ಸಿಎಂ ಯಡಿಯೂರಪ್ಪಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಅನ್ನ ಭಾಗ್ಯ ಅಕ್ಕಿ ಕಡಿತವಾದ್ರೆ ಹೋರಾಟ: ಸಿದ್ದು ಆಕ್ರೋಶ| ಬಿಜೆಪಿಗೆ ಕೆಳ ವರ್ಗ, ಕಾಯಕ ಜೀವಿಗಳ ಬಗ್ಗೆ ಕಾಳಜಿ ಇಲ್ಲ| ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೂ ಕಿರಿಕಿರಿ ಎಂದು ಕಿಡಿ|
ಬೀದರ್(ಫೆ.24): ಬಡವರ ಹಸಿವು ನಿವಾರಣೆ ಮಾಡಲು ನಾವು ಆರಂಭಿಸಿದ್ದ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ವಿತರಣೆ ಕಡಿಮೆ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡ್ತೇವೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಭಾನುವಾರ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಸಿಎಎ ವಿರುದ್ಧದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳು ಪ್ರತಿಯೊಬ್ಬರಿಗೆ 7ಕೆಜಿ ಅಕ್ಕಿ ಉಚಿತವಾಗಿ ಕೊಡುವ ಯೋಜನೆ ನಮ್ಮದಾಗಿತ್ತು. ಅದನ್ನು ಕಡಿಮೆ ಮಾಡಿದರೆ ಇವರು ಬಡವರ ವಿರೋಧಿ ಎಂದು ಸಾಬೀತಾಗುತ್ತದೆ. ಬಡವರು ತಿರುಗಿ ಬೀಳುತ್ತಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿಗೆ ಬಡವರ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆಯಾಗಲಿ ಕಾಳಜಿ ಇಲ್ಲ. ಕೈಗಾರಿಕೋದ್ಯಮಗಳು, ಸಿರಿವಂತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಕೆಳ ವರ್ಗದ, ಕೆಳ ಸಮಾಜದ ಬಗ್ಗೆ, ಕಾಯಕ ಜೀವಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ ಎಂದು ಆರೋಪಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಿಂದುಗಳಿಗೂ ಕಿರಿಕಿರಿ:
ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರೋಧಿಯಾಗಿದೆ. ಈ ಸರ್ಕಾರಕ್ಕೆ ನಿರ್ದಿಷ್ಟವಾದ ಗೊತ್ತು ಗುರಿಯಿಲ್ಲ. ದೇಶದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಕೊಡುವುದು ಸಂವಿಧಾನದ ಆಶಯ. ಆದರೆ, ಸರ್ಕಾರದವರು ಸಂವಿಧಾನದ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದರು.
ಸಿಎಎ ಇಂದ ಮುಸ್ಲಿಮರಿಗಷ್ಟೇ ಅಲ್ಲ ದಲಿತರು, ಅಲೆಮಾರಿಗಳು, ಹಿಂದುಗಳಿಗೂ ತೊಂದರೆಯಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ವಿಷಯವಾಗಿ ಸಂವಿಧಾನ ಹೇಳಿಲ್ಲ ಎಂದು ತಿಳಿಸಿದರು.