್ಯವಹರಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳು ಪ್ರತ್ಯೇಕವಾಗಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಡ್ರಗ್ಸ್‌ ಪೂರೈಕೆ ಜಾಲದ ಹಿಂದಿರುವ ಅಂಚೆ ಇಲಾಖೆಯ ನೌಕರರ ಪಾತ್ರ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ಸಹಕಾರ: ಡಾರ್ಕ್ನೆಟ್‌ ಮೂಲಕ ಡ್ರಗ್ಸ್‌ ಪೆಡ್ಲರ್‌ಗಳು, ವಿದೇಶದಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ನೆದರ್‌ಲಾಂಡ್‌, ಡೆನ್ಮಾರ್ಕ್ ಹಾಗೂ ಯುಎಸ್‌ಎ ರಾಷ್ಟ್ರಗಳ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರಿನ ಪೆಡ್ಲರ್‌ಗಳು, ವಿದೇಶಿ ದಂಧೆಕೋರರಿಗೆ ಬಿಟ್‌ಕಾಯಿನ್‌ ಮೂಲಕ ಹಣ ಪಾವತಿಸಿ ಡ್ರಗ್ಸ್‌ ಆಮದು ಮಾಡಿಕೊಳ್ಳುತ್ತಿದ್ದರು. ಸದರಿ ವ್ಯಕ್ತಿಗಳಿಗೆ ಅಂಚೆ ಮೂಲಕ ಡ್ರಗ್ಸ್‌ ಸರಬರಾಜಾಗುತ್ತಿತ್ತು. ಈ ದಂಧೆಕೋರರ ಜತೆ ಹಣದಾಸೆಗೆ ಅಂಚೆ ಇಲಾಖೆಯ ನಾಲ್ವರು ನೌಕರರು ಕೈ ಜೋಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮದ್ಯದ ನಶೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯ ಮಿಡ್‌ ನೈಟ್‌ ರಂಪಾಟ...!...

ವಿದೇಶದಿಂದ ಅಂಚೆ ಮೂಲಕ ಬರುವ ವಸ್ತುಗಳು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳ ಪರಿಶೀಲನೆ ಬಳಿಕ ಪ್ರಧಾನ ಅಂಚೆ ಕಚೇರಿಗೆ ಬರುತ್ತಿದ್ದವು. ಅಲ್ಲಿಂದ ಚಾಮರಾಜಪೇಟೆಯ ಕಚೇರಿಗೆ ಹಸ್ತಾಂತರವಾಗುತ್ತಿದ್ದವು. ಈ ಕಚೇರಿಯಲ್ಲಿ ವಿದೇಶಗಳಿಂದ ಬರುವ ಪೋಸ್ಟ್‌ ಹಾಗೂ ಪಾರ್ಸಲ್‌ಗಳನ್ನು ಪರಿಶೀಲಿಸುವ ಹುದ್ದೆಯಲ್ಲಿ ರಮೇಶ್‌ , ಸುಬ್ಬ, ಸೈಯದ್‌ ಹಾಗೂ ವಿಜಯರಾಜನ್‌ ಕಾರ್ಯನಿರ್ವಹಿಸುತ್ತಿದ್ದರು. ರಿಜಿಸ್ಟ್ರರ್‌್ಡ ಪಾರ್ಸಲ್‌ಗಳನ್ನು ನಿಗದಿತ ವ್ಯಕ್ತಿಗೆ ಕಳುಹಿಸಿದ ಬಳಿಕ ಅವರು, ಅನ್‌ ರಿಜಿಸ್ಟ್ರರ್‌್ಡ ಪಾರ್ಸಲ್‌ಗಳನ್ನು ಸೂಕ್ತವಾಗಿ ಪರಿಶೀಲಿಸಿ ವ್ಯಕ್ತಿಗೆ ಪೂರೈಸಬೇಕಿತ್ತು.

ಆದರೆ ಕವರ್‌ಗಳ ಬಣ್ಣದ ಮೇಲೆ ಡ್ರಗ್ಸ್‌ ಎಂಬುದು ಖಚಿತಪಡಿಸಿಕೊಳ್ಳುತ್ತಿದ್ದ ಆರೋಪಿಗಳು, ಅವುಗಳನ್ನು ತಾವೇ ಎತ್ತಿಟ್ಟಿಕೊಂಡು ಪೆಡ್ಲರ್‌ಗಳಿಗೆ ತಲುಪಿಸುತ್ತಿದ್ದರು. ಇದಕ್ಕೆ ಅವರಿಗೆ ಇಂತಿಷ್ಟುಹಣ ಸಂದಾಯವಾಗುತ್ತಿತ್ತು. ಕೆಲವು ಬಾರಿ ಅಂಚೆ ನೌಕರರೇ, ತಾವೇ ಬೇರೆ ಪೆಡ್ಲರ್‌ಗಳಿಗೆ ಹೆಚ್ಚಿನ ಬೆಲೆಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಸುಳಿವು ಗೊತ್ತಾಗದಂತೆ ರಹಸ್ಯ ಕಾಪಾಡಿಕೊಳ್ಳುತ್ತಿದ್ದ ಪೆಡ್ಲರ್‌ಗಳು, ಪಾರ್ಸಲ್‌ಗಳಿಗೆ ನಕಲಿ ವಿಳಾಸ ಕೊಡುತ್ತಿದ್ದರು. ಈ ಮಾಹಿತಿಯನ್ನು ಅಂಚೆ ಇಲಾಖೆಯ ನೌಕರರಿಗೆ ತಿಳಿಸಿದ್ದರು. ಅಲ್ಲದೆ ಅವರಿಗೆ ನಿಗದಿತ ದಿನ ಪಾರ್ಸಲ್‌ ಬರುವ ಬಗ್ಗೆ ಆನ್‌ಲೈನ್‌ ಮೂಲಕ ಮಾಹಿತಿ ಪಡೆದು ದಂಧೆಕೋರರು ತಿಳಿಸುತ್ತಿದ್ದರು. ಈ ವಿಳಾಸದ ಮೂಲಕ ಡ್ರಗ್ಸ್‌ ಕವರ್‌ ಪತ್ತೆ ಹಚ್ಚುತ್ತಿದ್ದ ನೌಕರರು, ಅವುಗಳನ್ನು ಪೆಡ್ಲರ್‌ಗಳಿಗೆ ರವಾನಿಸುತ್ತಿದ್ದರು. ಹಲವು ತಿಂಗಳುಗಳಿಂದ ಈ ದಂಧೆಯಲ್ಲಿ ತೊಡಗಿರುವ ಸಂಗತಿ ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.