ಬೆಂಗಳೂರು(ಫೆ.14): ಪೊಲೀಸರ ವರ್ಗಾವಣೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಸದಸ್ಯರು ಮತ್ತು ಸಂಸದರು ಮಾಡುವ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸಲಾಗುವುದು ಎಂದು ರಾಜ್ಯ ಪೊಲೀಸ್‌ ಸಿಬ್ಬಂದಿ ನೇಮಕಾತಿ ಮಂಡಳಿ ಮುಖ್ಯಸ್ಥರೂ ಆದ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.

ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ನಿಯಮ ಬಾಹಿರವಾಗಿ ಶಿಫಾರಸು ಮಾಡಿರುವ 24 ಜನಪ್ರತಿನಿಧಿಗಳ ವಿರುದ್ಧ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ನಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂದು ವೈದ್ಯರ ಮೇಲೆ ರೌಡಿ ಅಟ್ಟಹಾಸ!

ವಿಚಾರಣೆ ವೇಳೆ ಸರ್ಕಾರಿ ವಕೀಲರು, ನೂತನ ಡಿಜಿಪಿ ಪ್ರವೀಣ್‌ ಸೂದ್‌ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಿದರು. ಪೊಲೀಸರ ವರ್ಗಾವಣೆಗೆ ಅಥವಾ ಕಾರ್ಯ ನಿರ್ವಹಿಸುತ್ತಿರುವ ಹಾಲಿ ಜಾಗದಲ್ಲೇ ಉಳಿಸುವುದಕ್ಕೆ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರು, ಸಂಸದರು ನೀಡುವ ಶಿಫಾರಸು ಪತ್ರಗಳನ್ನು ಪೊಲೀಸ್‌ ಸಿಬ್ಬಂದಿ ನೇಮಕಾತಿ ಮಂಡಳಿಯಿಂದ ನಿರ್ಲಕ್ಷಿಸಲಾಗುತ್ತದೆ.

ಪ್ರೇಮಿಗಳ ದಿನ: 10 ಲಕ್ಷ ಗುಲಾಬಿ ಹೂವಿಗೆ ಬೇಡಿಕೆ, ಬೆಲೆಯೂ ಏರಿಕೆ

ಹಾಗೆಯೇ, ಪೊಲೀಸ್‌ ವರ್ಗಾವಣೆ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ಮತ್ತು ಪ್ರಕಾಶ್‌ ಸಿಂಗ್‌ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ತೀರ್ಪನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಡಿಜಿಪಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.