ಚಾರ್ಮಾಡಿ ಘಾಟಿಯ ಜಲಪಾತಗಳ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು, ಜಾರುವ ಬಂಡೆಗಳ ಮೇಲೆ ಅಪಾಯಕಾರಿಯಾಗಿ ಸಾಹಸ ಮಾಡುತ್ತಿದ್ದಾರೆ. ಪೊಲೀಸರ ಎಚ್ಚರಿಕೆ ನಡುವೆಯೂ ಕೆಲವರು ಪ್ರಾಣವನ್ನೇ ಪಣಕ್ಕಿಟ್ಟು ಮೋಜು ಮಸ್ತಿಯಲ್ಲಿ ತೊಡಗುತ್ತಿರುವುದು ಆತಂಕಕಾರಿ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆಗಾಲದ ಜಲಪಾತಗಳು ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ, ಈ ನಿಸರ್ಗಸೌಂದರ್ಯವನ್ನು ಅನುಭವಿಸುವ ನೆಪದಲ್ಲಿ ಕೆಲ ಪ್ರವಾಸಿಗರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹುಚ್ಚಾಟ ಮೆರೆದಿರುವ ಘಟನೆಗಳು ನಿತ್ಯ ನಡೆಯುತ್ತಿವೆ.
ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಬಂಡೆಗಳು ಅತ್ಯಂತ ಜಾರುವ ಸ್ಥಿತಿಯಲ್ಲಿದೆ. ಆದರೂ ಕೂಡ ಪ್ರವಾಸಿಗರು ಬಂಡೆಗಳ ಮೇಲೆ ಹತ್ತಿ, ಜಲಪಾತದ ಮಧ್ಯೆ ಅವಿವೇಕದಿಂದ ಮೋಜು-ಮಸ್ತಿಯಲ್ಲಿ ತೊಡಗಿರುವುದು ಆತಂಕ ಹುಟ್ಟಿಸಿದೆ. ಒಂದು ವೇಳೆ ಬಂಡೆ ಕಲ್ಲಿನ ಮೇಲೆ ನಿಂತು ಸ್ವಲ್ಪ ಜಾರಿ ಬಿದ್ರೆ ಸಾಕು ಮೂಳೆ ಕೂಡ ಸಿಗದಂತಹ ಪ್ರಪಾತಗಳು ಚಾರ್ಮಾಡಿಯಲ್ಲಿದೆ.
ಈ ಹಿಂದೆ ಇದೇ ಪ್ರದೇಶದಲ್ಲಿ ಹಲವು ಪ್ರವಾಸಿಗರು ಜಾರಿ ಬಿದ್ದು ಕೈ-ಕಾಲು ಮುರಿದುಕೊಂಡಿರುವ ಘಟನೆಗಳು ನಡೆದಿವೆ. ಕೆಲವು ಕೇಸ್‌ಗಳಲ್ಲಿ ಜೀವಹಾನಿಯೂ ಸಂಭವಿಸಿದೆ. ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಆದರೆ, ಕೆಲವರು ಪೊಲೀಸರ ಕಣ್ತಪ್ಪಿಸಿ ಬೇರೆ ಬದಿಯಿಂದ ಬಂಡೆಗಳ ಮೇಲೆ ಹತ್ತಿ ಮತ್ತೆ ಮುಜುಗರಕ್ಕೆ ಎಡಪಡುವಂತಾಗಿದೆ. ಪೊಲೀಸರು ಒಂದು ಕಡೆ ಹಠಾತ್ ಬಂದರೆ, ಇನ್ನೊಂದು ಕಡೆ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಚಡಪಡಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ನಿರಂತರ ಮಳೆಯಿಂದ ಚಾರ್ಮಾಡಿ ಘಾಟಿ ಪ್ರದೇಶ ಇನ್ನಷ್ಟು ಅಪಾಯದ ಪರಿಸ್ಥಿತಿಗೆ ತಲೆದೋರಿದಾಗೂ ಕೆಲವರು ತಮ್ಮ ಕ್ಷಣಿಕ ಮೋಜಿಗಾಗಿ ಜೀವನದ ಮೇಲೆಯೇ ಕ್ರೀಡೆ ಮಾಡುತ್ತಿರುವುದು ದುರಂತದ ಸೂಚನೆಯಾಗಿದೆ.
