ಅಕ್ರಮ ಗಣಿಗಾರಿಕೆ ಹಿಂದೆ ರಾಜಕಾರಣಿಗಳ ಕೈವಾಡ..!

* ಕೆಆರ್‌ಎಸ್‌ ಉಳಿವಿನ ಹೋರಾಟದ ದನಿ ಅಡಗಿಸಿದ ರಾಜಕಾರಣ
* ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ರಾಜಕೀಯ ಪಕ್ಷಗಳ ದೋಸ್ತಿ
* ಕೆಆರ್‌ಎಸ್‌ ಸಂರಕ್ಷಣೆಗಾಗಿ ಸಾಮೂಹಿಕ ಹೋರಾಟ 
 

Politicians Did Politics in KRS Dam Issue grg

ಮಂಡ್ಯ ಮಂಜುನಾಥ

ಮಂಡ್ಯ(ಜು.16): ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿ ಮತ್ತು ಸರ್‌.ಎಂ.ವಿಶ್ವೇಶ್ವರಯ್ಯನವರ ತಾಂತ್ರಿಕತೆಯ ಫಲದಿಂದ ಐತಿಹಾಸಿಕವಾಗಿ ನಿರ್ಮಾಣಗೊಂಡ ಕೃಷ್ಣರಾಜಸಾಗರ ಜಲಾಶಯಕ್ಕೆ ಕಲ್ಲು ಗಣಿಗಾರಿಕೆಯಿಂದಾಗಿ ಅಪಾಯದ ಮುನ್ಸೂಚನೆ ವ್ಯಕ್ತವಾಗುತ್ತಿದ್ದರೂ ಜಿಲ್ಲೆಯಲ್ಲಿ ಕೆಆರ್‌ಎಸ್‌ ಉಳಿವಿನ ಪರವಾದ ಧ್ವನಿ ಬಲವಾಗಿ ಕೇಳಿಬಾರದಿರುವುದು ಜಿಲ್ಲೆಯ ದೊಡ್ಡ ದುರಂತ.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲೆಲ್ಲಾ ಉಗ್ರ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನವನ್ನು ಸೆಳೆಯುತ್ತಿದ್ದ ಮಂಡ್ಯ ಜಿಲ್ಲೆಯಲ್ಲಿ ಈಗ ಕೆಆರ್‌ಎಸ್‌ ಸಂರಕ್ಷಣೆಗಾಗಿ ಸಾಮೂಹಿಕ ಹೋರಾಟಗಳು ತಲೆ ಎತ್ತದಿರುವುದರ ಸುತ್ತ ರಾಜಕಾರಣದ ಮೇಲಾಟ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಕಾವೇರಿ ವಿಚಾರ ಬಂದಾಗಲೆಲ್ಲಾ ಜಿಲ್ಲೆಯ ರೈತರ ಪರ ಧ್ವನಿ ಎತ್ತುವ ರಾಜಕೀಯ ಪಕ್ಷಗಳೂ ಗಣಿಗಾರಿಕೆ ಸ್ಥಗಿತಗೊಳಿಸುವ ಮೂಲಕ ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ ಸಂರಕ್ಷಣೆ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸದಿರುವುದು ನಾಗರಿಕರಲ್ಲಿ ಅಸಮಾಧಾನ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ; ಸಿಎಂ, ಗಣಿ ಸಚಿವರ ಭೇಟಿಗೆ ಸುಮಲತಾ ನಿರ್ಧಾರ

ಕಾವೇರಿಗಾಗಿ ಪ್ರಾಣದ ಹಂಗು ತೊರೆದು ಹೋರಾಡಲು ಸಿದ್ಧರಾಗುತ್ತಿದ್ದ ಹಲವು ಮುಂಚೂಣಿ ನಾಯಕರು ಹಾಗೂ ಕೆಲವು ರಾಜಕೀಯ ಮುಂದಾಳುಗಳು ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿದೆ ಎಂಬ ಮಾಹಿತಿ ಇದ್ದರೂ ತಮಗೇನೂ ಗೊತ್ತಿಲ್ಲದವರಂತೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ರೈತ ಹಿತರಕ್ಷಣಾ ಸಮಿತಿ ಮೌನ: 

ಕಾವೇರಿ ಚಳವಳಿಯ ಸಾರಥ್ಯವನ್ನು ಸಾಂಪ್ರದಾಯಿಕವಾಗಿ ವಹಿಸಿಕೊಂಡು ಬಂದಿದ್ದ ರೈತ ಹಿತರಕ್ಷಣಾ ಸಮಿತಿಯಂತಹ ಸಂಘಟನೆ ಕೂಡ ಈ ವಿಚಾರದಲ್ಲಿ ಮೌನ ವಹಿಸಿರುವುದು ಪ್ರಶ್ನೆಯಾಗಿ ಕಾಡುತ್ತಿದೆ. ಅಲ್ಲದೆ, ಪಕ್ಷಾತೀತ ವೇದಿಕೆಯಾಗಿ ಬಿಂಬಿತವಾಗಿದ್ದ ಈ ಸಂಘಟನೆ ಕೆಆರ್‌ಎಸ್‌ ಉಳಿವಿನ ವಿಚಾರದಲ್ಲಿ ಕನಿಷ್ಠ ಸಮಾಲೋಚನೆಗೂ ಮುಂದಾಗದಿರುವುದು ಶಂಕೆಗೆ ಕಾರಣವಾಗಿದೆ.

ಸಂಘಟನೆಗಳು ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಆಗುವ ಅಪಾಯದ ವಿರುದ್ಧ ಸಾಂಕೇತಿಕ ಹೋರಾಟಗಳನ್ನು ನಡೆಸಿವೆಯಷ್ಟೇ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎನ್‌.ಮಂಜುಶ್ರೀ ಸೇರಿದಂತೆ ಕೆಲವು ನಿಷ್ಠಾವಂತ ಅಧಿಕಾರಿಗಳ ಗಣಿಗಾರಿಕೆ ವಿರೋಧಿ ಹೋರಾಟಕ್ಕೆ ಮತ್ತೆ ಕೆಲವು ಅಧಿಕಾರಿ ವರ್ಗ ಬೆಂಬಲಕ್ಕೆ ನಿಲ್ಲದಿರುವುದೂ ಗಣಿಗಾರಿಕೆ ಸ್ಥಗಿತಕ್ಕೆ ಅಡ್ಡಿಯಾಗಿದೆ.

ಗಣಿಗಾರಿಕೆಯಲ್ಲೂ ದೋಸ್ತಿ: 

ಗಣಿಗಾರಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೊಡಗಿವೆ. ಸಾಂಪ್ರದಾಯಿಕ ಎದುರಾಳಿ ಪಕ್ಷಗಳು ಗಣಿಗಾರಿಕೆ ವಿಚಾರದಲ್ಲಿ ಪರಸ್ಪರ ಸಮನ್ವಯತೆ ಕಾಯ್ದುಕೊಂಡಿವೆ. ಈಗ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಮಾಲಿಕತ್ವದಲ್ಲಿ ಎಲ್ಲಾ ಪಕ್ಷಗಳ ಮುಖಂಡರ ಪಾಲುದಾರಿಕೆ ಇರುವುದರಿಂದ ಗಣಿಗಾರಿಕೆ ವಿರುದ್ಧ ರಾಜಕೀಯವಾದ ಪ್ರತಿರೋಧ ವ್ಯಕ್ತವಾಗುತ್ತಿಲ್ಲ. ಇದು ಅಕ್ರಮ ಗಣಿಗಾರಿಕೆಗೆ ಸಹಕಾರಿಯಾಗಿದೆ ಎಂಬುದು ಜನಮಾನಸದಲ್ಲಿ ಕೇಳಿಬರುತ್ತಿರುವ ಮಾತು.
ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಪ್ರತಿ ಚುನಾವಣೆಗಳಲ್ಲೂ ಹೋರಾಟ ನಡೆಸುವ ಬಿಜೆಪಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಕೆಆರ್‌ಎಸ್‌ ಉಳಿವಿನ ಹೋರಾಟವನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದೆ.

Latest Videos
Follow Us:
Download App:
  • android
  • ios