ನಿಖಿಲ್-ಎಚ್‌ಡಿಕೆ ಅನಾರೋಗ್ಯ : ಮೃತ್ಯುಂಜಯ ಹೋಮ
ಕೊರೋನಾ ಮಹಾಮಾರಿ ಅಟ್ಟಹಾಸ ಎಲ್ಲೆಡೆ ಜೋರಾಗಿದ್ದು, ಜೆಡಿಎಸ್ ಯುವ ನಾಯಕ ನಿಖಿಲ್, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೊರೋನಾ ಸೋಂಕಿಗೆ ಒಳಗಾಗಿದ್ದು ಇವರ ಆರೋಗ್ಯ ವೃದ್ಧಿಗಾಗಿ ಹೋಮ ನಡೆಸಲಾಗಿದೆ.
ಶಿರಾ(ಏ.22): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಚೆನ್ನಮ್ಮ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಆರೋಗ್ಯ ಹಾಗೂ ಆಯುಷ್ ವೃದ್ಧಿಗಾಗಿ ನರದ ಶ್ರೀ ಗವಿ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ತಾಲೂಕಿನ ಎಲ್ಲಾ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಜೆಡಿಎಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಸಿ.ಆರ್.ಉಮೇಶ್ ಅವರಿಂದ ಮೃತ್ಯುಂಜಯ ಹೋಮ, ಆಯುಷ್ ಹೋಮ ಹಾಗೂ, ಅಭಿಷೇಕ, ವಿಶೇಷ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕೊರೋನಾ ಪಾಸಿಟಿವ್: ಆಸ್ಪತ್ರೆಗೆ ದಾಖಲಾಗಿರೋ ನಿಖಿಲ್ ಹೇಗಿದ್ದಾರೆ? .
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿ.ಆರ್.ಉಮೇಶ್, ಈ ದೇಶ ಕಂಡಂತಹ ಅಪ್ರತಿಮ ರಾಜಕಾರಣಿ ಹಾಗೂ ಈ ನಾಡಿನ ರೈತ ನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆಯಸ್ಸು ವೃದ್ಧಿಗೆ ಹಾಗೂ ಆರೋಗ್ಯಕ್ಕಾಗಿ ಮತ್ತು ಚೆನ್ನಮ್ಮ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿಗಾಗಿ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ವಿಶೇಷ ಹೋಮ, ಪೂಜೆ ಏರ್ಪಡಿಸಲಾಗಿತ್ತು. ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸೇವೆ ಈ ರಾಜ್ಯ ಹಾಗೂ ದೇಶಕ್ಕೆ ಸಿಗಬೇಕು ಎಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ನಗರಸಭಾ ಮಾಜಿ ಸದಸ್ಯರಾದ ಆರ್.ರಾಘವೇಂದ್ರ, ಆರ್.ರಾಮು, ಬಿ.ಅಂಜಿನಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಯುವ ಜೆಡಿಎಸ್ ಮುಖಂಡ ರಹಮತ್ ಉಲ್ಲಾ ಖಾನ್, ಕೊಲ್ಲಾರಪ್ಪ, ನಟರಾಜು, ಶ್ರೀರಂಗ, ಪುಟ್ಟಣ್ಣ ಸೇರಿದಂತೆ ಹಲವರು ಹಾಜರಿದ್ದರು