ದಳಪತಿಗಳಿಗೆ ಬಿಗ್ ಶಾಕ್: ಜೆಡಿಎಸ್ ಅಭ್ಯರ್ಥಿಯಾಗಬೇಕಿದ್ದ ನಾಯಕ ಕಾಂಗ್ರೆಸ್ ಸೇರ್ಪಡೆ
ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಿದ್ದ ನಾಯಕ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದ ದಳಪತಿಗಳಿಗೆ ಬಿಗ್ ಶಾಕ್ ಆದಂತಾಗಿದೆ.
ಬೆಂಗಳೂರು, (ಮಾ.09): ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ದಿವಂಗತ ಎಂ.ಸಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು (ಮಂಗಳವಾರ) ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ಅಲ್ಲಂ ವೀರಭದ್ರಪ್ಪ, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿಂಧಗಿ ಉಪಚುನಾವಣೆಗೆ ಉಸ್ತುವಾರಿಗಳನ್ನ ನೇಮಿಸಿದ ಬಿಜೆಪಿ
ಇನ್ನು ಜೆಡಿಎಸ್ ಮೊದಲಿಗೆ ಈ ಬೈಲೆಕ್ಷನ್‌ನ್ ನಮ್ಮ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಹೇಳಿತ್ತು. ಬಳಿಕ ಇಲ್ಲ ಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅಶೋಕ್ ಮನಗೂಳಿ ಅವರನ್ನೇ ಕಣಕ್ಕಿಳಿಸಲು ಪ್ಲಾನ್ ಮಾಡಿತ್ತು. ಆದ್ರೆ, ಅಶೋಕ್ ಅವರು ಇದೀಗ ಕಾಂಗ್ರೆಸ್ ಸೇರಿದ್ದು ದಳಪತಿಗಳಿಗೆ ಬಿಗ್ ಶಾಕ್ ಆದಂತಾಗಿದೆ.
ಮನಗೂಳಿ ಮೊದಲೇ ಹೇಳಿದ್ರಾ?
ನಿಧನಕ್ಕೂ ಮೊದಲು ಎಂ.ಸಿ ಮನಗೂಳಿ ನಮ್ಮನ್ನ ಭೇಟಿ ಮಾಡಿದ್ದರು. ಅವರು ಸಾವನ್ನಪ್ಪುವ 15 ದಿನ ಮುಂಚೆ ನಮ್ಮನ್ನ ಭೇಟಿ ಮಾಡಿ ಮಗನನ್ನ ನಿಮ್ಮ ತೆಕ್ಕೆಗೆ ಹಾಕ್ತಿದ್ದೇನೆ ಎಂದು ಹೇಳಿದ್ದರು. ತುಂಬಾ ನೋವಿನಿಂದ ಹೇಳಿ ಹೋಗಿದ್ದರು ಎಂದು ಡಿಕೆ ಶಿವಕುಮಾರ್ ಈ ಹಿಂದಿನ ಮಾತುಗಳನ್ನು ಮೆಲುಕು ಹಾಕಿದರು.
ಯಾವ ಷರತ್ತೂ ಇಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಅಶೋಕ್ ಹೇಳಿದ್ದರು. ಯಾವಾಗ ಬೇಕಾದರೂ ಉಪಚುನಾವಣೆ ಬರಬಹುದು. ಪಕ್ಷದಲ್ಲಿ ಎಲ್ಲರೂ ಒಪ್ಪಿದ ಬಳಿಕ ಸೇರ್ಪಡೆ ಮಾಡಿಕೊಂಡಿದ್ದೇವೆ. ಅಲ್ಲಂ ವೀರಭದ್ರಪ್ಪ ನೇತೃತ್ವದ ಪಕ್ಷ ಸೇರ್ಪಡೆ ಸಮಿತಿಯ ಶಿಫಾರಸು ಆಧರಿಸಿ ಸೇರಿಸಿಕೊಳ್ತಿದ್ದೇವೆ. ಇದಕ್ಕೆ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರು ಎಲ್ಲರೂ ಒಪ್ಪಿಗೆ ಕೊಟ್ಟ ನಂತರವೇ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.