Asianet Suvarna News Asianet Suvarna News

ಡಿಕೆಶಿ-ಸಿಪಿವೈಗೆ ರಾಜಕೀಯ ಅಳಿವು ಉಳಿವಿನ ಪ್ರಶ್ನೆ

- ಸೋತರೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುವ ಆತಂಕ ಡಿಕೆಶಿಗೆ

- ರಾಜಕೀಯವಾಗಿ ಪ್ರಬಲರಾಗಲು ಜೆಡಿಎಸ್ ಚಿಹ್ನೆ ಅಡಿ ಸ್ಪರ್ಧೆಗೆ ಸಿಪಿವೈ ಸಿದ್ಧ

Political extinction for DKH-CPY is a question of survival snr
Author
First Published Jun 22, 2024, 12:05 PM IST

ಎಂ.ಅಫ್ರೋಜ್ ಖಾನ್

  ರಾಮನಗರ : ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೆನ್ನುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸೈನಿಕ ಖ್ಯಾತಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಮುಖಾಮುಖಿಯಾದಲ್ಲಿ ಉಭಯ ನಾಯಕರಿಗೆ ರಾಜಕೀಯವಾಗಿ ಅಳಿವು ಉಳಿವಿನ ಪ್ರಶ್ನೆ ಎದುರಾಗಲಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರ ಸ್ಪರ್ಧೆ ಹೊಸದಲ್ಲ. ಆದರೀಗ ಡಿ.ಕೆ.ಶಿವಕುಮಾರ್ ಅಖಾಡ ಪ್ರವೇಶಿಸಿ ಸಿ.ಪಿ.ಯೋಗೇಶ್ವರ್ ಪ್ರತಿಸ್ಪರ್ಧಿಯಾದಲ್ಲಿ ಚುನಾವಣಾ ಕಣ ಮತ್ತಷ್ಟು ರಂಗೇರುವುದರಲ್ಲಿ ಅನುಮಾನ ಇಲ್ಲ. ಇದಕ್ಕೆ ಉಭಯ ನಾಯಕರು ಆರಂಭಿಸಿರುವ ವಾಕ್ಸಮರವೇ ಸಾಕ್ಷಿಯಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ.ಶಿವಕುಮಾರ್ ರವರ ಸಹೋದರ ಡಿ.ಕೆ.ಸುರೇಶ್ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ.ಸಿ.ಎನ್‌.ಮಂಜುನಾಥ್ ವಿರುದ್ಧ 2.60 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋತಿದ್ದಾರೆ. ಚನ್ನಪಟ್ಟಣ ಇದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವುದರಿಂದ ಉಪಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.ಟ್ರಬಲ್ ಶೂಟರ್‌ನ ಲೆಕ್ಕಚಾರಗಳೇನು?

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಗೆದ್ದು ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಈಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುತ್ತಾರೆಂಬ ಕಾರಣಕ್ಕೆ ರಾಜಕೀಯ ಚಟುವಟಿಕೆ ಬಿರಿಸು ಪಡೆದುಕೊಂಡಿದೆ. ಇನ್ನು ಸಾಕಷ್ಟು ಆಲೋಚನೆಗಳನ್ನು ಮುಂದಿಟ್ಟುಕೊಂಡೇ ಉಪಚುನಾವಣೆಗೆ ಸನ್ನದ್ಧರಾಗುತ್ತಿದ್ದಾರೆ ಎಂಬುದು ಡಿ.ಕೆ.ಶಿವಕುಮಾರ್ ನಡೆಯಿಂದ ವ್ಯಕ್ತವಾಗುತ್ತಿದೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬ ರಾಜಕೀಯವಾಗಿ ಬದ್ಧ ವೈರಿಗಳು. ಸಹೋದರನ ಸೋಲಿಗೆ ಕಾರಣವಾಗಿರುವ ದೇವೇಗೌಡರ ಕುಟುಂಬವನ್ನು ಹಿನ್ನಡೆ ಅನುಭವಿಸುವಂತೆ ಮಾಡುವುದು. ಆ ಮೂಲಕ ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗ ಸಮುದಾಯದ ನಾಯಕತ್ವ ತಮ್ಮ ಕೈತಪ್ಪಿ ಗೌಡರ ಕುಟುಂಬದ ವಶವಾಗದಂತೆ ಎಚ್ಚರ ವಹಿಸುವುದು. ಇದಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸಹೋದರನ ಪರಾಭವದ ನಂತರ ಪಕ್ಷದೊಳಗೇ ತನ್ನ ವಿರುದ್ಧ ವಿರೋಧಿಗಳು ಪ್ರಬಲರಾಗುವುದಕ್ಕೆ ಕಡಿವಾಣ ಹಾಕುವುದು. ಪಕ್ಷದೊಳಗೆ ಕೈ ತಪ್ಪಿ ಹೋಗಬಹುದಾದ ತನ್ನ ಸಾರ್ವಭೌಮತ್ವವನ್ನು ಮರಳಿ ಸ್ಥಾಪಿಸುವುದು. ಇದಲ್ಲದೇ ಉಪ ಚುನಾವಣೆಯಲ್ಲಿ ಗೆದ್ದರೆ ತೆರವಾಗಲಿರುವ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಸೋದರ ಡಿ.ಕೆ.ಸುರೇಶ್ ಅವರನ್ನೇ ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು. ಈ ಎಲ್ಲ ವಿದ್ಯಮಾನಗಳ ನಂತರ ತನ್ನ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿ ಸ್ಥಾನ ಪಡೆಯಲು ಹೋರಾಟ ಆರಂಭಿಸುವ ಆಲೋಚನೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರವಷ್ಟೇ ಮುಖ್ಯಮಂತ್ರಿ ಕುರ್ಚಿ ಏರುವ ಕನಸನ್ನು ಈಡೇರಿಸಿಕೊಳ್ಳಲು ದಾರಿ ಸುಲಭವಾಗಲಿದೆ. ಸೋತರೆ ರಾಜಕೀಯವಾಗಿ ಹಿನ್ನಡೆ ಅನುಭವಿಸುವ ಜೊತೆಗೆ ಪಕ್ಷದೊಳಗೂ ಮಾನ್ಯತೆ ಕಳೆದುಕೊಳ್ಳುತ್ತಾರೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ತ್ಯಜಿಸುವ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂಬ ಆತಂಕ ಸ್ವತಃ ಡಿ.ಕೆ.ಶಿವಕುಮಾರ್ ಅವರಿಗೂ ಕಾಡುತ್ತಿದೆ.

ಯುದ್ಧಕ್ಕೆ ಸೈನಿಕನ ತಯಾರಿ:

ದೇವೇಗೌಡ ಕುಟುಂಬದೊಂದಿಗೆ ಸಿ.ಪಿ.ಯೋಗೇಶ್ವರ್ ಹೊಂದಿದ್ದ ರಾಜಕೀಯ ವೈಮನಸ್ಸು ಶಮನಗೊಂಡಿದೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸುವುದರಲ್ಲಿ ಸಿ.ಪಿ.ಯೋಗೇಶ್ವರ್ ಪಾತ್ರ ಕೂಡ ದೊಡ್ಡದಿದೆ.

ಈ ಹಿಂದೆ ಚನ್ನಪಟ್ಟಣ ಕ್ಷೇತ್ರದಿಂದ ಮೂರು ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳ ಚಿಹ್ನೆಗಳಲ್ಲಿ ಸ್ಪರ್ಧಿಸಿ ಗೆದ್ದಿರುವ ಸಿ.ಪಿ.ಯೋಗೇಶ್ವರ್, ಮೂರು ಚುನಾವಣೆಗಳಲ್ಲಿ ಸೋತಿದ್ದರೂ ಗಳಿಸಿರುವ ಮತಗಳ ಪ್ರಮಾಣ ದೊಡ್ಡದಿದೆ. ಹೀಗಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ವೋಟ್ ಬ್ಯಾಂಕ್ ಹೊಂದಿರುವ ಅವರು ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೊಂದಿದ್ದಾರೆ. ಕಳೆದ ಎರಡು ಚುನಾವಣೆಗಳ ಸೋಲಿನಿಂದ ಕಂಗ್ಗೆಟ್ಟಿರುವ ಯೋಗೇಶ್ವರ್ , ವಿಧಾನಸಭೆ ಪ್ರವೇಶಿಸಿ ರಾಜಕೀಯವಾಗಿ ಪ್ರಬಲರಾಗಲು ಹವಣಿಸುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ 15,915 ಮತಗಳ ಅಂತರದಿಂದ ಸೋತರೂ ಬಿಜೆಪಿ ಅಭ್ಯರ್ಥಿಯಾಗಿ 80, 677 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಂಗಾಧರ್ ಕೇವಲ 15,374 ಮತಗಳನ್ನು ಮಾತ್ರ ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಮತಗಳಿಕೆ ಪ್ರಮಾಣದ ವ್ಯತ್ಯಾಸ ಕೇವಲ ಶೇ.8ರಷ್ಟಿತ್ತು ಎಂಬುದು ಗಮನಾರ್ಹ ಅಂಶ. ಇದಕ್ಕೂ ಮುನ್ನ ನಡೆದಿದ್ದ 2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಯೋಗೇಶ್ವರ್ 66,465 ಮತ ಪಡೆದರೆ, ಜೆಡಿಎಸ್ ನ ಕುಮಾರಸ್ವಾಮಿ 87,885 ಮತಗಳನ್ನು ಗಳಿಸಿದ್ದರು. 2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಯೋಗೇಶ್ವರ್ 80,099 ಮತಗಳನ್ನು ಗಳಿಸಿದರೆ, ಜೆಡಿಎಸ್ ನ ಅನಿತಾ ಕುಮಾರಸ್ವಾಮಿ 73,635 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ ನಿಂದ 2008ರಲ್ಲಿ 69,356, 2004ರಲ್ಲಿ 64,162 ಹಾಗೂ 1999ರಲ್ಲಿ ಪಕ್ಷೇತರರಾಗಿ 50,716 ಮತಗಳನ್ನು ಪಡೆದು ಯೋಗೇಶ್ವರ್ ಗೆಲುವು ಸಾಧಿಸಿದವರು.

ಪ್ರತಿ ಚುನಾವಣೆಗಳಲ್ಲೂ ಯೋಗೇಶ್ವರ್ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಯೋಗೇಶ್ವರ್ ಇಲ್ಲಿ ರಾಜಕೀಯವಾಗಿ ಪ್ರಬಲ ಶಕ್ತಿ ಎಂಬದನ್ನು ಅಲ್ಲಗಳೆಯಲು ಆಗುವುದಿಲ್ಲ. ಈ ಬಾರಿ ಉಪ ಚುನಾವಣೆಗೆ ಬಿಜೆಪಿ ಅಥವಾ ಜೆಡಿಎಸ್ ಪೈಕಿ ಯಾವುದಾದರು ಪಕ್ಷದ ಚಿಹ್ನೆಯಿಂದ ಕಣಕ್ಕಿಳಿಯಲು ಆಸಕ್ತರಾಗಿದ್ದಾರೆ.

ದಳಕ್ಕೆ ಕ್ಷೇತ್ರ ಉಳಿಸಿಕೊಳ್ಳುವ ಇರಾದೆ:

ಆದರೆ, ಜೆಡಿಎಸ್ ಗೆದ್ದಿರುವ ಕ್ಷೇತ್ರವಾಗಿರುವ ಕಾರಣ ಚನ್ನಪಟ್ಟಣದಿಂದ ದೇವೇಗೌಡರ ಪುತ್ರಿ ಅನುಸೂಯ ಅಥವಾ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುತ್ತಾರೆ. ಹೀಗಾಗಿ ಎರಡೂ ಪಕ್ಷಗಳು ಮೈತ್ರಿಕೂಟಕ್ಕೇ ಸೇರಿದವಾದರೂ ಜೆಡಿಎಸ್ ಈ ಕ್ಷೇತ್ರವನ್ನು ಭವಿಷ್ಯದ ರಾಜಕಾರಣದ ದೃಷ್ಟಿಯಿಂದಲೂ ತನ್ನ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಉಪಚುನಾವಣೆ ದಿಗ್ಗಜ ನಾಯಕರ ರಾಜಕೀಯ ಏಳು ಬೀಳುಗಳಿಗೆ ಸಾಕ್ಷಿಯಾಗಲಿರುವುದರಿಂದ ಚನ್ನಪಟ್ಟಣ ಕ್ಷೇತ್ರದ ಮತದಾರರು ಯಾವ ನಾಯಕನ ಕೈ ಹಿಡಿಯಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

Latest Videos
Follow Us:
Download App:
  • android
  • ios