ಕಲಬುರಗಿ (ಸೆ.18): ಕಲ್ಯಾಣ ಕರ್ನಾಟಕದ ಕಲಬುರಗಿ ಮತ್ತು ಬೀದರ್‌ನಲ್ಲಿ ಕೆಲವು ದಿನಗಳಿಂದ ಬೀಳುತ್ತಿರುವ ಮಳೆ ಕೂಡ ಮುಂದುವರಿದಿದೆ. ಆಳಂದದಲ್ಲಿ ಪ್ರವಾಹಕ್ಕೆ ಸಿಲುಕಿದ ಏಳು ಜನರನ್ನು ಯುವಕನೊಬ್ಬ ರಕ್ಷಣೆ ಮಾಡಿದರೆ, ಬೀದರ್‌ನಲ್ಲಿ ಲಾರಿಯೊಂದು ನೀರುಪಾಲಾದ ಘಟನೆ ಕೂಡ ನಡೆದಿದೆ.

ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಪ್ರವಾಹ ಉಂಟಾಗಿತ್ತು. ಇಲ್ಲಿರುವ ಅಮರ್ಜಾ ಅಣೆಕಟ್ಟೆಸೇರಿದಂತೆ 35 ಕೆರೆಗಳು ತುಂಬಿವೆ. ಕೆರೆಗಳ ವೇಸ್ಟ್‌ವೇರ್‌ನಿಂದ ಹೆಚ್ಚುವರಿ ನೀರನ್ನು ಹೊರಗಡೆ ಹರಿದು ಬಿಡಲಾಗುತ್ತಿದೆ. ಸೇಡಂನಲ್ಲಿ ಉಕ್ಕೇರಿದ್ದ ಕಾಗಿಣಾ ನದಿ ಪ್ರವಾಹ ತುಸು ತಗ್ಗಿದ್ದು, ಸೇಡಂ-ಕಲಬುರಗಿ ಸಂಚಾರ ಮತ್ತೆ ಶುರುವಾಗಿದೆ. ನಿಂಬರಗಾ ವಲಯದ 4 ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ. ವಿವಿಧೆಡೆ ಸಂಚಾರಕ್ಕೆ ಅಡಚಣಿ ಉಂಟಾಗಿದೆ. ಹುಮನಾಬಾದ್‌ನಲ್ಲಿ ಸುಮಾರು 160 ಮನೆಗಳು ಭಾಗಶಃ ಬಿದ್ದಿವೆ.

ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು; ಧವಸ- ಧಾನ್ಯಗಳನ್ನು ಕಾಪಾಡಿಕೊಳ್ಳಲು ಜನರ ಪರದಾಟ! ...

7 ಜನರನ್ನು ದಡ ಮುಟ್ಟಿಸಿದ ಯುವಕ:  ಆಳಂದದಲ್ಲಿ ಸಾಲೇಗಾಂವ ಮೇಲ್ಭಾಗದ ಕೆರೆ ನೀರು ಹಾಗೂ ಅಡ್ಡಾಳ ಹಳ್ಳದ ನೀರು ಸೇರಿ ಗ್ರಾಮದ ಮಧ್ಯಭಾಗದಿಂದ ಹಾದು ಹೋಗಿರುವ ದೊಡ್ಡ ಹಳ್ಳಕ್ಕೆ ನೀರು ಒಟ್ಟಿಗೆ ಹರಿದು ಪ್ರವಾಹ ಉಂಟಾಗಿತ್ತು. ಈ ವೇಳೆ ಗ್ರಾಮದಿಂದ ಹೊರಟ್ಟಿದ್ದ ಟ್ರ್ಯಾಕ್ಟರ್‌ ಪ್ರವಾಹದಲ್ಲಿ ಸುಲುಕಿ ಪಲ್ಟಿಹೊಡೆದು ಅದರಲ್ಲಿದ್ದ 7 ಜನರು ಮುಳುಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆಗೆ ಖಂಡರಾವ ರಾಜೇಂದ್ರ ವಡಗಾಂವ (22) ಎಂಬ ಯುವಕ ಪ್ರಾಣದ ಹಂಗು ತೋರೆದು ಪ್ರವಾಹಕ್ಕೆ ಜಿಗಿದು ಎಲ್ಲರನ್ನು ದಡಮುಟ್ಟಿಸಿ ಸಾಹಸ ಮೆರೆದು ಗ್ರಾಮಸ್ಥರ ಮೆಚ್ಚಿಗೆಗೆ ಪಾತ್ರನಾಗಿದ್ದಾನೆ.

ಲಾರಿ ನೀರು ಪಾಲು:  ಮಹಾರಾಷ್ಟ್ರದಿಂದ ತೆಲಂಗಾಣ ರಾಜ್ಯಕ್ಕೆ ತೆರಳುತ್ತಿದ್ದ ಲಾರಿಯೊಂದು ಪ್ರವಾಹಕ್ಕೆ ಸಿಲುಕಿ ನೀರುಪಾಲಾದ ಘಟನೆ ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಬೀದರ್‌-ಲಾತೂರ್‌ ಸೇತುವೆಯಲ್ಲಿ ನಡೆದಿದೆ. ನದಿ ಮೇಲಿನ ಸೇತುವೆ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಲಾರಿ ಸುಮಾರು ದೂರ ಕೊಚ್ಚಿಕೊಂಡು ಹೋಗಿದೆ. ಆದರೆ, ಯಾವುದೇ ಸಾವು ನೋವಿನ ವರದಿಯಾಗಿಲ್ಲ.