ಶಿಗ್ಗಾಂವಿ(ಜು.13): ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಡೆ ಭಾನುವಾರದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ದೊರೆಯಿತು. ಔಷಧ, ಹಾಲು, ದಿನಪತ್ರಿಕೆ, ಪೆಟ್ರೋಲ್‌ ಬಂಕ್‌ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ಸಂಪೂರ್ಣ ಬಂದ್‌ ಆಗಿತ್ತು.

ಗ್ರಾಮೀಣ ಪ್ರದೇಶದಲ್ಲಿಯೂ ಕೃಷಿ ಚಟುವಟಿಕೆಗೆ ಹೊಗುವ ರೈತರಿಗೂ ಹಾಗೂ ಕೃಷಿಕರಿಗೂ ಮನೆಯಲ್ಲಿ ಉಳಿಯಬೇಕು, ಹೊರಗೆ ಬರಬೇಡಿ ಎಂದು ಪೊಲೀಸ್‌ ಬೈಕ್‌ನಲ್ಲಿ ತಿಳಿಸಿದರು. ಹೊಲಕ್ಕೆ ಹೋಗುತ್ತಿದ್ದ ರೈತರನ್ನು ತಾಲೂಕಿನ ಕುನ್ನೂರಿನ ಹೊರವಲಯದ ತಡಸ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಜುನಾಥ ಮರಳಿ ಮನೆಗೆ ಕಳಿಸಿದರು. ಆರೋಗ್ಯಕ್ಕೆ ಲಾಕ್‌ಡೌನ್‌ ಆಗಲಿ, ಭಾನುವಾರ ರಜೆಯಾಗಲಿ ಸಂಬಂಧಿಸಿಲ್ಲ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹಾಕಬಾರದು ಎಂದು ಹಲವು ಒತ್ತಾಯಿಸಿದರು.

ಕರ್ನಾಟಕದ ಮತ್ತೋರ್ವ ಮಂತ್ರಿಗೆ ಕೊರೋನಾ ಭೀತಿ: ಇಡೀ ಕುಟುಂಬವೇ ಕ್ವಾರಂಟೈನ್​

ಅತ್ಯಂತ ಜನನಿಬಿಡ ಪ್ರದೇಶವಾದ ಶಿಗ್ಗಾಂವಿಯ ಹೊಸ ಬಸ್‌ ನಿಲ್ದಾಣ ಹಾಗೂ ಬಸ್‌ ನಿಲ್ದಾಣ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್‌ ಮಾಡಿದರು. ಶಿಗ್ಗಾಂವಿ ಹೊಸ ಬಸ್‌ ನಿಲ್ದಾಣದಲ್ಲಿ ಹಾಲು, ದಿನಪತ್ರಿಕೆ ಮಾರುವ ಸ್ಥಳಕ್ಕೆ ಬಂದ ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಪಿಎಸ್‌ಐ ಕೆ.ಎಸ್‌. ಹಳ್ಳಿ, ಇವುಗಳು ಅಗತ್ಯ ವಸ್ತುಗಳಾಗಿದ್ದು ಜನರು ತೆಗೆದುಕೊಂಡು ಹೋಗಲಿ. ಆದರೆ, ಹೆಚ್ಚು ಹೊತ್ತು ನಿಲ್ಲದಂತೆ ನೋಡಿಕೊಳ್ಳುವಂತೆ ತಿಳಿಸಿದರು.

ಬೆಳಗ್ಗೆ 6ರಿಂದಲೇ ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದರು. ಹೊಸ ಬಸ್‌ ನಿಲ್ದಾಣ, ಸವಣೂರ ಸರ್ಕಲ್‌, ಹಳೆಬಸ್‌ ನಿಲ್ದಾಣ, ಈಶ್ವರ ದೇವಸ್ಥಾನ ಸೇರಿದಂತೆ ವಾಹನ ದಟ್ಟಣೆ ಇರುತ್ತಿದ್ದ ಸ್ಥಳಗಳು ಬಿಕೋ ಎನ್ನುತ್ತಿದ್ದವು.