ವಿಜಯಪುರ (ಸೆ.28):  ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮನೆ ಮಾಡಬೇಕು. ರಾಜಕೀಯವು ಸ್ವಹಿತಾಸಕ್ತಿ, ಸ್ವಾರ್ಥತೆಗಾಗಿ ಬಳಕೆಯಾಗದೇ ಸೇವೆಯಾಗಿ ಪರಿಗಣಿಸುವಂತಾಗಬೇಕು. ಪ್ರಜೆಗಳೇ ಪ್ರಭುಗಳಾಗಬೇಕೆಂಬ ಸಂವಿಧಾನದ ಆಶಯ ಈಡೇರುವ ಕಾಲ ಬರಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಎಂಟಿಬಿ ನಾಗರಾಜು ತಿಳಿಸಿದರು.

ಹೋಬಳಿಯ ಎ. ರಂಗನಾಥಪುರ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗ ಮೋರ್ಚಾ ಪದಾಧಿಕಾರಿಗಳ ಸಮಾವೇಶ, ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳ ಪಟ್ಟಿಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆಗಾಗಿ ಖರ್ಚು ಮಾಡುವ ಹಣವನ್ನು ದುಡಿಯಲು ಅನ್ಯಮಾರ್ಗಗಳನ್ನು ಬಳಸುವ, ಸರ್ಕಾರಿ ಜಮೀನುಗಳನ್ನು ಕಬಳಿಸುವ ಹುನ್ನಾರದ ಮಾರ್ಗಗಳನ್ನು ಬಿಡಬೇಕು. ಅದಕ್ಕಾಗಿ ಚುನಾವಣೆಯ ವೇಳೆ ಮತದಾರರಿಗೆ ಆಸೆ, ಆಮಿಷಗಳನ್ನು ತೋರಿಸದಂತಾಗಬೇಕು. ಚುನಾವಣಾ ಅಭ್ಯರ್ಥಿಗಳು ಹಣ, ಅಮಿಷ ತೋರಿಸುವುದನ್ನು ತಡೆದು ಮತದಾರರೇ ಸ್ವಬುದ್ಧಿಯಿಂದ ಸಭ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದ ರೀತಿಯಲ್ಲಿ ಚುನಾವಣಾ ಆಯೋಗ, ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಚುನಾವಣೆಗಳು ನಡೆಯಲು ಸೂಕ್ತ ಕ್ರಮಗಳನ್ನು ರೂಪಿಸಬೇಕು ಎಂದರು.

ತಿದ್ದುಪಡಿಯಿಂದ ತೊಂದರೆಯಾಗದು:

ಯಾವುದೇ ಬೇರೆ ರಾಜ್ಯಗಳಿಂದ ಕೃಷಿಕರ ಸರ್ಟಿಫಿಕೇಟ್‌ ಪಡೆದು ಉದ್ಯಮಿಗಳು ರೈತರ ಜಮೀನನ್ನು ಕೊಂಡು ಲಾಭ ಗಳಿಸುತ್ತಿದ್ದಾರೆ. ಕೆಲವು ಹಣವಂತರು ರೈತರ ಹೆಸರಿನಲ್ಲಿ ಜಮೀನು ಕೊಂಡು ಜಿಪಿಎ ಮಾಡಿಸಿಕೊಂಡು ಪರಿವರ್ತಿಸಿ ಮಾರಾಟ ಮಾಡಿ ದಂಧೆ ನಡೆಸುತ್ತಿದ್ದಾರೆ. ಅಧಿಕಾರಿಗಳೇ ಲಾಭ ಮಾಡುವ ಮಾರ್ಗದ ಕಾನೂನುಗಳನ್ನು ತೋರಿಸುತ್ತಾರೆ. ಅನ್ಯಥಾ ರಿಜಿಸ್ಟರ್‌ ಆದ ಎಲ್ಲ ಜಮೀನುಗಳಿಗೂ 71 ಎಬಿ ಯಂತಹ ಕೇಸ್‌ಗಳನ್ನು ದಾಖಲಿಸಿ ಹಣ ವಸೂಲಿ ದಂಧೆ ನಡೆಯುತ್ತಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಇವೆಲ್ಲಕ್ಕೂ ಕಡಿವಾಣ ಬೀಳಲಿದೆ ಎಂದರು.

ಮತ್ತೆ ಶುರುವಾಯ್ತು ಸಂಪುಟ ಸರ್ಕಸ್: ಸಿ.ಟಿ.ರವಿ ಫಸ್ಟ್ ವಿಕೆಟ್...?

ರಾಜ್ಯ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಎಂ.ನಾರಾಯಣಗೌಡ ಮಾತನಾಡಿ, ಎಂಟಿಬಿ ನಾಗರಾಜು ಅವರಿಗೆ ಸಚಿವ ಸ್ಥಾನ ಸಿಕ್ಕು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದರೆ ದೇವನಹಳ್ಳಿ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಬಹುದಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಸಂಘಟಿಸಿ ಅಧಿಕಾರವನ್ನು ಹಿಡಿಯಲು ಸಹಾಯವಾಗುತ್ತದೆ ಎಂದರು.

ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್‌, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಮಂಜುನಾಥ್‌, ಅಧ್ಯಕ್ಷ ಸುನಿಲ್‌ ಸುಂದರೇಶ್‌, ತಾಲೂಕು ಬಿಜೆಪಿ ಒಬಿಸಿ ತಾಲೂಕು ಅಧ್ಯಕ್ಷ ಸುಜಯ್‌, ಭೂ ನ್ಯಾಯ ಮಂಡಳಿ ಸದಸ್ಯ ಆರ್‌.ಗಿರೀಶ್‌, ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್‌, ರಾಮಕೃಷ್ಣ ಹೆಗಡೆ, ವಿವಿಧ ಬಿಜೆಪಿ ಶಕ್ತಿಕೇಂದ್ರ, ಮೋರ್ಚಾಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸಿಎಂ ಯಡಿಯೂರಪ್ಪಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ .

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿಗಳನ್ನು ಪುರಸ್ಕರಿಸಲಾಯಿತು. ಹಿಂದುಳಿದ ವರ್ಗ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರಗಳನ್ನು ವಿತರಿಸಲಾಯಿತು.
 
ವಿಜಯಪುರ ಹೋಬಳಿಯ ಎ.ರಂಗನಾಥಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬಿಜೆಪಿ ವತಿಯಿಂದ ನಡೆದ ಹಿಂದುಳಿದವರ್ಗ ಮೋರ್ಚಾ ಪದಾಧಿಕಾರಿಗಳ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನಪರಿಷತ್ತು ಸದಸ್ಯ ಎಂಟಿಬಿ ನಾಗರಾಜು ಉದ್ಘಾಟಿಸಿದರು.