ಅನಾರೋಗ್ಯ ಪೀಡಿತ ಮಗನ ಚಿಕಿತ್ಸೆಗಾಗಿ ಆಸ್ತಿ ಕಳೆದುಕೊಂಡ ತಂದೆ-ತಾಯಿ: ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ..!
ಇದ್ದೊಬ್ಬ ಅನಾರೋಗ್ಯ ಮಗನಿಗಾಗಿ ಮನೆ ಆಸ್ತಿಪಾಸ್ತಿ ಕಳೆದುಕೊಂಡು, ಸಾಲ ಮಾಡಿಕೊಂಡು ದಯನೀಯ ಸ್ಥಿತಿಯಲ್ಲಿ ನೆರವಿಗಾಗಿ ಕಾಯುತ್ತಿರೋ ಬಡಕುಟುಂಬ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಆಶ್ರಯ ಕಾಲೋನಿಯಲ್ಲಿರೋ ಬಡ ಕುಟುಂಬ...
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಜೂ.06): ಅದೊಂದು ಬಡ ಕುಟುಂಬ, ಆ ಕುಟುಂಬಕ್ಕೆ ಒಬ್ಬನೇ ಒಬ್ಬ ಮಗ, ಆತ ಅನಾರೋಗ್ಯಕ್ಕೀಡಾಗಿದ್ದರಿಂದ ಆತನ ಚಿಕಿತ್ಸೆಗಾಗಿ ತಂದೆ ತಾಯಿಗಳು ಇದ್ದ ಮನೆ ಸಹಿತ ಆಸ್ತಿಪಾಸ್ತಿ ಮಾರಾಟ ಮಾಡಿದ್ರು, ಸಾಲದ್ದಕ್ಕೆ ಮಗನ ಆರೈಕೆಗಾಗಿ ಲಕ್ಷ ಲಕ್ಷ ಸಾಲ ಮಾಡಿದ್ರು, ಆದ್ರೂ ಪ್ರಯೋಜನವಾಗಿಲ್ಲ. ಇದ್ರಿಂದ ನೊಂದಿರೋ ಕುಟುಂಬ ಇದೀಗ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾದ್ರೆ ಅವರಾರು? ಎಲ್ಲಿಯವರು? ಅಂತೀರಾ. ಈ ಕುರಿತ ವರದಿ ಇಲ್ಲಿದೆ.
ಅದೊಂದು ಬಡ ಕುಟುಂಬದ ಆಶ್ರಯ ಮನೆ, ಆ ಆಶ್ರಯ ಮನೆಯ ಮೂಲೆಯೊಂದರಲ್ಲಿ ಒರಗಿ ಮಲಗಿರೋ ಬಾಲಕನಂತಿರೋ ಯುವಕ, ಮಗನನ್ನ ಶತಾಗತಾಯ ಗುಣಮುಖನನ್ನಾಗಿಸಬೇಕೆಂಬ ಉದ್ದೇಶದಿಂದ ಕಲ್ಲು ಕುಟಿಗ ವೃತ್ತಿ ಮಾಡ್ತಿರೋ ತಂದೆ, ದಿನದ ಸಂಪೂರ್ಣ ಸಮಯವನ್ನ ಮಗನ ಆರೈಕೆಯಲ್ಲಿರೋ ಕಳೆಯುತ್ತಿರೋ ಹೆತ್ತ ತಾಯಿ. ಅಂದಹಾಗೆ ಇಂತಹವೊಂದು ಬಡಕುಟುಂಬ ಕಂಡು ಬರೋದು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ. ಹೌದು, ಪಟ್ಟಣದ ಆಶ್ರಯ ಕಾಲೋನಿಯಲ್ಲಿರೋ ಮುಸ್ತಾಕ್ ಮತ್ತು ಅಮೀನಾ ಎಂಬ ಬಡ ಮುಸ್ಲಿಂ ದಂಪತಿಗಳ ಗೋಳಿನ ಕಥೆ ಇದು. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಓರ್ವ ಅಲ್ತಾಪ್ ಎಂಬ ಗಂಡು ಮಗನಿದ್ದಾನೆ. ಹೆಣ್ಣು ಮಕ್ಕಳು ಗುಣಮುಖರಾಗಿದ್ದರೆ ಇತ್ತ ಒಬ್ಬನೇ ಒಬ್ಬ ಮಗ ಅಲ್ತಾಪ್ ನಿಗೆ ಮಾತ್ರ ಹುಟ್ಟಿನಿಂದ ಅನಾರೋಗ್ಯ ಕಾಡಿಕೊಂಡೇ ಬಂದಿದೆ.
ರೈತಸಂಘ ಹೋರಾಟದ ಫಲ; 2 ದಶಕದಿಂದ ಕರೆಂಟ್ ಬಿಲ್ ಕಟ್ಟದ ಗ್ರಾಮ!
ಎದ್ದು ನಿಲ್ಲಲಾಗೋದಿಲ್ಲ, ಸರಿಯಾಗಿ ಕೂರಲಾಗೋದಿಲ್ಲ, ವಿವಿಧ ಸಮಸ್ಯೆಗಳಿಂದ ಬಳಲಿ, ನಿರಂತರವಾಗಿ ಅನಾರೋಗ್ಯಕ್ಕೀಡಾಗಿದ್ದರಿಂದ ದಂಪತಿಗಳು ಹೇಗಾದ್ರೂ ಮಾಡಿ ಮಗ ಅಲ್ತಾಪ್ನನ್ನ ಗುಣಮುಖನನ್ನಾಗಿಸಬೇಕೆಂದು ತಾವಿದ್ದ ಮನೆ, ಆಸ್ತಿಪಾಸ್ತಿ ಎಲ್ಲವನ್ನ ಮಾರಾಟ ಮಾಡಿ ಆಸ್ಪತ್ರೆಗೆ ತೋರಿಸಿದ್ದಾರೆ. ಆದ್ರೂ ಪ್ರಯೋಜನವಾಗಿಲ್ಲ, ಸಾಲದ್ದಕ್ಕೆ ಏಳೆಂಟು ಲಕ್ಷ ರೂಪಾಯಿ ಸಾಲವನ್ನ ಸಹ ಮಾಡಿಕೊಂಡಿದ್ದಾರೆ. ಇನ್ನು ನಿತ್ಯ ಬದುಕಿಗೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದ್ದು, ಹೇಗಾದ್ರೂ ಮಾಡಿ ಸರ್ಕಾರ ಇಲ್ಲವೆ ದಾನಿಗಳು ನನ್ನ ಮಗನ ಚಿಕಿತ್ಸೆಗೆ ಅನುವು ಮಾಡಿಕೊಡಿ ಅಂತಾ ತಂದೆ ಮುಸ್ತಾಕ್ ಮನವಿ ಮಾಡಿದ್ದಾರೆ.
ನಿತ್ಯ ತಾಯಿಯ ಆರೈಕೆಯಲ್ಲಿ ಇರುವ ಅಲ್ತಾಫ್...
ಇನ್ನು ತಾಯಿ ಅಮೀನಾ ಮನೆಯಲ್ಲಿ ನಿತ್ಯ ಮಗ ಅಲ್ತಾಪ್ನ ಆರೈಕೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ತಗಡಿನ ಶೆಡ್ನಲ್ಲಿಯೇ ಇರುವ ತಂದೆ ತಾಯಿಗೆ ಆತನನ್ನ ಬಿಟ್ಟು ಕದಲಾರದಂತಹ ಪರಿಸ್ಥಿತಿ. ಮಗನಿಗೆ ವಯಸ್ಸಾಗಿದ್ದರೂ ಮಗುವಿನಂತಿರೋ ಅಲ್ತಾಪ್ನಿಗೆ ಎಲ್ಲ ಬೇಕು ಬೇಡಿಕೆಗಳನ್ನ ಈಡೇರಿಸಲು ತಾಯಿ ನಿತ್ಯ ಆತನ ಆರೈಕೆಯಲ್ಲಿಯೇ ಇರಬೇಕಾಗಿದ್ದು, ಮಮ್ಮಲ ಮರಗುತ್ತಿದ್ದಾಳೆ. ಇನ್ನು ಸಾಲ ಸೋಲ ಮಾಡಿ ಚಿಕಿತ್ಸೆ ನೀಡಿಸಿದರೂ ಇನ್ನೂ ಸಹ ಸಂಪೂರ್ಣ ಗುಣಮುಖರಾಗಿಲ್ಲ, ಇವುಗಳ ಮಧ್ಯೆ ದೂರದ ಊರುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗಬೇಕೆಂದರೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದವರು ತಮ್ಮ ಮಗನ ಚಿಕಿತ್ಸೆಗಾಗಿ ಅನುಕೂಲ ಮಾಡಿಕೊಡಬೇಕು ಅಂತಾರೆ ತಾಯಿ ಅಮೀನಾ.
ಒಟ್ಟಿನಲ್ಲಿ ತಮ್ಮ ಮಗನ ಚಿಕಿತ್ಸೆಗಾಗಿ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಸಾಲ ಮಾಡಿ ದಯನೀಯ ಸ್ಥಿತಿಯಲ್ಲಿರೋ ಕುಟುಂಬಕ್ಕೆ ಇದೀಗ ಸರ್ಕಾರ ಸೇರಿದಂತೆ ದಾನಿಗಳು ಯಾರಾದರೂ ನೆರವಿಗೆ ಮುಂದಾಗ್ತಾರಾ ಅಂತ ಕಾದು ನೋಡಬೇಕಿದೆ.