ನಂಜನಗೂಡು (ಅ.05):  ಶ್ರೀಕಂಠೇಶ್ವರ ದೇವಾಲಯದ ಬಳಿ ಅ. 2 ರಂದು ಭಿಕ್ಷುಕಿಯೊಬ್ಬರ 3 ವರ್ಷದ ಕವಿತಾ ಎಂಬ ಹೆಣ್ಣುಮಗುವನ್ನು ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಎಚ್‌.ಡಿ.ಕೋಟೆ ತಾಲೂಕಿನ ಹುಣಸೆಕುಪ್ಪೆ ಗ್ರಾಮದ ಗಂಗಾ(45) ಬಂಧಿತ ಆರೋಪಿ.

ಕೆ.ಆರ್‌ ನಗರ ಮೂಲದ ಪಾರ್ವತಿ ಕಳೆದ 9 ವರ್ಷಗಳಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿ ತನ್ನ ತಾಯಿ ಹಾಗೂ ಮಗುನೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದು, ಅವಳ 3 ವರ್ಷದ ಹೆಣ್ಣು ಮಗುವನ್ನು ಅಪಹರಿಸಲಾಗಿತ್ತು. 

ಕಲಬುರಗಿ ತಾಂಡಾ ಕಾಮುಕರು... ಗಂಡ-ಹೆಂಡತಿ ಕೊಲೆ ನೋಡಿದ ಮಗು ಮಾಡಿದ್ದೇನು? ...

ಪಾರ್ವತಿ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮಗುವಿನ ಕೈಗೆ . 10 ನೀಡಿ ಟೀ ಕುಡಿಸಿ ಮಗುವನ್ನು ಸಾಕಿಕೊಳ್ಳಲು ನೀಡುವೆಯಾ ಎಂದು ಕೇಳಿದ್ದ. ನಾನು ಭಯದಿಂದ ಮಗುನೊಡನೆ ದೊಡ್ಡ ರಥದ ಕೆಳಗೆ ಮಲಗಿದ್ದಾಗ ನನಗೆ ತಿಳಿಯದಂತೆ ಮಗುವನ್ನು ಅಪಹರಣ ಮಾಡಿದ್ದಾನೆಂದು ನಗರದ ಪೊಲೀಸ್‌ ಠಾಣೆಯಲ್ಲಿ ಪಾರ್ವತಿ ದೂರು ನೀಡಿದ್ದಳು.

ದೂರು ದಾಖಲಿಸಿಕೊಂಡ ಪೊಲೀಸರು ಸಿಪಿಐ ಲಕ್ಷ್ಮಿಕಾಂತ ತಳವಾರ್‌ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸೈ ರಕುಮಾರ್‌ ಪೊಲೀಸರ 3 ತಂಡಗಳನ್ನು ರಚಿಸಿ ಮಗುವಿನ ಪತ್ತೆಗೆ ತನಿಖೆಯನ್ನು ಚುರುಕುಗೊಳಿಸಿದ್ದರು. ಖಚಿತ ಮಾತಿ ಮೇರೆಗೆ ಭಾನುವಾರ ಬೆಳಗ್ಗೆ ಮಗುವನ್ನು ಅಪಹರಣ ಮಾಡಿದ್ದ ಆರೋಪಿ ಗಂಗಾನನ್ನು ಬಂಧಿಸಿ ಮಗುವನ್ನು ಮೈಸೂರಿನ ಬಾಲ ಮಂದಿರದ ವಶಕ್ಕೆ ಒಪ್ಪಿಸಿ ರಕ್ಷಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಗರ ಠಾಣೆಯ ಅಜಯ್‌, ಸುನೀಲ್‌ ಕುಮಾರ್‌, ಕೃಷ್ಣ, ಪ್ರಕಾಶ್‌, ನಳಿನಾಕ್ಷಿ, ಪವಿತ್ರಾ, ನವೀನ್‌ ಹಾಗೂ ನಾಗೇಂದ್ರರವರನ್ನು ಸಿಪಿಐ ಲಕ್ಷ್ಮಿಕಾಂತ ತಳವಾರ್‌ ಶ್ಲಾಘಿಸಿದ್ದಾರೆ.