ದಾವಣಗೆರೆ [ಜ.30]: ಅಪ್ರಾಪ್ತೆಯ ವಿವಾಹ ಜ.31ರಂದು ತಾಲೂಕಿನ ಮಾಯಕೊಂಡ ಸಮೀಪದ ಗ್ರಾಮವೊಂದರಲ್ಲಿ ನಡೆಯಲಿದ್ದುದನ್ನು ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್‌ ಡಾನ್‌ ಬಾಸ್ಕೋ ಸಂಸ್ಥೆ, ಗ್ರಾಪಂ ಪಿಡಿಓ, ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ಮೇಲ್ವಿಚಾರಕರು, ಮಾಯಕೊಂಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಯಕೊಂಡ ಸಮೀಪದ ಗ್ರಾಮದಲ್ಲಿ ಜ.31ರಂದು 17 ವರ್ಷ 9 ತಿಂಗಳ ಅಪ್ರಾಪ್ತೆಯನ್ನು ಹರಪನಹಳ್ಳಿ ತಾ. ಪುಣಬಘಟ್ಟಗ್ರಾಮದ ಮೈಲಾರಪ್ಪ ಎಂಬ ಯುವಕ

ನೊಂದಿಗೆ ವಿವಾಹ ಮಾಡಲು ಎರಡೂ ಕುಟುಂಬಗಳು ಸಿದ್ಥತೆ ನಡೆಸಿದ್ದವು. ಈ ಬಗ್ಗೆ ದೊರೆತ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ, ಇತರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅಪ್ರಾಪ್ತೆ ಮದುವೆ ತಡೆದಿದ್ದಾರೆ.

ಅನಾಮಧೇಯ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಅಪ್ರಾಪ್ತೆ ಮದುವೆಯಾಗುತ್ತಿರುವ ವಿಚಾರ ತಿಳಿಸಿದ್ದರು. ಈ ಮಾಹಿತಿ ಆಧರಿಸಿ ಸಂಯೋಜಕ ಟಿ.ಎಂ.ಕೊಟ್ರೇಶ, ಕಾರ್ಯಕರ್ತ ಬಿ.ರವಿ, ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ಮೇಲ್ವಿಚಾರಕಿ ಆಶಾ, ಚಾಲಕರಾದ ಕುಮಾರ, ಪಿಡಿಓ ಶಾರದಮ್ಮ, ಮುಖ್ಯ ಶಿಕ್ಷಕರಾದ ಎಚ್‌.ಅಂಜಿನಪ್ಪ, ಮಾಯಕೊಂಡ ಠಾಣೆ ಪೇದೆ ಅಣ್ಣಯ್ಯ, ನಾಗರಾಜ ತಂಡ ಪೋಷಕರನ್ನು ಭೇಟಿ ಮಾಡಿದರು.

ಅಪ್ರಾಪ್ತೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ಅಪ್ರಾಪ್ತೆ ಮದುವೆ ಮಾಡಿದರೆ 1 ಲಕ್ಷ ರು. ದಂಡ, 1 ವರ್ಷಕ್ಕಿಂತ ಕಡಿಮೆ ಇಲ್ಲದಂತೆ 2 ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಾಗುತ್ತದೆ ಎಂಬುದಾಗಿ ತಂಡ ಹೆತ್ತವರಿಗೆ ಕಾನೂನು ಬಗ್ಗೆ ಅರಿವು ಮೂಡಿಸಿದರು.

ಹೆಣ್ಣು ಕೂಸು ಮಾರಾಟ : ಹೆತ್ತವರೂ ಸೇರಿ 7 ಜನ ಬಂಧನ...

ಜಾಗೃತರಾದ ಪೋಷಕರು ತಮ್ಮ ಮಗಳಿಗೆ 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲವೆಂದು ಡಿಎಸ್ಸೆಸ್‌ ಮುಖಂಡ ಪರಶುರಾಮ, ಸುರೇಶ, ಅಂಜಿನಿ, ಪ್ರಭು ಇತರರ ಸಮ್ಮುಖದಲ್ಲಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆಸಿಕೊಂಡು, ಮದುವೆ ತಡೆಯಲಾಯಿತು.

ಬೆಂಕಿ ಹಚ್ಚಿದ ಪ್ರಿಯತಮೆ, ಫಲಿಸದ ಚಿಕಿತ್ಸೆ : ಕೊನೆಯುಸಿರೆಳೆದ ಯುವಕ...

ಬಾಲ್ಯ ವಿವಾಹದಂತಹ ಅನಿಷ್ಟಪದ್ಧತಿಗಳನ್ನು ತೊಡೆದು ಹಾಕಲು, ಪೋಷಣೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳಿಗೆ ಸಹಾಯ ಮಾಡಲು ಉಚಿತ ದೂರವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ, ಮಾಹಿತಿ ನೀಡುವಂತೆ ಮಕ್ಕಳ ಸಹಾಯವಾಣಿ ಸಂಯೋಜಕ ಟಿ.ಎಂ.ಕೊಟ್ರೇಶ್‌ ಮನವಿ ಮಾಡಿದ್ದಾರೆ.