ಕಲಬುರಗಿ(ಸೆ.18): ಕಾರು ಚಲಾಯಿಸಿಕೊಂಡು ಹಳ್ಳ ದಾಟಲು ಹೋದ ಯುವಕರಿಬ್ಬರು ಕಾರು ಸಮೇತ ಕೊಚ್ಚಿ ಹೋಗಿದ್ದು, ಈ ಪೈಕಿ ಒಬ್ಬನನ್ನು ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸಂರಕ್ಷಿಸಿದ್ದು, ಇನ್ನೋರ್ವ ನಾಪತ್ತೆಯಾದ ಆಳಂದ ತಾಲೂಕಿನ ನಿಂಬರ್ಗಾ ಠಾಣೆಯ ವ್ಯಾಪ್ತಿಯ ಬೊಮ್ಮನಹಳ್ಳಿಯ ಹಳ್ಳದಲ್ಲಿ ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಯಳಸಂಗಿ ಗ್ರಾಮದ ರಾಜು ಕುಂಬಾರನ್ನು ರಕ್ಷಿಸಿದ್ದು, ಸಿದ್ದರಾಮ ಆವುಟೆಗಾಗಿ ಶೋಧ ಮುಂದುವರಿದೆ. ಇವರಿಬ್ಬರು ಬೊಮ್ಮನಹಲ್ಳಿ ಹಳ್ಳ ದಾಟಿ ಯಳಸಂಗಿ ಸೇರುವಾಗ ಘಟನೆ ನಡೆದಿದೆ. ರಾಜು ಕುಂಬಾರರನ್ನು ಪೆಲೀಸರು ಗ್ರಾಮಸ್ಥರ ಸಹಾಯದೊಂದಿಗೆ ಹಳ್ಳದ ನೀರಿನಿಂದ ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಲ್ಲದ ಮಳೆ ಅಬ್ಬರ : ಕುಸಿದ ನೂರಾರು ಮನೆಗಳು, ಜನಜೀವನ ಅಸ್ತವ್ಯಸ್ತ

ಮರವೇರಿ ರಕ್ಷಣೆಗೆ ಅಂಗಲಾಚುತ್ತಿದ್ದ ರಾಜುನನ್ನು ಹಗ್ಗದ ಸಹಾಯದಿಂದ ರಕ್ಷಿಸಿದ್ದು, ಸಿದ್ದರಾಮನ ಸುಳಿವು ಸಿಕ್ಕಿಲ್ಲ. ಬೊಮ್ಮನಹಳ್ಳಿ ದಾರಿಯಲ್ಳೇ ಬರುವ ಸುಂಟನೂರು ಗ್ರಾಮದಲ್ಲಿ ಬಂದೋಬಸ್ತ್‌ನಲ್ಲಿದ್ದ ನಿಂಬರ್ಗಾ ಠಾಣೆಯ ಪೇದೆಗಳಾದ ಗುರುಲಿಂಗಸ್ವಾಮಿ ಹಾಗೂ ಸಿದ್ದು ತಕ್ಷಣ ಕಾರ್ಯಪ್ರವೃತ್ತರಾಗಿ, ಗ್ರಾಮಸ್ಥರ ನೆರವಿನಿಂದ ಓರ್ವನ ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಗ್ರಾಮಸ್ಥರಾದ ಬೊಮ್ಮನಳ್ಳಿಯ ಮಹಾಂತೇಶ ಬಿರಾರ್ದಾ, ಶ್ರೀಕಾಂತ ಪಾಟೀಲ್‌, ರಾಜಶೇಖರ ಬಿರಾರ್ದಾ, ವಿಶ್ವನಾಥ ಪಾಟೀಲ್‌, ಈರಣ್ಣ ಪೂಜಾರಿ, ಸೇರಿದಂತೆ ಗ್ರಾಮದ ಹಲವರು ಸಾಥ್‌ ನೀಡಿದ್ದಾರೆ.