ತುಮಕೂರು: ಗ್ರಾಮಗಳಲ್ಲೇ ಅಡಗಿವೆಯಂತೆ 20ಕ್ಕೂ ಹೆಚ್ಚು ಚಿರತೆ..!
ತುಮಕೂರಿನಲ್ಲಿ ಈಗಾಗಲೇ ಹಲವರು ಚಿರತೆ ದಾಳಿಗೆ ಬಲಿಯಾಗಿದ್ದು, ಇದೀಗ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಚಿರತೆಗಳು ಬೀಡು ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಚಿರತೆಗಳು ಪೊದೆಗಳಲ್ಲೇ ಆವಾಸ ಸ್ಥಾನ ಮಾಡಿಕೊಂಡಿದೆ. ಈಗ ಅವುಗಳನ್ನು ಸೆರೆ ಹಿಡಿಯುವುದು ಕಷ್ಟಸಾಧ್ಯ. ಅದರಲ್ಲೂ ಮುಖ್ಯವಾಗಿ ನರಹಂತಕ ಚಿರತೆ ಯಾವುದು ಎಂಬುದು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.
ತುಮಕೂರು(ಜ.14): ಕಾಡು ಒತ್ತುವರಿ, ಪ್ರಾಣಿಗಳ ಬೇಟೆ ಹಾಗೂ ಕಾಡಿನ ಸುತ್ತಾ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಈಗ ಪ್ರಾಣಿಗಳ ಜೀವಕ್ಕೆ ಸಂಚಕಾರ ಬಂದಿರುವುದರಿಂದ ಚಿರತೆ ಸೇರಿ ಬಹಳಷ್ಟುಪ್ರಾಣಿಗಳು ಈಗ ನಾಡಿನತ್ತ ವಲಸೆ ಬರ ತೊಡಗಿದೆ.
ಈಗಾಗಲೇ ತುಮಕೂರು ತಾಲೂಕು, ಗುಬ್ಬಿ ಹಾಗೂ ಕುಣಿಗಲ್ ತಾಲೂಕುಗಳಲ್ಲಿ 20ಕ್ಕೂ ಹೆಚ್ಚು ಚಿರತೆಗಳು ಪೊದೆಗಳಲ್ಲೇ ಆವಾಸ ಸ್ಥಾನ ಮಾಡಿಕೊಂಡಿದೆ. ಈಗ ಅವುಗಳನ್ನು ಸೆರೆ ಹಿಡಿಯುವುದು ಕಷ್ಟಸಾಧ್ಯ. ಅದರಲ್ಲೂ ಮುಖ್ಯವಾಗಿ ನರಹಂತಕ ಚಿರತೆ ಯಾವುದು ಎಂಬುದು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.
ತುಮಕೂರು: ಚಿರತೆ ದಾಳಿಗೆ 3 ಬಲಿ, 40 ಕಡೆ ಬೋನಿಟ್ಟರೂ ನೋ ಯೂಸ್..!
ಸಮೀಪ ದೇವರಾಯನದುರ್ಗ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಚಿರತೆಗಳು ಹಾಗೂ ಇತರೆ ಪ್ರಾಣಿಗಳು ಕಾಡಿನಿಂದ ವಲಸೆ ಹೋಗುತ್ತಿದೆ. ಈಗಾಗಲೇ ತುಮಕೂರು ನಗರಕ್ಕೆ ನಾಲ್ಕು ಬಾರಿ ಚಿರತೆಗಳು ಬಂದಿವೆ. ಒಮ್ಮೆ ಸಿದ್ಧಾರ್ಥ ಕಾಲೇಜಿಗೆ, ಇನ್ನೊಮ್ಮೆ ಹೆಗ್ಗೆರೆ ಬಳಿ, ಮಗದೊಮ್ಮೆ ಹನುಮಂತಪುರ ಹಾಗೂ ಕಡೆಯ ಬಾರಿಗೆ ಜಯನಗರಕ್ಕೂ ಬಂದು ಗಾಬರಿ ಹುಟ್ಟಿಸಿತ್ತು.
42.5 ಚದುರ ಕಿ.ಮೀ.:
42.5 ಚೆದುರ ಕಿ.ಮೀ. ವ್ಯಾಪ್ತಿಯಲ್ಲಿ ಹಬ್ಬಿರುವ ದೇವರಾಯನದುರ್ಗ ಅರಣ್ಯದಲ್ಲಿ ಕಾಡು ಒತ್ತುವರಿ ಹಾಗೂ ಜಿಂಕೆ, ಮೊಲ, ಹಂದಿಗಳ ಬೇಟೆಯಾಡಲಾಗುತ್ತಿದೆ. ಹಾಗೆಯೇ ಕಲ್ಲು ಗಣಿಗಾರಿಕೆ ಸಂಬಂಧ ಡೈನಮೈಟ್ ಸಿಡಿಸುವುದರಿಂದ ಶಬ್ಧದಿಂದಾಗಿ ಪ್ರಾಣಿಗಳು ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಕಾಡಿನಲ್ಲಿ ನೀರಿನ ಒರತೆಗಳು ಕಣ್ಮರೆಯಾಗುತ್ತಿರುವುದರಿಂದ ಹಾಗೂ ಚಿರತೆಗೆ ಆಹಾರ ಇಲ್ಲದೇ ಇರುವುದರಿಂದ ನಾಡಿನತ್ತ ವಲಸೆ ಬರುತ್ತಿದೆ.
ಕಾಡಿಗಿಂತ ಗ್ರಾಮಗಳಲ್ಲೇ ಹೆಚ್ಚು ಚಿರತೆ:
ಈಗಾಗಲೇ ತುಮಕೂರು, ದೇವರಾಯನದುರ್ಗ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿರುವ ಬಹಳಷ್ಟುಅರಣ್ಯಗಳಲ್ಲಿ ಇರುವ ಚಿರತೆಗಳ ಸಂಖ್ಯೆಗಿಂತ ಗ್ರಾಮಗಳಲ್ಲೇ ಚಿರತೆಗಳು ಹೆಚ್ಚಿವೆ. ಈಗಾಗಲೇ ತುಮಕೂರು, ಕುಣಿಗಲ್, ಗುಬ್ಬಿ, ತುರುವೇಕೆರೆ ತಾಲೂಕುಗಳಲ್ಲಿ ಚಿರತೆಗಳು ಹೆಚ್ಚಾಗಿವೆ. ಇನ್ನು ತುರುವೇಕೆರೆ ಹೊರೆತುಪಡಿಸಿ ಉಳಿದ ಮೂರು ತಾಲೂಕುಗಳಲ್ಲಿ ಮನುಷ್ಯರ ರಕ್ತವನ್ನೇ ಚಿರತೆ ಹೀರುತ್ತಿರುವುದು ಜನರನ್ನು ಗಾಬರಿಗೊಳಿಸಿದೆ.
ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ:
ನಾಡಿನತ್ತ ಚಿರತೆಗಳು ವಲಸೆ ಬರುತ್ತಿದ್ದನ್ನು ಅರಣ್ಯ ಇಲಾಖೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಚಿರತೆ ಸಂತತಿ ಗ್ರಾಮಗಳಲ್ಲೇ ಹೆಚ್ಚಿರುವುದರಿಂದ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಹೆಬ್ಬೂರು ಸಮೀಪ ಬಿನ್ನಿಕುಪ್ಪೆ, ಕುಣಿಗಲ್ ತಾಲೂಕು ದೊಡ್ಡಮಳಲವಾಡಿ ಹಾಗೂ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ನರಹಂತಕ ಚಿರತೆ ಮೂವರ ರಕ್ತ ಹೀರಿರುವುದು ದೊಡ್ಡ ತಲ್ಲಣ ಮೂಡಿಸಿದೆ.
ಕಳೆದ ಎರಡು ತಿಂಗಳಿನಿಂದ ನರಹಂತಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಪ್ರಯತ್ನಗಳೆಲ್ಲಾ ಫಲ ಕೊಡುತ್ತಿಲ್ಲ. ಕಳೆದ 15 ದಿವಸಗಳ ಹಿಂದೆ ಸೆರೆ ಸಿಕ್ಕ ಚಿರತೆ ನರಹಂತಕ ಅಲ್ಲ ಎಂಬುದು ಈಗ ಸಾಬೀತಾಗಿದೆ.
ಕೂಂಬಿಂಗ್ ಸಲೀಸಲ್ಲ:
ಈಗಾಗಲೇ ಅರಣ್ಯ ಇಲಾಖೆ ನರಹಂತಕ ಚಿರತೆ ಸೆರೆ ಕೂಂಬಿಂಗ್ ಆಪರೇಷನ್ ನಡೆಸಿದ್ದರೂ ಕೂಡ ಫಲಪ್ರದವಾಗುತ್ತಿಲ್ಲ. ಚಿರತೆಯ ಚಲನವಲನ ಗಮನಿಸುತ್ತಿದ್ದರೂ ಕೂಡ ಸಕಾರಾತ್ಮಕ ಫಲಿತಾಂಶ ಹೊರಬೀಳುತ್ತಿಲ್ಲ.
ಕಾಡಿನಲ್ಲಿ ಪ್ರಾಣಿಗಳು ಖಾಲಿ ಖಾಲಿ
ಈಗ ಗ್ರಾಮಗಳಲ್ಲೇ ಚಿರತೆ ಹೆಚ್ಚು ಕಾಣಸಿಗುತ್ತಿರುವುದರಿಂದ ಕಾಡಿನಲ್ಲಿ ಕಾಡು ಪ್ರಾಣಿಗಳೇ ಇಲ್ಲದಂತಾಗಿದೆ. ಮೊನ್ನೆ ಮಣಿಕುಪ್ಪೆಯಲ್ಲಿ ಬಾಲಕನನ್ನು ಕೊಂದ ಜಾಗದ ಸಮೀಪದಲ್ಲೇ ಎರಡು ಚಿರತೆಗಳು ಕಂಡಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈಗಾಗಲೇ 15 ಕಿ.ಮೀ. ವ್ಯಾಪ್ತಿಯಲ್ಲಿ 40 ಬೋನ್‌ಗಳನ್ನು ಇಟ್ಟರೂ ಚಿರತೆಗಳು ಮಾತ್ರ ಬೋನಿನತ್ತ ಸುಳಿಯುತ್ತಿಲ್ಲ.
-ಉಗಮ ಶ್ರೀನಿವಾಸ್