ಪೊಲೀಸರಿಂದಲೇ ಕೆಆರ್‌ಎಸ್‌ನಲ್ಲಿ ಲೋಪ! ಅಧಿಕಾರಿಯಿಂದಲೇ ವಿಡಿಯೋ ಚಿತ್ರೀಕರಣ
ಕೃಷ್ಣರಾಜಸಾಗರ ಜಲಾಶಯದ ನಿಷೇಧಿತ ಪ್ರದೇಶದಲ್ಲಿ ಒಂದೇ ದಿನ ಎರಡು ಬಾರಿ ಭದ್ರತಾ ಲೋಪಗಳಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಪೊಲೀಸರಿಂದಲೇ ಭದ್ರತಾ ಲೋಪವಾಗಿದೆ.
ಮಂಡ್ಯ (ಫೆ.28): ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಜಲಾಶಯದ ನಿಷೇಧಿತ ಪ್ರದೇಶದಲ್ಲಿ ಒಂದೇ ದಿನ ಎರಡು ಬಾರಿ ಭದ್ರತಾ ಲೋಪಗಳಾಗಿರುವ ಪ್ರಕರಣಗಳು ಬಯಲಾಗಿವೆ.
ಒಂದೆಡೆ ಅಣೆಕಟ್ಟೆಯ ಮೇಲ್ಭಾಗ ಯುವಕನೊಬ್ಬ ಪೊಲೀಸ್ ಜೀಪ್ ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ, ಮತ್ತೊಂದೆಡೆ ಮೈಸೂರಿನ ಪೊಲೀಸ್ ಅಕಾಡೆಮಿ ನಿರ್ದೇಶಕಿ ಸುಮನ್ ನೇತೃತ್ವದಲ್ಲಿ 150 ಜನರು ಹಿನ್ನೀರಿನಲ್ಲಿ ಜಾಲಿಯಾಗಿ ಟೈಂಪಾಸ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಮೇಲ್ಭಾಗದ ನಿಷೇಧಿತ ರಸ್ತೆಯಲ್ಲಿ ಯುವಕನೊಬ್ಬ ಜೀಪ್‌ವೊಂದನ್ನು ಚಾಲನೆ ಮಾಡಿದ್ದಾನೆ. ಅದು ಪೊಲೀಸ್ ಜೀಪ್ ಆಗಿದ್ದು, ವಾಹನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಪೊಲೀಸ್ ಅಧಿಕಾರಿ ಯುವಕನ ಪಕ್ಕದಲ್ಲೇ ಕುಳಿತು ಪ್ರಯಾಣದುದ್ದಕ್ಕೂ ವಿಡಿಯೋ ಚಿತ್ರೀಕರಣ ಮಾಡಿ ಭದ್ರತಾ ನಿಯಮ ಉಲ್ಲಂಘಿಸಿದ್ದಾರೆ
ಕೆಆರ್‌ಎಸ್‌ನಲ್ಲಿ ಯುವಕನ ಪುಂಡಾಟಕ್ಕೆ ಪೊಲೀಸ್ ಅಧಿಕಾರಿ ಸಾಥ್, ಬೀದಿ ವ್ಯಾಪಾರಿಗಳಿಗೆ ಮಾತ್ರ ಥಳಿತ!
ಜೀಪ್ ಚಾಲನೆ ಮಾಡಿದ ಯುವಕ ಪೊಲೀಸ್ ಅಲ್ಲದಿದ್ದರೂ ಆತನಿಗೆ ಅಣೆಕಟ್ಟೆಯ ಮೇಲೆ ಜೀಪ್ ಚಾಲನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭದ್ರತೆಯ ಬಗ್ಗೆ ಕಾಳಜಿಯೇ ಇಲ್ಲದ ಅಧಿಕಾರಿ ಆತನ ಪಕ್ಕ ಕುಳಿತು ಚಿತ್ರೀಕರಣ ಮಾಡಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅಣೆಕಟ್ಟೆಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿ ಹೊತ್ತ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳೇ ಸರ್ವಾಧಿಕಾರಿಗಳಂತೆ ಸ್ವೇಚ್ಛಾ ರೀತಿಯಲ್ಲಿ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷ್ಣರಾಜಸಾಗರ ಜಲಾಶಯದ ಅಣೆಕಟ್ಟೆಯ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧವಿದೆ. ವಾಹನ ಚಾಲನೆಗಂತೂ ಅವಕಾಶವೇ ಇಲ್ಲ. ಅಣೆಕಟ್ಟು ಭರ್ತಿಯಾದಾಗ ಕಾವೇರಿಗೆ ಬಾಗಿನ ಅರ್ಪಿಸುವ ಸಮಯದಲ್ಲೂ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿ ವೃಂದ ಒಂದಷ್ಟುದೂರ ಸಾಗಿ ಬಂದು ಕಾವೇರಿಗೆ ಬಾಗಿನ ಸಮರ್ಪಿಸುತ್ತಾರೆಯೇ ವಿನಃ ಅವರೂ ಅಲ್ಲಿಗೆ ವಾಹನ ಬಳಸುವುದಿಲ್ಲ.
ಆದರೆ, ಈ ಪ್ರಕರಣದಲ್ಲಿ ನಿಷೇಧಿತ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದರೂ ಯುವಕನೊಬ್ಬ ಜೀಪ್ ಚಲಾಯಿಸಲು ಅವಕಾಶ ಮಾಡಿಕೊಟ್ಟು ಪೊಲೀಸರೇ ನಿಯಮ ಉಲ್ಲಂಘಿಸಿದ್ದಾರೆ. ಭದ್ರತೆ ಲೋಪವಾಗುವುದಕ್ಕೆ ಪೊಲೀಸರೇ ನೇರ ಕಾರಣರಾಗಿದ್ದಾರೆ. ಕೆಆರ್‌ಎಸ್ ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳ ಸಂಬಂಧಿಕರಿಗೇ ಒಂದು ನಿಯಮ, ಜನಸಾಮಾನ್ಯರಿಗೇ ಒಂದು ನಿಯಮವೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.
ಹಿನ್ನೀರಲ್ಲಿ ಪಿಕ್‌ನಿಕ್
ಇದಾದ ಬಳಿಕ ಮೈಸೂರು ಮೂಲದ ಪೊಲೀಸ್ ಅಕಾಡೆಮಿ ಸಿಬ್ಬಂದಿ ಕೆಆರ್‌ಎಸ್ ಹಿನ್ನೀರಿಗೆ ಪಿಕ್‌ನಿಕ್‌ಗೆ ಬಂದ ಮತ್ತೊಂದು ಪ್ರಕರಣ ಬಯಲಾಗಿದೆ. ಮೈಸೂರಿನ ಪೊಲೀಸ್ ಅಕಾಡೆಮಿ ನಿರ್ದೇಶಕಿ ಸುಮನ್ ನೇತೃತ್ವದಲ್ಲಿ 150 ಜನರು ಇಲ್ಲಿಗೆ ಬಂದಿದ್ದಾರೆ. ಕೆಆರ್‌ಎಸ್ ಹಿನ್ನೀರಿನಲ್ಲಿ ಪೊಲೀಸರು ಮತ್ತು ಅವರ ಕುಟುಂಬ ಈಜಾಡುತ್ತಾ ಕಾಲ ಕಳೆದಿದ್ದಾರೆ. ಹಿನ್ನೀರಿನ ದಡದಲ್ಲಿ ಶಾಮಿಯಾನ ಹಾಕಿ ಡಿಜೆಯನ್ನು ಹಾಕಿ ಮಜವಾಗಿ ಕಾಲ ಕಳೆದಿದ್ದಾರೆ.
ಕೆಆರ್‌ಎಸ್ ಹಿನ್ನೀರು ನಿರ್ಬಂಧಿತ ಪ್ರದೇಶ. ಸ್ಥಳೀಯರು ಯಾರೂ ಅಲ್ಲಿ ಸುಳಿಯುವಂತಿಲ್ಲ. ಅಂತಹ ಜಾಗಕ್ಕೆ 150 ಜನರು ಟೈಂ ಪಾಸ್ ಮಾಡಲು ಅವಕಾಶ ನೀಡಿರುವುದು ಸುತ್ತಮುತ್ತಲಿನ ಜನರನ್ನು ಕೆರಳಿಸಿದೆ.
ಪೊಲೀಸರ ಸಮಜಾಯಿಷಿ:
ಈ ಬಗ್ಗೆ ಪೊಲೀಸರನ್ನು ಕೇಳಿದರೆ ನಮಗೆ ರೆಸಾರ್ಟ್ ಹೋಗಲು ಆಗೋಲ್ಲ ಅದಕ್ಕೇ ಇಲ್ಲಿಗೆ ಬಂದಿದ್ದೇವೆ ಎಂಬ ಉತ್ತರ ನೀಡಿದ್ದಾರೆ. ಅಧಿಕಾರಿಯೊಬ್ಬರ ಕುಟುಂಬದವರು ಹಾಗೂ ಸ್ನೇಹಿತರಿಗೆ ಅಣೆಕಟ್ಟೆಯ ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆ ಕುಟುಂಬದವರೆಲ್ಲರೂ ಒಟ್ಟಾಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಜಾಲಿಯಾಗಿ ಸಮಯ ಕಳೆಯುತ್ತಿರುವುದು, ಪೊಲೀಸರೇ ಪಾರ್ಟಿಯ ಮೇಲುಸ್ತುವಾರಿ ವಹಿಸಿಕೊಂಡಿರುವುದೆಲ್ಲವೂ ಬಹಿರಂಗವಾಗಿದೆ.
ಸಿಬ್ಬಂದಿ ದರ್ಬಾರ್
ಹಿಂದೊಮ್ಮೆ ಕೇವಲ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಭದ್ರತಾ ನೆಪದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದರು. ರಾತ್ರಿಯಾದರೂ ಬೃಂದಾವನ ದ್ವಾರದ ಬಳಿ ವ್ಯಾಪಾರ ಮಾಡುತ್ತಿದ್ದಾರೆಂದು ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿದ್ದರು. ಅಧಿಕಾರಿಗಳ ಸಂಬಂಧಿಕರು, ಸ್ನೇಹಿತರು ಕೆಆರ್‌ಎಸ್‌ನಲ್ಲಿ ದರ್ಬಾರ್ ನಡೆಸಬಹುದೇ ಎನ್ನುವುದು ಪ್ರಶ್ನೆಯಾಗಿದೆ.
ಸಂದೀಪ್ ಬಂಧನ
ಮೈಸೂರಿನ 21 ವರ್ಷದ ಸಂದೀಪ್ ಬಂಧಿತ ವಿದ್ಯಾರ್ಥಿಯಾಗಿದ್ದು, ಈತ 2020 ಆ.10 ರಂದು ಸಂಜೆ 4ಕ್ಕೆ ತನ್ನ ಡ್ರೋನ್ ಕ್ಯಾಮೆರಾ ಮೂಲಕ ಕೆಆರ್‌ಎಸ್ ಜಲಾಶಯದ ಫೋಟೋಗಳನ್ನು ಚಿತ್ರೀಕರಿಸಿದ್ದ. ಅಲ್ಲದೇ ಅದನ್ನು ತಾನೇ ಖುದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ನಂತರದಲ್ಲಿ ಪೊಲೀಸರು ಆರೋಪಿ ಸಂದೀಪ್‌ನನ್ನು ಕರೆತಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದರು.