Surathkal Toll Gate Issue: ಟೋಲ್ ಗೇಟ್ ಕಿತ್ತೆಸೆಯಲು ನಾಳೆ ನೇರ ಕಾರ್ಯಾಚರಣೆ!
ಕಳೆದ ಹಲವು ವರ್ಷಗಳಿಂದ ಭಾರೀ ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ನಾಳೆ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಟೋಲ್ ಗೇಟ್ ಕಿತ್ತೆಸೆಯಲು ನಾಳೆ 'ನೇರ ಕಾರ್ಯಾಚರಣೆ'ಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಅ.17): ಕಳೆದ ಹಲವು ವರ್ಷಗಳಿಂದ ಭಾರೀ ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ನಾಳೆ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಟೋಲ್ ಗೇಟ್ ಕಿತ್ತೆಸೆಯಲು ನಾಳೆ 'ನೇರ ಕಾರ್ಯಾಚರಣೆ'ಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ. ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆಗೆ ಕರೆ ಕೊಡಲಾಗಿದ್ದು, ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ ಸೇರಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈಗಾಗಲೇ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಪ್ರಚಾರ ನಡೆಸಿರುವ ಟೋಲ್ ವಿರೋಧಿ ಸಮಿತಿ, ನಾಳೆ ಬೆ.10 ಗಂಟೆಗೆ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆಗೆ ಸಿದ್ದತೆ ನಡೆಸಿದೆ. ಮುತ್ತಿಗೆ ವೇಳೆ ಪೊಲೀಸ್ ಇಲಾಖೆ ಮತ್ತು ಹೋರಾಟಗಾರರ ಜೊತೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಟೋಲ್ ಗೇಟ್ ವಿರೋಧಿ ಹೋರಾಟಗಾರರಿಗೆ ಮಂಗಳೂರು ಪೊಲೀಸರಿಂದ ನೋಟೀಸ್ ಜಾರಿಯಾಗಿದ್ದು, ಸಿಆರ್ ಪಿಸಿ 107ರ ಅಡಿಯಲ್ಲಿ ಹೋರಾಟಗಾರಿಗೆ ನೋಟೀಸ್ ನೀಡಲಾಗಿದೆ. ಒಟ್ಟು 16 ಹೋರಾಟಗಾರರಿಗೆ ನೋಟೀಸ್ ಜಾರಿ ಮಾಡಿರುವ ಪೊಲೀಸ್ ಇಲಾಖೆ, ರಾತ್ರೋರಾತ್ರಿ ಹೋರಾಟಗಾರರ ಮನೆಗಳಿಗೆ ತೆರಳಿ ಸುರತ್ಕಲ್, ಪಣಂಬೂರು ಪೊಲೀಸರಿಂದ ನೋಟೀಸ್ ಜಾರಿ ಮಾಡಲಾಗಿದೆ.
ಸಂಚಾಲಕ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಸೇರಿ 16 ಜನರಿಗೆ ನೋಟೀಸ್ ನೀಡಿದ್ದು, ಅಹಿತಕರ ಘಟನೆ ನಡೆದರೆ ಹೋರಾಟಗಾರರೇ ಜವಾಬ್ದಾರಿ ಅಂತ ಮುಚ್ಚಳಿಕೆ ಬರೆಸಲು ನೋಟೀಸ್ ಕೊಡಲಾಗಿದೆ. 2015 ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಗೇಟ್ ಆರಂಭಗೊಂಡಿತ್ತು. ಆದರೆ ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪ ಇದೆ.
ಸುರತ್ಕಲ್ ಟೋಲ್ ನಿಂದ ಉಡುಪಿಯ ಹೆಜಮಾಡಿ ಟೋಲ್ ಪ್ಲಾಜಾ ದೂರ ಕೇವಲ 17 ಕಿ.ಮೀ. ಅಕ್ರಮವಾಗಿ ಹಲವು ವರ್ಷಗಳಿಂದ ಟೋಲ್ ಸಂಗ್ರಹ ಇದ್ದು, ಸುರತ್ಕಲ್ ಟೋಲ್ ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಸಂಸದ ನಳಿನ್ ಕುಮಾರ್ ಈ ಬಗ್ಗೆ ಗಡ್ಕರಿ ಜೊತೆ ಮಾತನಾಡಿ ಈ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಮುಚ್ಚುವ ಭರವಸೆ ನೀಡಿದ್ದರು. ಆದರೆ ಮುಚ್ಚುವ ಬದಲು ಹೊಸ ಗುತ್ತಿಗೆದಾರನಿಗೆ ಟೋಲ್ ವಹಿಸಲು ಟೆಂಡರ್ ಆಗಿದ್ದು, ಹೀಗಾಗಿ ನಿರ್ಣಾಯಕ ಹೋರಾಟಕ್ಕೆ ಸಂಘಟನೆಗಳು ಮುಂದಾಗಿವೆ.
ಕಾನೂನು ಕೈಗೆತ್ತಿಕೊಂಡರೆ ಅನಾಹುತಕ್ಕೆ ಅವರೇ ಹೊಣೆ: ನಳಿನ್ ಕುಮಾರ್ ಕಟೀಲ್
ಈ ಬಗ್ಗೆ ದ.ಕ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಹೋರಾಟ ಕೈ ಬಿಡಿ ಅಂತ ಈಗಾಗಲೇ ವಿನಂತಿ ಮಾಡಿದ್ದೇವೆ. ಹೋರಾಟಗಾರರಿಗೆ ನೋಟೀಸ್ ಕೊಟ್ಟ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಕಮಿಷನರ್ ಗೆ ಹೇಳಿದ್ದೇನೆ, ಹೋರಾಟ ಸಹಜ, ಯಾವುದೇ ನೋಟೀಸ್ ಮಾಡಬೇಡಿ. ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧ ಇಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ತನ್ನದೇ ಆದ ನಿಯಮದಡಿ ಕ್ರಮ ಕೈಗೊಳ್ಳುತ್ತದೆ. ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ, ನಾವು ಸಮಯ ಕೊಡುವ. ನಾನು ಹೋರಾಟಗಾರರ ಜೊತೆ ಮಾತನಾಡಿದ್ರೆ ರಾಜಕೀಯ ಬರುತ್ತೆ. ಹಾಗಾಗಿ ಡಿಸಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅವರ ಜೊತೆ ಮಾತನಾಡಿಸಿದ್ದೇನೆ. ಈಗ ಮತ್ತೆ ವಿನಂತಿ ಮಾಡ್ತೇನೆ, 20 ದಿನಗಳ ಕಾಲಾವಕಾಶ ಕೊಡಿ. ಹೋರಾಟವನ್ನ ಶಾಂತಿಯುತವಾಗಿ ಮಾಡಲು ನನ್ನ ಅಭ್ಯಂತರ ಇಲ್ಲ. ಕಾನೂನು ಕೈಗೆತ್ತಿಕೊಂಡರೆ ಮುಂದಕ್ಕೆ ಆಗುವ ಅನಾಹುತಕ್ಕೆ ಅವರೇ ಹೊಣೆ. ನಾನು ಟೋಲ್ ಗೇಟ್ ತೆಗೆಯಲು ಕಠಿಬದ್ದನಾಗಿದ್ದೇನೆ, ತೆಗೆದೇ ತೆಗೆಸ್ತೀನಿ. ಕಾನೂನು ಸಮಸ್ಯೆ ಕಾರಣ ಟೋಲ್ ಗೇಟ್ ತೆರವು ಕಷ್ಟವಾಗಿದೆ. ಹೀಗಾಗಿ 20 ದಿನಗಳ ಕಾಲ ಹೋರಾಟ ಮುಂದೂಡಿ ಅಂತ ವಿನಂತಿ ಮಾಡ್ತೇನೆ ಎಂದಿದ್ದಾರೆ.
Toll Booths: ಕರ್ನಾಟಕದಲ್ಲಿ 60 ಕಿ.ಮೀ. ಒಳಗೆ 28 ಟೋಲ್ ಬೂತ್..!
ಅಲ್ಲದೇ ಟೋಲ್ ಗೇಟ್ ತೆರವು ವಿನಂತಿ ಹಿನ್ನೆಲೆಯಲ್ಲಿ ಅನೇಕ ಸಭೆ ಆಗಿದೆ. ಈಗ ತೆರವು ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದೆ, ನಿತಿನ್ ಗಡ್ಕರಿ ಕೂಡ ಹೇಳಿದ್ದಾರೆ. ಆದರೆ ಕಾನೂನಿನ ತೊಡಕಿನ ಕಾರಣ ತೆರವು ತಡವಾಗಿದೆ. ನವಯುಗ್ ಸಂಸ್ಥೆ ಜೊತೆ ಮಾತುಕತೆ ಮುಗಿದಿದೆ, ಆದರೂ ಸ್ವಲ್ಪ ಸಮಯ ಕೇಳಿದ್ದಾರೆ. ಹೋರಾಟಗಾರರು ಸಮಯ ಕೊಟ್ಟಿದ್ದಾರೆ, ಅವರು ಕೇಳೋದ್ರಲ್ಲಿ ತಪ್ಪಿಲ್ಲ. ಆದರೆ ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ. ನಾವು ಅಧಿಕಾರಿಗಳ ಮೂಲಕ ಹೋರಾಟಗಾರರಿಗೆ ವಿನಂತಿ ಮಾಡಿದ್ದೇವೆ. ಸುರತ್ಕಲ್ ಟೋಲ್ ಗೇಟ್ ತೆರವಿಗೆ ಭಾರತೀಯ ಜನತಾ ಪಾರ್ಟಿ ಬೆಂಬಲ ಇದೆ. ಲೋಕಸಭಾ ಸದಸ್ಯನಾಗಿ ನಾನು ಕೂಡ ತೆರವಿಗೆ ಬೆಂಬಲಿಸ್ತೇನೆ. 20 ದಿನದ ಬಳಿಕವೂ ಆಗದಿದ್ರೆ ನಾನೇ ಕೋರ್ಟ್ ಗೆ ಹೋಗ್ತೇನೆ, ಇದನ್ನ ನಿತಿನ್ ಗಡ್ಕರಿಯವರಿಗೂ ಹೇಳಿದ್ದೇನೆ. ಇವತ್ತು ಬ್ಯಾಂಕರ್ಸ್ ಬಂದು ಸಭೆ ನಡೆಸಿ ಒಪ್ಪಂದಕ್ಕೆ ಬರ್ತಾರೆ. ಈ ಹೋರಾಟದಲ್ಲಿ ರಾಜಕೀಯವೂ ಇದೆ, ಹಾಗಾಗಿ ನಾವೂ ಮಾತನಾಡ್ತೇವೆ. 2015 ರಲ್ಲಿ ಆಸ್ಕರ್ ಇದ್ದಾಗಲೇ ಈ ಟೋಲ್ ಗೇಟ್ ಆಗಿರೋದು. ಅವರು ರಾಜಕೀಯ ಮಾತನಾಡಿದ್ರೆ ನಾವೂ ಮಾತನಾಡ್ತೇವೆ ಎಂದಿದ್ದಾರೆ.
GPS Toll: ಶೀಘ್ರದಲ್ಲಿ Fastag ವ್ಯವಸ್ಥೆ ಅಂತ್ಯ, ಜಿಪಿಎಸ್ ಟೋಲ್ ಸಿಸ್ಟಮ್ ಆರಂಭ!
ನಾಳಿನ ಹೋರಾಟ ನಿಲ್ಲಲ್ಲ: ನಾಳೆ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯನ್ನು ಪೊಲೀಸರ ಮೂಲಕ ನಿರ್ದಯವಾಗಿ ಹತ್ತಿಕ್ಕುವ ಯತ್ನವನ್ನು ಬಿಜೆಪಿ ಸರಕಾರ ನಡೆಸುತ್ತಿದೆ. ಅದರ ಭಾಗವಾಗಿ ಹೋರಾಟ ಸಮಿತಿಯ 50 ಕ್ಕೂ ಹೆಚ್ಚು ಪ್ರಮುಖರ ಮೇಲೆ ಶಾಂತಿಭಂಗ ಕಾಯ್ದೆ ಅಡಿ ನೋಟೀಸು ಜಾರಿ ಮಾಡಲಾಗಿದೆ. ನೋಟೀಸು ನೀಡುವ ನೆಪದಲ್ಲಿ ಮಧ್ಯರಾತ್ರಿ ಮನೆಗಳಿಗೆ ಬಂದು ಮಾನಸಿಕವಾಗಿ ಹಿಂಸಿಸಲಾಗಿದೆ. ಆ ಮೂಲಕ ಟೋಲ್ ಗೇಟ್ ವಿರೋಧಿ ಹೋರಾಟವನ್ನು ಹತ್ತಿಕ್ಕುವ, ಟೋಲ್ ಗೇಟ್ ಸುಲಿಗೆಯನ್ನು ಶಾಶ್ವತಗೊಳಿಸುವ ಹುನ್ನಾರ ನಡೆಸಲಾಗಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಿಜೆಪಿ ಸರಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸುತ್ತಿದ್ದು, ಪೊಲೀಸರು ಹೊರಡಿಸಿರುವ ನೋಟೀಸನ್ನು ತಿರಸ್ಕರಿಸಿ ಬಂಧನಕ್ಕೆ ಒಳಗಾಗಗಲು ಸಿದ್ದ. ನಾಳೆ ಹೋರಾಟವನ್ನು ಮತ್ತಷ್ಟು ಉತ್ಸಾಹದಿಂದ ಶಾಂತಿಯುತವಾಗಿ ನಡೆಸಲು ನಿರ್ಧರಿಸಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ, ಮುನೀರ್ ಕಾಟಿಪಳ್ಳ ಹೇಳಿದ್ದಾರೆ.