ಬಸವಕಲ್ಯಾಣ(ಆ.19):ವೃದ್ಧಾಪ್ಯ ಪಿಂಚಣಿ ಹಣ ಪಾವತಿಸುವಂತೆ ಮನವಿ ಮಾಡಿದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮೇಲೆ ಪೋಸ್ಟ್‌ ಮ್ಯಾನ್‌ ಹಾಗೂ ಅವರ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಿರನಾಗಾಂವ ಗ್ರಾಮದಲ್ಲಿ ನಡೆದಿದೆ.

ಹಣಮಂತ ಧನಶಟ್ಟಿ ಎನ್ನುವರು ಹಲ್ಲೆಗೊಳಗಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ. ತಮ್ಮ ಗ್ರಾಮದ ಬಡ ಮಹಿಳೆಗೆ ಕಳೆದ 5 ತಿಂಗಳಿಂದ ಪಿಂಚಣಿ ಪಾವತಿಸಿದ ಹಿನ್ನೆಲೆ, ಪೋಸ್ಟ್‌ ಮ್ಯಾನ್‌ ಬಳಿ ತೆರಳಿದ ಧನಶಟ್ಟಿ ಹಣ ಪಾವತಿಸುವಂತೆ ಮನವಿ ಮಾಡಿದ್ದಾರೆ. ಅದನ್ನ ಪ್ರಶ್ನಿಸೋಕೆ ನಿನ್ಯಾರು, ನಿನೇನು ಸರ್ಕಾರಿ ಅಧಿಕಾರಿನಾ? ಎಂದು ಪೋಸ್ಟ್‌ ಮ್ಯಾನ್‌ ಪ್ರಶ್ನಿಸಿದ್ದಾನೆ.

ಪ್ರತಿಭೆಗೆ ಮೆಚ್ಚಿ 2.7 ಲಕ್ಷ ಸಂಬಳ ಬಹುಮಾನ ನೀಡಿದ ಸಚಿವ ಚವ್ಹಾಣ್

ಈ ನಡುವೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಪೋಸ್ಟ್‌ ಮ್ಯಾನ್‌ ಹಾಗೂ ಆತನ ಪುತ್ರರು ಸೇರಿ ಥಳಿಸಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಹಣಮಂತ ಧನಶಟ್ಟಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದ್ದಿ ತಿಳಿದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಘಟನೆಗೆ ಕಾರಣ ಕುರಿತು ಮಾಹಿತಿ ಪಡೆದು, ಆರೋಪಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಪೊಲೀಸಗೆ ತಿಳಿಸಿದ್ದಾರೆ.

ದೂರು, ಪ್ರತಿ ದೂರು:

ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟ್‌ ಮ್ಯಾನ್‌ ಚನ್ನಪ್ಪ ಅಳ್ಳಿಕಟ್ಟಿಹಾಗೂ ಆತನ ಪುತ್ರನ ವಿರುದ್ಧ ಹಣಮಂತ ಧನಶಟ್ಟಿ ದೂರು ನೀಡಿದರೆ, ಇದಕ್ಕೆ ಪ್ರತಿಯಾಗಿ ಹಣಮಂತ ಹಾಗೂ ಆತನ ಸಂಗಡಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಲ್ಕು ಜನರ ವಿರುದ್ಧ ಪೋಸ್ಟ್‌ ಮ್ಯಾನ್‌ ದೂರು ನೀಡಿದ್ದಾರೆ. ಈ ಕುರಿತು ಮುಡಬಿ ಪೊಲೀಸ್‌ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು. ಪಿಎಸ್‌ಐ ಅರುಣಕುಮಾರ ನೇತೃತ್ವದ ಪೊಲೀಸರ ತಂಡ, ತನಿಖೆ ಮುಂದುವರೆಸಿದೆ.