ಬೀದರ್‌ (ಆ.16): ಸ್ವಾತಂತ್ರ್ಯೋತ್ಸವದ ದಿನ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತಮ್ಮ ತಿಂಗಳ ಸಂಬಳ 2.7 ಲಕ್ಷ ರು. ಅನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ರೂಪದಲ್ಲಿ ನೀಡಿ ಪ್ರೋತ್ಸಾಹಿಸಿದ್ದಾರೆ. 

ಅವರು 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆಯ ಮತ್ತು ತಾಲೂಕುಗಳಲ್ಲಿ ಅಗ್ರಶ್ರೇಣಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗರದ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಸನ್ಮಾನಿಸಿದರು. 

ಜಿಲ್ಲೆಯ ಎಸ್‌ಎಸ್‌ಎಲ್‌ಸಿಯ 23 ಹಾಗೂ ಪಿಯುಸಿಯ 18 ಪ್ರತಿಭಾನ್ವಿತ ವಿದ್ಯಾರ್ಥಿಗಳು ಸೇರಿ ಒಟ್ಟು 41 ವಿದ್ಯಾರ್ಥಿಗಳಿಗೆ ತಮ್ಮ ಒಂದು ತಿಂಗಳದ ಒಟ್ಟಾರೆ ಸಂಬಳದ 2,70,000 ರು.ವನ್ನು ಬಹುಮಾನ ರೂಪವಾಗಿ ನೀಡಿ ಸನ್ಮಾನಿಸಿದರು.

SSLC ಟಾಪರ್‌ಗೆ ಚಿನ್ನದುಂಗುರ ಉಡುಗೊರೆ...

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ತೋರಿದಾಗ ಅವರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದರೊಟ್ಟಿಗೆ ಸರ್ಕಾರಿ ಶಾಲೆಗಳು ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎಂಬುವುದನ್ನು ಜನರಿಗೆ ಮನವರಿಕೆ ಮಾಡೋಣ ಎಂದು ಹೇಳಿದರು.