Asianet Suvarna News Asianet Suvarna News

Ramanagara: ತಾತ್ಕಾ​ಲಿಕ ಸೇತುವೆ ನಿರ್ಮಾ​ಣದಲ್ಲೂ ರಾಜಕೀಯ!

ಜಿಲ್ಲೆ​ಯಲ್ಲಿ ಮಳೆ​ಯಿಂದ ಹಾನಿ​ಗೀ​ಡಾದ ಸಂಪ​ರ್ಕ ಸೇತು​ವೆ​ಗಳ ನಿರ್ಮಾಣ ವಿಳಂಬವಾಗುತ್ತಿರುವ ಕಾರಣ ತಾತ್ಕಾ​ಲಿಕ ಸೇತುವೆ ನಿರ್ಮಾಣ ವಿಚಾರ ಇದೀಗ ರಾಜ​ಕೀಯ ಹಗ್ಗ​ಜ​ಗ್ಗಾ​ಟಕ್ಕೆ ವಸ್ತು​ವಾ​ಗು​ತ್ತಿದೆ. 

Politics in Temporary Bridge Construction at Ramanagara gvd
Author
First Published Nov 28, 2022, 10:09 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ನ.28): ಜಿಲ್ಲೆ​ಯಲ್ಲಿ ಮಳೆ​ಯಿಂದ ಹಾನಿ​ಗೀ​ಡಾದ ಸಂಪ​ರ್ಕ ಸೇತು​ವೆ​ಗಳ ನಿರ್ಮಾಣ ವಿಳಂಬವಾಗುತ್ತಿರುವ ಕಾರಣ ತಾತ್ಕಾ​ಲಿಕ ಸೇತುವೆ ನಿರ್ಮಾಣ ವಿಚಾರ ಇದೀಗ ರಾಜ​ಕೀಯ ಹಗ್ಗ​ಜ​ಗ್ಗಾ​ಟಕ್ಕೆ ವಸ್ತು​ವಾ​ಗು​ತ್ತಿದೆ. ಹೀಗಾಗಿ ಗ್ರಾಮ​ಸ್ಥರೇ ಸಂಚಾ​ರ​ಕ್ಕಾಗಿ ಪರ್ಯಾಯ ಮಾರ್ಗ ಕಂಡು​ಕೊ​ಳ್ಳು​ತ್ತಿ​ದ್ದಾರೆ. ಕಳೆದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗ​ಳಲ್ಲಿ ಮಹಾ ಮಳೆಯಿಂದ ಬೆಳೆ ಹಾನಿ ಮಾತ್ರ​ವ​ಲ್ಲದೆ ಸರ್ಕಾರಿ ಕಟ್ಟಡ, ರಸ್ತೆ​ಗಳು ಹಾನಿ​ಗೀ​ಡಾ​ಗಿ​ದ್ದವು. ಅತೀ ಹೆಚ್ಚಿನ ಪ್ರಮಾ​ಣದಲ್ಲಿ ಗ್ರಾಮ​ಗ​ಳಿಗೆ ಸಂಪರ್ಕ ಕಲ್ಪಿ​ಸುವ ಸೇತು​ವೆ​ಗಳು ಮುರಿದು ಕೊಚ್ಚಿ ಹೋಗಿ​ವೆ.

ರಾಮ​ನ​ಗರ, ಚನ್ನ​ಪ​ಟ್ಟಣ ಹಾಗೂ ಮಾಗಡಿ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸೇತು​ವೆ​ಗಳು ಹಾನಿ​ಗೊಂಡಿವೆ. ಗ್ರಾಮ​ಗ​ಳ ನಡುವೆ ಸಂಪರ್ಕ ಕಲ್ಪಿ​ಸುತ್ತಿದ್ದ ಈ ಸೇತುವೆಗಳು ಮುರಿ​ದಿ​ರು​ವು​ದ​ರಿಂದ ಜನರ ಸಂಚಾ​ರಕ್ಕೆ ತೊಂದ​ರೆ​ಯಾ​ಗು​ತ್ತಿದೆ. ಹತ್ತಾರು ಕಿಲೋ ಮೀಟರ್‌ ಸುತ್ತಾಡಿ ಗ್ರಾಮ ತಲು​ಪು​ವಂತಾ​ಗಿದೆ. ಮಳೆ​ಯಿಂದ ನದಿ ಪಾತ್ರ​ದಲ್ಲಿ ಪ್ರವಾಹ ಹೆಚ್ಚಾಗಿ ಸುಮಾರು 15ಕ್ಕೂ ಹೆಚ್ಚು ಸಂಪರ್ಕ ಸೇತು​ವೆ​ಗಳಿಗೆ ಹಾನಿ​ಯಾ​ಗಿದೆ. ಎರಡು ಗ್ರಾಮ​ಗಳ ನಡುವೆ ಸಂಪರ್ಕ ಕಲ್ಪಿ​ಸುವ ಒಂದು ಸೇತುವೆ ನಿರ್ಮಾ​ಣಕ್ಕೆ ಸುಮಾರು 12 ರಿಂದ 15 ಕೋಟಿ ರುಪಾಯಿ ವೆಚ್ಚ ತಗ​ಲು​ತ್ತದೆ. ಸರ್ಕಾ​ರ​ದಿಂದ ಏಕಕಾಲಕ್ಕೆ ಇಷ್ಟೊಂದು ಹಣ ಬಿಡು​ಗ​ಡೆ​ಯಾ​ಗು​ವುದು ಅನು​ಮಾನ.

Ramanagara: ಹಾಟ್‌ ಏರ್‌ ಬಲೂ​ನಿನ ಪರೀ​ಕ್ಷಾರ್ಥ ಹಾರಾಟ ಯಶ​ಸ್ವಿ

ಹೀಗಾಗಿ ಸ್ಥಳೀಯ ಶಾಸ​ಕರು ಜನರ ಅನು​ಕೂ​ಲ​ಕ್ಕಾಗಿ ಶಾಶ್ವತ ಸೇತುವೆ ನಿರ್ಮಾ​ಣದ ಬದಲು ತಾತ್ಕಾ​ಲಿಕ ಸೇತುವೆ ನಿರ್ಮಾ​ಣಕ್ಕೆ ಕ್ರಮ ವಹಿ​ಸುತ್ತಿ​ದ್ದಾರೆ. ಈ ತಾತ್ಕಾ​ಲಿಕ ಸೇತುವೆ ನಿರ್ಮಾ​ಣಕ್ಕೂ ಲಕ್ಷಾಂತರ ರುಪಾಯಿ ವೆಚ್ಚ ತಗ​ಲುತ್ತದೆ. ಇದ​ರಿಂದ ಸುಮ್ಮನೆ ಹಣ ಪೋಲಾ​ಗು​ತ್ತದೆ ಎಂಬ ಕಾರ​ಣಕ್ಕೆ ವಿಪ​ಕ್ಷ​ಗಳ ನಾಯ​ಕರು ತಾತ್ಕಾ​ಲಿಕ ಸೇತುವೆ ಬದ​ಲಿಗೆ ಶಾಶ್ವತ ಸೇತುವೆ ನಿರ್ಮಾಣ ಮಾಡ​ಬೇ​ಕೆಂದು ಪಟ್ಟು ಹಿಡಿ​ದಿ​ದ್ದಾರೆ. ಇದೀಗ ತಾತ್ಕಾ​ಲಿಕ ಸೇತುವೆ ವಿಚಾ​ರವೂ ರಾಜ​ಕೀಯ ಜಿದ್ದಾ​ಜಿ​ದ್ದಿಗೆ ಆಹಾ​ರ​ವಾ​ಗಿದೆ.

ಅವೈ​ಜ್ಞಾ​ನಿ​ಕ​ವಾಗಿ ತಾತ್ಕಾ​ಲಿಕ ಸೇತುವೆ ನಿರ್ಮಾ​ಣ: ಜನ​ಪ್ರ​ತಿ​ನಿ​ಧಿ​ಗಳು ಹಾಗೂ ಅಧಿ​ಕಾ​ರಿ​ಗಳು ಹೊಸ ಸೇತುವೆ ಅಥವಾ ತಾತ್ಕಾ​ಲಿಕ ಸೇತುವೆ ನಿರ್ಮಾಣಕ್ಕೆ ಒಲವು ತೋರು​ತ್ತಿಲ್ಲ. ಈ ಕಾರ​ಣ​ದಿಂದಾಗಿ ಗ್ರಾಮ​ಸ್ಥರೇ ಸಂಚಾ​ರ​ಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿ​ಕೊ​ಳ್ಳಲು ಅವೈ​ಜ್ಞಾ​ನಿಕ ಕ್ರಮ​ಗ​ಳನ್ನು ಅನು​ಸ​ರಿ​ಸು​ತ್ತಿ​ದ್ದಾ​ರೆ. ಇದ​ರಿಂದಾಗುವ ಅನಾ​ಹು​ತದ ಬಗ್ಗೆ ಯಾರಿಗೂ ಅರಿ​ವಿ​ಲ್ಲ​ದಂತಾ​ಗಿ​ದೆ. ನದಿಯಲ್ಲಿ ನೀರಿನ ಹರಿ​ವಿನ ಪ್ರಮಾಣ ಕಡಿ​ಮೆ​ಯಾ​ಗಿ​ರುವ ಕಾರಣ ಮಂಚ​ನ​ಬೆಲೆ ಸೇತುವೆ ಬಳಿ ವಾಹನ ಸವಾ​ರರು ನದಿಯಲ್ಲಿ ಇಳಿದು ಮಂಡಿ ಉದ್ದ ಹರಿ​ಯು​ತ್ತಿ​ರುವ ನೀರಿ​ನ​ಲ್ಲಿಯೇ ದ್ವಿಚಕ್ರ ವಾಹನ ತಳ್ಳಿ​ಕೊಂಡು ದಡ ಸೇರು​ತ್ತಿ​ದ್ದಾ​ರೆ. ಬಿಡದಿ - ಬಾನಂದೂರು ರಸ್ತೆ​ಯ​ಲ್ಲಿನ ಸಂಪರ್ಕ ಸೇತು​ವೆ​ಯನ್ನು ತಾತ್ಕಾ​ಲಿ​ಕ​ವಾಗಿ ದುರಸ್ತಿ ಮಾಡ​ಲಾ​ಗಿ​ದೆ.

ಸುಗ್ಗನಹಳ್ಳಿ ಗ್ರಾಮದ ಅರ್ಕಾವತಿ ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆ್ನಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೆ ತಮ್ಮ ಸ್ವಂತ ವೆಚ್ಚದಲ್ಲಿ ಸುಗ್ಗನಹಳ್ಳಿ ಗ್ರಾಮದ ಅರ್ಕಾವತಿ ನದಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದ್ದಾರೆ. ಕಸಬಾ ಹೋಬಳಿ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರಿಗೆ ಸೇತುವೆ ಇಲ್ಲದೆ ತುಂಬಾ ತೊಂದರೆಯಾಗಿತ್ತು. ಮಕ್ಕಳು ಶಾಲೆಗೆ ನದಿ ದಾಟಿಯೇ ಹೋಗಬೇಕಿತ್ತು. ಪ್ರತಿನಿತ್ಯ ಓಡಾಟಕ್ಕೆ ಅದರಲ್ಲೂ ಮಳೆಯ ಸಮಯದಲ್ಲಂತೂ ನದಿ ದಾಟುವುದು ದುಸ್ಸಾಹಸವೇ ಆಗಿತ್ತು. ಹಾಗಾಗಿ ಸೇತುವೆ ನಿರ್ಮಾಣ ಅಗತ್ಯವಾಗಿದ್ದರಿಂದ ಗ್ರಾಮದ ಯುವಕರೇ ನಿರ್ಮಿಸಿಕೊಂಡಿದ್ದಾರೆ. ಇನ್ನಾ​ದರು ಜನ​ಪ್ರ​ತಿ​ನಿ​ಧಿ​ಗಳು ಹಾಗೂ ಅಧಿ​ಕಾ​ರಿ​ಗಳು ಶಾಶ್ವತ ಸೇತುವೆ ನಿರ್ಮಾ​ಣಕ್ಕೆ ಕ್ರಮ ವಹಿ​ಸ​ಬೇ​ಕಾ​ಗಿ​ದೆ.

ಹಾನಿ​ಗೊಂಡ ಸೇತು​ವೆ​ಗಳು ಎಷ್ಟು?: ಮಂಚ​ನ​ಬೆಲೆ ಜಲಾ​ಶ​ಯ​ದಿಂದ ಹರಿ​ಯುವ ನೀರು ಅರ್ಕಾ​ವತಿ ನದಿ​ ಮಾರ್ಗ​ವಾಗಿ ಮಾಗಡಿ, ರಾಮ​ನ​ಗರ ಹಾಗೂ ಕನ​ಕ​ಪುರ ತಾಲೂ​ಕಿ​ನಲ್ಲಿ ಹರಿದು ಪಕ್ಕದ ತಮಿ​ಳು​ನಾಡಿಗೆ ಸೇರ​ಲಿದೆ. ಜಿಲ್ಲೆಯ ಮೂರು ತಾಲೂ​ಕು​ಗಳ ವ್ಯಾಪ್ತಿ​ಯಲ್ಲಿ ನೂರಾರು ಸೇತು​ವೆ​ಗ​ಳನ್ನು ಅರ್ಕಾ​ವತಿ ನದಿಗೆ ಅಡ್ಡ​ಲಾ​ಗಿ ನಿರ್ಮಾಣ ಮಾಡ​ಲಾ​ಗಿದೆ. ಮಳೆ ಅಬ್ಬ​ರಕ್ಕೆ ಅರ್ಕಾ​ವತಿ ಮತ್ತು ಕಣ್ವ ನದಿ​ಗಳು ಮೈದುಂಬಿ ಹರಿದ ಪರಿ​ಣಾಮ 15ಕ್ಕೂ ಹೆಚ್ಚು ಸೇತು​ವೆ​ಗಳು ಬಿರುಕು ಬಿಟ್ಟಿವೆ. ಇದ​ರಲ್ಲಿ ಬಹು​ತೇಕ ಸೇತು​ವೆ​ಗಳು ನೀರು ಪಾಲಾ​ಗಿ​ದ್ದರೆ, ಕೆಲವು ಶಿಥಿ​ಲ​ಗೊಂಡಿವೆ. ಇದು ಕಳಪೆ ಕಾಮ​ಗಾ​ರಿಗೂ ಸಾಕ್ಷಿ​ಯಾ​ಗಿ​ವೆ.

ಚನ್ನ​ಪ​ಟ್ಟಣ ತಾಲೂ​ಕಿನ ಬಾಣ​ಗ​ಹಳ್ಳಿ - ಕೊಂಡಾ​ಪುರ ನಡುವೆ ಕಣ್ವ ನದಿಗೆ ಅಡ್ಡ​ಲಾ​ಗಿ ನಿರ್ಮಿ​ಸಿದ್ದ ಕಿರಿ ಸೇತುವೆ ಕೊಚ್ಚಿ ಹೋಗಿದೆ. ಈ ಸೇತು​ವೆ​ಯನ್ನು ಕೇವಲ ವರ್ಷದ ಹಿಂದಷ್ಟೇ 36 ಲಕ್ಷ ರುಪಾಯಿ ವೆಚ್ಚ​ದಲ್ಲಿ ನಿರ್ಮಿ​ಸ​ಲಾ​ಗಿತ್ತು. ಆದರೆ, ವರ್ಷ​ದ​ಲ್ಲಿಯೇ ಸೇತು​ವೆ ನೀರು ಪಾಲಾ​ಗಿದೆ. ಮಂಚ​ನ​ಬೆಲೆ ಜಲಾ​ಶಯ ಬಳಿಯ ಮಂಚ​ನ​ಬೆಲೆ ಸೇತುವೆ, ಸುಗ್ಗ​ನ​ಹಳ್ಳಿ , ಹರೀ​ಸಂದ್ರ ಸೇ​ರಿ​ದಂತೆ ಪ್ರಮುಖ ಗ್ರಾಮ​ಗಳ ನಡುವೆ ಸಂಪರ್ಕ ಕಲ್ಪಿ​ಸುವ ಸೇತು​ವೆ​ಗಳು ಮುರಿದು ಬಿದ್ದಿ​ವೆ.

Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಗ್ರಾಮ​ಗಳ ಸಂಪರ್ಕ ಸೇತುವೆ ಕುಸಿ​ದಿ​ರು​ವು​ದ​ರಿಂದ ಪ್ರತಿ​ನಿತ್ಯ ಜನರ ಸಂಚಾ​ರಕ್ಕೆ ತೊಂದ​ರೆ​ಯಾ​ಗು​ತ್ತಿದೆ. ಸೇತುವೆ ನಿರ್ಮಿಸಿಕೊಡಿ ಎಂದು ಸಂಬಂಧಪಟ್ಟವರಿಗೆ ಮನವಿ ಮಾಡಿದರು ಮತ್ತು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಜನ​ಪ್ರ​ತಿ​ನಿ​ಧಿ​ಗಳು ಕಣ್ಮುಚ್ಚಿ ಕುಳಿ​ತರೆ ಜನರ ಕಷ್ಟ​ಗ​ಳಿಗೆ ಪರಿ​ಹಾರ ಸಿಗಲು ಹೇಗೆ ಸಾಧ್ಯ. ಶಾಶ್ವ​ತ​ವಾದ ಸೇತುವೆ ನಿರ್ಮಾಣ ಆಗ​ಬೇ​ಕಾ​ಗಿದೆ. ಅದು ಯಾವಾಗ ಎಂಬುದು ತಿಳಿ​ಯದು. ಹಾಗಾಗಿ ತಾತ್ಕಾ​ಲಿಕ ಸೇತುವೆ ನಿರ್ಮಾಣ ಮಾಡಿ​ಕೊ​ಳ್ಳ​ಲಾ​ಗಿದೆ.
- ಸುಗ್ಗ​ನ​ಹಳ್ಳಿ ಗ್ರಾಮ​ದ ಯುವ​ಕರು

Follow Us:
Download App:
  • android
  • ios