೨೦೧೯ರ ಭಾರೀ ಮಳೆಯ ನೆನಪಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆ, ಐಎಂಡಿ ಮುನ್ಸೂಚನೆಯಂತೆ ಮತ್ತೆ ಭಾರಿ ಮಳೆಗೆ ಸಜ್ಜಾಗಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ನಿಯೋಜಿಸಿ, ದುರಸ್ತಿ ಕಾರ್ಯ ಕೈಗೊಂಡಿದೆ. ಚಾರ್ಮಾಡಿ ಘಾಟ್, ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡಲಾಗುವುದು. ಭೂಕುಸಿತ ಸಂಭವನೀಯ ಪ್ರದೇಶಗಳಲ್ಲಿ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಿಕ್ಕಮಗಳೂರು (ಮೇ 20): ಕಳೆದ 2019ರ ಆಗಸ್ಟ್ 9ರ ದಿನ ಕಾಫಿನಾಡಿಗರ ಪಾಲಿಗೆ ಇಂದಿಗೂ ಬ್ಲಾಕ್ ಡೇ. ಯಾಕಂದ್ರೆ, ಅಂದು ಒಂದೇ ರಾತ್ರಿಗೆ 22 ಇಂಚು ಮಳೆ ಸುರಿದಿತ್ತು. ಅಂದಿನ ಸಮಸ್ಯೆಗೆ ಇಂದಿಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಆದ್ರೆ, ಈ ಬಾರಿ ಮತ್ತೆ ಐ.ಎಂ.ಡಿ. ಅಂತದ್ದೇ ಮಳೆ ಸುರಿಯುತ್ತೆ ಎಂದು ಕಾಫಿನಾಡಿಗೆ ಎಚ್ಚರಿಕೆ ನೀಡಿದೆ. ಹಾಗಾಗಿ, ಈ ವರ್ಷ ಕಾಫಿನಾಡು ಚಿಕ್ಕಮಗಳೂರಿಗೆ ಜೂನ್-ಜುಲೈ-ಆಗಸ್ಟ್ ತಿಂಗಳನ್ನ ಡೇಂಜರ್ ಎಂದೇ ಪರಿಗಣಿಸಲಾಗಿದೆ.

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ:
ಐ.ಎಂ.ಡಿ. ಅಲರ್ಟ್ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತ ಕೂಡ ಮಳೆ ಸೆಡ್ಡು ಹೊಡೆಯಲು ಸರ್ವಸನ್ನದ್ಧವಾಗಿದ್ದು, ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಳೆ ಎದುರಿಸಲು ಗ್ರಾಮ ಪಂಚಾಯಿತಿ, ಹೋಬಳಿ ಕೇಂದ್ರ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ನೇಮಕವಾಗಿದ್ದಾರೆ. ಜನವರಿಯಿಂದ ಏಪ್ರಿಲ್‍ವರೆಗಿನ ರಣಬೇಸಿಗೆಯಲ್ಲೇ ಕಾಫಿನಾಡಲ್ಲಿ 56% ಮಳೆ ಜಾಸ್ತಿ ಮಳೆಯಾಗಿದ್ದು ಮಳೆಗಾಲ ಹೇಗಿರುತ್ತೋ ಅಂತ ಜನರಿಗಿಂತ ಜಿಲ್ಲಾಡಳಿತಕ್ಕೆ ಹೆಚ್ಚು ಟೆನ್ಷನ್ ಆಗಿದೆ. ಹಾಗಾಗಿ, ಕಾಳಜಿ ಕೇಂದ್ರ, ತರಬೇತಿನಿರತ ಸಿಬ್ಬಂದಿಗಳು, ಪೊಲೀಸ್-ಫಾರೆಸ್ಟ್-ಫೈರ್-ಮೆಸ್ಕಾಂ 24 ಗಂಟೆಯೂ ಅಲರ್ಟ್ ಆಗಿದ್ದಾರೆ. ಜಿಲ್ಲಾಡಳಿತ ಕೂಡ ಮಳೆ ಎದುರಿಸಲು ಶಸ್ತ್ರಸಜ್ಜಿತವಾಗಿ ತಯಾರಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಜಿಲ್ಲಾಧಿಕಾರಿ ಮೀನಾನಾಗರಾಜ್ ತಿಳಿಸಿದ್ದಾರೆ.

ಚಾರ್ಮಾಡಿ ಘಾಟ್-ಮುಳ್ಳಯ್ಯನಗಿರಿ ಮೇಲೆ ಹೆಚ್ಚು ನಿಗಾ:
ಕಳೆದ ವರ್ಷ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಹಾಗೂ ಮುಳ್ಳಯ್ಯನಗಿರಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಲ್ಯಾಂಡ್ ಸ್ಲೈಡ್ ಆಗಿತ್ತು. ಹಾಗಾಗಿ, ಈ ಬಾರಿ ಕೂಡ ಭಾರೀ ಮಳೆ ಮುನ್ಸೂಚನೆ ಇರೋದ್ರಿಂದ ಗಾಳಿ-ಮಳೆ ಪ್ರಮಾಣ ನೋಡಿಕೊಂಡು ಪ್ರವಾಸಿಗರಿಗೆ ನಿರ್ಬಂಧ ಅಥವ ಲಿಮಿಟೆಡ್ ಟೂರಿಸ್ಟ್‍ಗೆ ಜಿಲ್ಲಾಡಳಿತ ಚಿಂತಿಸಿದೆ. ಜೊತೆಗೆ ಈಗಾಗಲೇ ಮಲೆನಾಡಿನಾದ್ಯಂತ ಎಲ್ಲೆಲ್ಲಿ ರಸ್ತೆ-ಸೇತುವೆ-ಮರಗಳು ಬೀಳುವಂತಿವೆ, ವಿದ್ಯುತ್ ಕಂಬ ಬಾಗಿದೆ, ಲೈನ್‍ಗಳು ಜಗ್ಗಿವೆ ಅಲ್ಲೆಲ್ಲಾ ಕೂಡಲೇ ದುರಸ್ಥಿ ಮಾಡೋದಕ್ಕೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದು, ಆ ಕೆಲಸ ಕೂಡ ನಡೆಯುತ್ತಿದೆ. 22ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶ ಗುರುತಿಸಿದ್ದು ಅಲ್ಲಿ ಲ್ಯಾಂಡ್ ಸ್ಲೈಡ್ ಅಥವ ನೀರು ನುಗ್ಗುವ ಸಂಭವ ಎದುರಾದ್ರೆ ಅಲ್ಲಿನ ನಿವಾಸಿಗಳನ್ನ ಸ್ಥಳಾಂತರಿಸೋದಕ್ಕೂ ಸಿದ್ಧತೆ ಮಾಡಿಕೊಂಡಿದೆ. 

ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ಲ್ಯಾಂಡ್ ಸ್ಲೈಡ್ ಸ್ಥಳ ಪರಿಶೀಲನೆ ನಡೆಸಿದ್ದು 8 ಸ್ಥಳಗಳು ಡೇಂಜರ್ ಎಂದು ವರದಿ ನೀಡಿರೋದ್ರಿಂದ ಜಿಲ್ಲಾಡಳಿತ ಮತ್ತಷ್ಟು ಹೈ ಅಲರ್ಟ್ ಆಗಿದೆ. ಒಟ್ಟಾರೆ, ಐ.ಎಂ.ಡಿ. (ಭಾರತೀಯ ಹವಾಮಾನ ಇಲಾಖೆ) ಸೂಚನೆ ಹಿನ್ನೆಲೆ ಮಳೆ ಆರ್ಭಟ ಹೇಗಿರುತ್ತೋ ಅಂತ ಜಿಲ್ಲಾಡಳಿತ ಕೂಡ ಫುಲ್ ಅಲರ್ಟ್ ಆಗಿದೆ. ಆದರೆ, ಹೆಚ್ಚಾಗಿ ಘಟ್ಟ ಪ್ರದೇಶಗಳಲ್ಲಿ ಮನೆಗಳಿರೋ ಕಳಸ ಹಾಗೂ ಮೂಡಿಗೆರೆ ತಾಲೂಕು ದಾಖಲೆ ಮಳೆ ಬೀಳೋ ಪ್ರದೇಶಗಳಾಗಿದ್ದು ಅಲ್ಲಿ ಮತ್ಯಾವ ಅನಾಹುತ ಸೃಷ್ಟಿ ಆಗುತ್ತೋ ಅನ್ನೋ ಆತಂಕ ಜನಸಾಮಾನ್ಯರ ಜೊತೆ ಜಿಲ್ಲಾಡಳಿತಕ್ಕೂ ಇದೆ. ಆದರೆ, ಜಿಲ್ಲಾಡಳಿತ ಮಾತ್ರ ಎಂತದ್ದೇ ಪರಿಸ್ಥಿತಿಯನ್ನು ನಿಭಾಯಿಸಲು ಟೊಂಕ ಕಟ್ಟಿ ನಿಂತಿದೆ. ಆದರೆ, ಜನ ಮಾತ್ರ ಮಳೆ ಬರಲಿ. ಆದರೆ, ಯಾವುದೇ ಅನಾಹುತ ಆಗದಿದ್ದರೆ ಸಾಕು ಅಂತಿದ್ದಾರೆ.