‘ಯಾರನ್ನೂ ಮುಟ್ಟಬೇಡಿ’ ಪೊಲೀಸರಿಗೆ ಅಧಿಕಾರಿಗಳ ಸೂಚನೆ!
ನಾಡಹಬ್ಬ ದಸರಾ ಜಂಬೂಸವಾರಿ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ರಾಜಮಾರ್ಗ ಸೇರಿದಂತೆ ಎಲ್ಲೆಡೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಆದರೆ, ಎಲ್ಲೆಡೆ ಭದ್ರತಾಲೋಪಗಳು ಎದ್ದಕಂಡವು.
ಬಿ. ಶೇಖರ್ ಗೋಪಿನಾಥಂ
ಮೈಸೂರು (ಅ.06): ನಾಡಹಬ್ಬ ದಸರಾ ಜಂಬೂಸವಾರಿ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ರಾಜಮಾರ್ಗ ಸೇರಿದಂತೆ ಎಲ್ಲೆಡೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಆದರೆ, ಎಲ್ಲೆಡೆ ಭದ್ರತಾಲೋಪಗಳು ಎದ್ದಕಂಡವು.
ದಸರಾ (Dasara) ಜಂಬೂಸವಾರಿ ಮಾರ್ಗದಲ್ಲಿ ‘‘ಯಾರನ್ನು ಮುಟ್ಟಬೇಡಿ’’ ಎಂಬುದು ಹಿರಿಯ ಪೊಲೀಸ್ (Police) ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದರು ಎನ್ನಲಾಗಿದೆ. ಅಲ್ಲದೆ, ಮೈಸೂರು ಅರಮನೆ ಆವರಣದಲ್ಲಿ ಮೆರವಣಿಗೆ ಸಾಗಿದ ಬಹುತೇಕ ಭಾಗದಲ್ಲಿ ಅಬಕಾರಿ ಪೊಲೀಸರನ್ನು, ಎನ್‌ಸಿಸಿ ಕ್ಯಾಡೆಟ್‌ಗಳನ್ನು ನಿಯೋಜಿಸಲಾಗಿತ್ತು. ಸ್ಥಳೀಯ ಪೊಲೀಸರು ಅಲ್ಲಲ್ಲಿ ಕಂಡು ಬಂದರಷ್ಟೇ.
ಇದರ ಪ್ರತಿಫಲವಾಗಿ ಮೆರವಣಿಗೆ ಸಾಗಿದ ಮಾರ್ಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡವರು ಮಾತ್ರವಲ್ಲದೇ ಅನ್ಯರೇ ಹೆಚ್ಚಾಗಿ ಓಡಾಡುತ್ತಿದ್ದರು. ಅವರನ್ನು ಪ್ರಶ್ನಿಸುವ ಗೋಜಿಗೆ ಪೊಲೀಸರು ಹೋಗಲಿಲ್ಲ.!
ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಹಾಗೂ ಅತಿಥಿ ಗಣ್ಯರು ಕುಳಿತ್ತಿದ್ದ ಭಾಗದಲ್ಲಿ ಮಾತ್ರ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ, ಅದರ ಅಕ್ಕಪಕ್ಕದಲ್ಲಿ ಜನರನ್ನು ನಿಯಂತ್ರಿಸುವವರು ಯಾರೂ ಇಲ್ಲ. ಕೆಲವೇ ಕೆಲವು ಪೊಲೀಸರು ಮಾತ್ರ ಜನರನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದರು.
ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು ಸಾಗುವ ಮಾರ್ಗ ಮಧ್ಯದಲ್ಲೇ ನೂರಾರು ಮಂದಿ ನೆರೆದಿದ್ದರು. ಅವರು ತಮ್ಮ ಪಾಡಿಗೆ ಮೊಬೈಲ್‌ನಲ್ಲಿ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕಲಾವಿದರೇ ಹಸಸಾಹಸ ಪಟ್ಟು ಜನರನ್ನು ಬೇಧಿಸಿಕೊಂಡು ಮುಂದು ಬರುತ್ತಿದ್ದು ಸಹ ಸಾಮಾನ್ಯವಾಗಿತ್ತು.
ವಿವಿಧ ಉಪ ಸಮಿತಿಗಳ ದರ್ಬಾರ್
ದಸರಾ ಮೆರವಣಿಗೆ, ಸ್ತಬ್ಧಚಿತ್ರದ ಉಪ ಸಮಿತಿಯ ಪದಾಧಿಕಾರಿಗಳು ಮಾತ್ರವಲ್ಲದೆ ಫಲಪುಷ್ಪ ಪ್ರದರ್ಶನ, ಯುವ ದಸರಾ, ಸಾಂಸ್ಕೃತಿಕ ಉಪ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಆಯಾಯ ಉಪ ಸಮಿತಿಗಳ ಪಾಸ್‌ಗಳನ್ನು ಧರಿಸಿಕೊಂಡು ಮೆರವಣಿಗೆ ಮಾರ್ಗದಲ್ಲಿ ತಮ್ಮ ದರ್ಬಾರ್ ನಡೆಸುತ್ತಿದ್ದು ಸಾಮಾನ್ಯವಾಗಿತ್ತು.
ಇದರಿಂದ ಕಲಾ ಪ್ರದರ್ಶನಗಳು, ಸ್ತಬ್ಧಚಿತ್ರಗಳು ಸರಿಯಾಗಿ ಕಾಣದೇ ನೆರೆದಿದ್ದ ಸಾವಿರಾರು ಜನ ಆಗಾಗ ಕೂಗಾಡುತ್ತಿದ್ದು, ಚೀರಾಡುತ್ತಿದ್ದು ಸಹ ಸಾಮಾನ್ಯವಾಗಿತ್ತು. ಇದು ಯಾವುದಕ್ಕೂ ಪೊಲೀಸರು ತಲೆಕೆಡಿಸಿಕೊಳ್ಳದೇ ತಮ್ಮ ಹಿರಿಯ ಅಧಿಕಾರಿಗಳು ಹೇಳಿದಂತೆ ‘ಯಾರನ್ನು ಮುಟ್ಟುವುದಿಲ್ಲ’ ಎಂಬ ಶಪತ ಮಾಡಿದವರಂತೆ ಇದ್ದದ್ದು ಮಾತ್ರ ಸುಳ್ಳಲ್ಲ.!
5485 ಪೊಲೀಸರ ನಿಯೋಜನೆ
ನಗರದ 1255, ಹೊರ ಜಿಲ್ಲೆಗಳ 3580, 650 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 5485 ಪೊಲೀಸರನ್ನು ದಸರಾ ಭದ್ರತೆಗೆ ನಿಯೋಜಿಸಲಾಗಿತ್ತು.
ನಗರದಲ್ಲಿ ಈಗಾಗಲೇ ಅಳವಡಿಸಿರುವ ಕಾಯಂ ಸಿಸಿ ಕ್ಯಾಮರಾಗಳ ಜೊತೆಗೆ ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಸೇರಿದಂತೆ ಇತರೇ ಪ್ರಮುಖ ಸ್ಥಳಗಳಲ್ಲಿ 110 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಮೊಬೈಲ್ ಕಮಾಂಡ್ ಸೆಂಟರ್ ವಾಹನವನ್ನು ಜಂಬೂಸವಾರಿ ಮಾರ್ಗದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಈ ಬಸ್‌ನಲ್ಲಿ ಸಿಸಿಟಿವಿ ವ್ಯವಸ್ಥೆ, ಬಾಡಿವೋರ್ನ್ ಕ್ಯಾಮರಾಗಳು, ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ವ್ಯವಸ್ಥೆ ಇದೆ.
ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಎಂ.ಎಸ್. ಗೀತಾ ಪ್ರಸನ್ನ, ಶಿವರಾಜು ಅವರು ಭದ್ರತೆಯ ನೇತೃತ್ವ ವಹಿಸಿದ್ದರು.
- ‘ಯಾರನ್ನೂ ಮುಟ್ಟಬೇಡಿ’ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಸೂಚನೆ!!
- - ಜಂಬೂಸವಾರಿಗೆ ಎಲ್ಲೆಡೆ ಖಾಕಿ ಪಹರೆ- ಆದರೆ, ಭದ್ರತಾಲೋಪ!
- - ಬಂದೋಬಸ್‌್ತಗಾಗಿ ಸಾವಿರಾರು ಪೊಲೀಸರ ನಿಯೋಜನೆ
- ಮೊಬೈಲ್ ಕಮಾಂಡ್ ಸೆಂಟರ್ ವಾಹನವನ್ನು ಜಂಬೂಸವಾರಿ ಮಾರ್ಗದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು