ರುದ್ರಪ್ಪ ಆಸಂಗಿ 

ವಿಜಯಪುರ(ಮಾ.10): ಮಾಜಿ ಸಚಿವ, ಜೆಡಿಎಸ್‌ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್‌ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ.

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಮಂಗಳವಾರವಷ್ಟೇ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸೇರಿದ ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಕೈ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ತಮಗೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ, ರವಿಕಾತ ಪಾಟೀಲರ ಪುತ್ರ ವಿರಾಟ ಪಾಟೀಲ, ವಿಠಲ ಕೊಳ್ಳೂರು, ಮಾಜಿ ಶಾಸಕ ಶರಣಪ್ಪ ಸುಣಗಾರ, ಕಳೆದ ಬಾರಿ ಸೋತಿದ್ದ ಮಲ್ಲಣ್ಣ ಸಾಲಿ, ಮಹಿಳಾ ಖೋಟಾದಲ್ಲಿ ಮಾಜಿ ಸಚಿವ ಹುಲ್ಲಪ್ಪ ಮೇಟಿ ಪುತ್ರಿ ಬಾಯಕ್ಕ ಮೇಟಿ, ವಿಜಯಪುರ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮುಂತಾದವರ ಹೆಸರುಗಳೂ ಕಾಂಗ್ರೆಸ್ಸಿನಲ್ಲಿ ಮುಂಚೂಣಿಯಲ್ಲಿವೆ.

ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಅವರು ಟಿಕೆಟ್‌ಗಾಗಿ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ತೀರ ಈಚೆಗಷ್ಟೇ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಅವರ ನಿವಾಸಕ್ಕೆ ರವಿಕಾಂತ ಪಾಟೀಲ ಭೇಟಿಯಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ನನಗೆ ಸಿಗದಿದ್ದರೆ ಬೇಡ. ಕೊನೆಯ ಪಕ್ಷ ನನ್ನ ಪುತ್ರ ವಿರಾಟನಿಗಾದರೂ ಟಿಕೆಟ್‌ ನೀಡಬೇಕು ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿಯೂ ಇದೆ ಪೈಪೋಟಿ:

ಬಿಜೆಪಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಶಾಸಕ ರಮೇಶ ಭೂಸನೂರ, ಶಂಭುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ, ಚಂದ್ರಶೇಖರ ನಾಗೂರ, ಅಶೋಕ ಅಲ್ಲಾಪುರ ಮುಂತಾದವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ. ಸಿಂದಗಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಸಹೋದರ ಅಶೋಕ ಮನಗೂಳಿ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲು ಮುಂದಾಗಿದ್ದಾರೆ. ಹೀಗಾಗಿ ಈಗ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಸದ್ಯಕ್ಕೆ ಜೆಡಿಎಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಹೆಸರುಗಳು ಮುಂಚೂಣಿಯಲ್ಲಿಲ್ಲ.

ದಳಪತಿಗಳಿಗೆ ಬಿಗ್ ಶಾಕ್: ಜೆಡಿಎಸ್‌ ಅಭ್ಯರ್ಥಿಯಾಗಬೇಕಿದ್ದ ನಾಯಕ ಕಾಂಗ್ರೆಸ್ ಸೇರ್ಪಡೆ

ಎಂ.ಸಿ. ಮನಗೂಳಿ ಅವರು 7 ಬಾರಿ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಜೆಡಿಎಸ್‌ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಎರಡೂ ಬಾರಿ ಸಚಿವರಾಗಿದ್ದು ವಿಶೇಷ. ಮನಗೂಳಿ ಅವರು ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಕಟ್ಟಿ ಬೆಳೆಸಿದ್ದರು. ಅವರ ನಿಧನದ ನಂತರವೂ ಅವರ ಹೆಸರದ ಛಾಪು ಇನ್ನೂ ಹಸಿರಾಗಿದೆ. ಅವರಿಗೆ ಅಶೋಕ ಮನಗೂಳಿ, ಡಾ. ಶಾಂತವೀರ ಮನಗೂಳಿ ಇಬ್ಬರು ಪುತ್ರರಿದ್ದಾರೆ. ಇವರಲ್ಲಿ ಯಾರನ್ನಾದರೂ ದಿ. ಮಾಜಿ ಸಚಿವರ ಉತ್ತರಾಧಿಕಾರಿಯನ್ನು ಮಾಡಬೇಕು ಎಂಬ ಆಸೆ ಮನಗೂಳಿ ಕುಟುಂಬ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿತ್ತು.

ಇಬ್ಬರು ಪುತ್ರರು ರಾಜಕೀಯದಲ್ಲಿ ಅನುಭವಿಕರೇ. ಅಶೋಕ ಮನಗೂಳಿ ತಮ್ಮ ತಂದೆಯವರ ಜೊತೆಗೆ ರಾಜಕೀಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಡಾ. ಶಾಂತವೀರ ಮನಗೂಳಿ ಹಾಲಿ ಸಿಂದಗಿ ಪುರಸಭೆ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಯಾರಿಗಾದರೂ ಟಿಕೆಟ್‌ ಸಿಕ್ಕರೂ ಮನಗೂಳಿ ಅವರ ನಿಧನದ ಅನುಕಂಪದ ಅಲೆ ಮತಗಳು ಬರುತ್ತವೆ. ಪಕ್ಷಕ್ಕೆ ಗೆಲುವು ಕಟ್ಟಿಟ್ಟಬುತ್ತಿ ಎಂಬುದು ಜೆಡಿಎಸ್‌ ಲೆಕ್ಕಾಚಾರವಾಗಿತ್ತು. ಆ ಕಾರಣಕ್ಕಾಗಿಯೇ ಇವರಿಬ್ಬರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್‌ ನೀಡಬೇಕು ಎಂಬ ತರಾತುರಿಯಲ್ಲಿ ಜೆಡಿಎಸ್‌ ಇತ್ತು. ಆದರೆ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಅಶೋಕ ಮನಗೂಳಿ ಅವರು ಕಾಂಗ್ರೆಸ್‌ ಸೇರಿದ್ದಾರೆ. ಈ ಮೂಲಕ ಜೆಡಿಎಸ್‌ಗೆ ಶಾಕ್‌ ನೀಡಿದ್ದಾರೆ. ಉಪಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ಸವಾಲಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಲಾಗುತ್ತಿದೆ.