ಹುಬ್ಬಳ್ಳಿ(ಸೆ.09): ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಹೆಚ್ಚಾಗುತ್ತಿದ್ದಂತೆ ಇತ್ತ ಸಂಚಾರಿ ಠಾಣೆಗಳಿಗೆ ಬರಲು ಮಹಾನಗರ ಕಮಿಷನರೇಟ್‌ನಲ್ಲಿ ಪೇದೆಗಳು, ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್‌ಗಳು ತೀವ್ರ ಪೈಪೋಟಿ ನಡೆಸಿದ್ದಾರೆ. ಇದಕ್ಕೆ ಕಾರಣ ‘ಸೆಟ್ಲ್‌ಮೆಂಟ್’ ದಂಧೆ.

ತಮ್ಮನ್ನು ಸಂಚಾರಿ ಠಾಣೆಗೆ ವರ್ಗ ಮಾಡಿಸಿಕೊಡಿ ಎಂದು ರಾಜಕಾರಣಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಹಾಗಾಗಿ ಕಮೀಷ್ನರ್, ಡಿಸಿಪಿಗಳಿಗೆ ಈ ವಸಿಲಿ ತಲೆನೋವಾಗಿ ಪರಿಣಮಿಸಿದೆ. ಸಂಚಾರಿ ನಿಯಮಗಳ ಉಲ್ಲಂಘನೆಯಾಗದಿರಲಿ, ಎಲ್ಲರಲ್ಲೂ ಸಂಚಾರದ ನಿಯಮಗಳ ವಿಷಯದಲ್ಲಿ ಶಿಸ್ತು ಬರುವಂತಾಗಲಿ ಎಂಬ ಉದ್ದೇಶದಿಂದ ಹೊಸ ನೀತಿಯನ್ನು ಜಾರಿಗೊಳಿಸಿದೆ.

ಪ್ರಧಾನಿಗೆ ಪ್ರಶ್ನೆ ಮಾಡೋದೆ ತಪ್ಪಾ..? ಕೇಸ್ ಹಿಂಪಡೆಯಲು ಒತ್ತಾಯ

ಅದರಂತೆ ಮದ್ಯಪಾನ ಮಾಡಿ ವಾಹನ ಚಾಲನೆ, ನೋ ಪಾರ್ಕಿಂಗ್ ಹೀಗೆ ವಿವಿಧ ಉಲ್ಲಂಘನೆಗಳಿಗೆ ಆಗಲೇ ದೊಡ್ಡ ಪ್ರಮಾಣದ ದಂಡ ವಿಧಿಸುವ ಕಾರ್ಯ ನಡೆದಿದೆ. ಇನ್ನೂ ಪೂರ್ತಿಯಾಗಿ ಹೊಸ ನಿಯಮವನ್ನು ಜಾರಿಗೊಳಿಸಿಲ್ಲ. ಗಣೇಶ ಚತುರ್ಥಿ, ಮೊಹರಂ ಮುಗಿದ ಬಳಿಕ ಒಂದು ವಾರ ಜಾಗೃತಿ ಮೂಡಿಸಿ ನಂತರ ನಿಯಮವನ್ನು ಪೂರ್ತಿಯಾಗಿ ಅನುಷ್ಠಾನ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರಿಗೆ ಮೋದಿ: ವ್ಯಂಗ್ಯವಾಗಿ ಸ್ವಾಗತ ಕೋರಿದವರ ವಿರುದ್ಧ FIR

ಆದರೂ ಮದ್ಯಪಾನ ಮಾಡಿ ವಾಹನ ಚಲಾವಣೆ, ನೋ ಪಾರ್ಕಿಂಗ್‌ಗಳಲ್ಲಿ ನಿಲುಗಡೆ, ನೋ ಹೆಲ್ಮೆಟ್ ಹೀಗೆ ವಿವಿಧ ಉಲ್ಲಂಘನೆಗಳಿಗೆ ಆಗಲೇ ದಂಡ ವಿಧಿಸಿ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಈಗಾಗಲೇ ಮದ್ಯಪಾನ ಮಾಡಿ ಚಾಲನೆ ಮಾಡಿದ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಿಗೆ ದಂಡ ವಿಧಿಸಿದ್ದುಂಟು. ನೋಟಿಸ್ ಪಡೆದವರು ಆಗಲೇ ಕೋರ್ಟ್‌ಗಳಿಗೆ ತೆರಳಿ ದಂಡವನ್ನು ಪಾವತಿಸಿದ್ದಾರೆ.

ವರ್ಗಾವಣೆಗೆ ಪೈಪೋಟಿ:

ಮಹಾನಗರ ಕಮಿಷನ ರೇಟ್ ವ್ಯಾಪ್ತಿಯಲ್ಲಿ ಪೂರ್ವ, ದಕ್ಷಿಣ, ಉತ್ತರ ಹಾಗೂ ಧಾರವಾಡ ಸಂಚಾರಿ ಠಾಣೆಗಳು ಬರುತ್ತವೆ. ಪೇದೆ, ಮುಖ್ಯಪೇದೆ, ಎಎಸ್‌ಐ, ಎಎಸ್‌ಐ ಮೂಲಕ ಬಡ್ತಿ ಹೊಂದಿ ಪಿಎಸ್‌ಐ ಆದ ಸಿಬ್ಬಂದಿ ಕಮಿಷನರೇಟ್ ಮೂಲಕವೇ ವರ್ಗಾವಣೆ ಮಾಡಿದರೆ, ನೇರವಾಗಿ ಪಿಎಸ್‌ಐ, ಪಿಐಗಳನ್ನೆಲ್ಲ ಪೊಲೀಸ್ ಮಹಾನಿರ್ದೇ ಶಕರು ವರ್ಗಾವಣೆ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ.

ಭ್ರಷ್ಟಾಚಾರಕ್ಕೂ ಕುಮ್ಮಕ್ಕು:

ಇದೀಗ ಸಂಚಾರಿ ಠಾಣೆಗಳಿಗೆ ವರ್ಗಾವಣೆ ಮಾಡಿ ಎಂದು ಪೇದೆ, ಮುಖ್ಯಪೇದೆಗಳು ದುಂಬಾಲು ಬೀಳುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತ ಹೆಚ್ಚಿಸಿರುವುದು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಭ್ರಷ್ಟಾಚಾರಕ್ಕೂ ಕುಮ್ಮಕ್ಕು ನೀಡಿದೆ. ಹೆಲ್ಮೆಟ್, ಮದ್ಯ ಸೇವನೆ, ಲೈಸನ್ಸ್ ಇಲ್ಲದ ವಾಹನ ಚಾಲನೆ ಹೀಗೆ ಪ್ರತಿಯೊಂದಕ್ಕೂ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದರ ಬದಲಿಗೆ ಪರಿಶೀಲನೆ ಮಾಡುತ್ತಿರುವ ಪೊಲೀಸರೊಂದಿಗೆ ‘ಸೆಟ್ಲ್’ ಮಾಡಿ ಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಕುಡಿದು ವಾಹನ ಚಾಲನೆ ಮಾಡಿದರೆ 10 ಸಾವಿರ ದಂಡ ವಿಧಿಸಬೇಕು. ಆ ದಂಡ ತಪ್ಪಿಸುವುದಕ್ಕೆ ನಡೆಯುತ್ತಿರುವುದೇ ಈ ‘ಸೆಟ್ಲ್‌ಮೆಂಟ್’ ವ್ಯವಹಾರ. ವಾಹನ ಚಾಲಕ ದಂಡ ವಿಧಿಸಬೇಡಿ ಇಲ್ಲೇ ಬಗೆಹರಿಸಿ ಕೊಂಡು ಬಿಡೋಣ ಎಂದು ಗೋಗರೆಯುತ್ತಾನೆ. ಮೊದಲಿಗೆ ಇದಕ್ಕೆ ಒಪ್ಪದ ಪೊಲೀಸ್ ಸಿಬ್ಬಂದಿ ಬಳಿಕ ಪಕ್ಕಕ್ಕೆ ಕರೆದುಕೊಂಡು 2-3 ಸಾವಿರಕ್ಕೆ ವ್ಯವಹಾರ ಕುದುರಿಸಿಕೊಂಡು ಆತನ ಮೇಲೆ ಯಾವುದೇ ಕೇಸ್ ದಾಖಲಿಸದೇ ಹಾಗೆ ಕಳುಹಿಸುತ್ತಾರೆ.

ಈ 2-3 ಸಾವಿರದಲ್ಲಿ ಆ ಸಿಬ್ಬಂದಿಯೊಂದಿಗೆ ಇರುವ ಹಿರಿಯ ಅಧಿಕಾರಿಗೂ (ಪಿಎಸ್‌ಐ ಅಥವಾ ಎಎಸ್‌ಐ) ಪಾಲಿರುತ್ತದೆ. ಹಾಗಂತ ಎಲ್ಲ ಕೇಸ್‌ಗಳನ್ನು ಇದೇ ರೀತಿ ಮಾಡುತ್ತಾರೆ ಅಂತೇನೂ ಇಲ್ಲ. 10 ಕೇಸ್ ಗಳು ಬೆಳಕಿಗೆ ಬಂದರೆ ಅದರಲ್ಲಿ ನಾಲ್ಕೈದು ಕೇಸ್ ಗಳನ್ನು ದಾಖಲಿಸಿ ದಂಡ ವಿಧಿಸುವುದಕ್ಕೆ ನೋಟಿಸ್ ನೀಡಿ ಕೋರ್ಟ್‌ಗೆ ಕಳುಹಿಸುವ ಮೂಲಕ ಪ್ರಾಮಾಣಿಕರೆಂದು ತೋರಿಸಿಕೊಳ್ಳುತ್ತಾರೆ.

ಉಳಿದ ನಾಲ್ಕೈದು ಕೇಸ್‌ಗಳನ್ನು ಹೀಗೆ ‘ಸೆಟ್ಲ್‌ಮೆಂಟ್’ ಮಾಡಿಕೊಳ್ಳುತ್ತಾರೆ. ಕುಡಿದು ವಾಹನ ಚಾಲನೆ ಮಾಡಿ ಸಿಕ್ಕು ಬಿದ್ದವನಿಗೆ 5 ಸಾವಿರ ಉಳಿತಾಯವಾದರೆ, ಪೊಲೀಸಪ್ಪನ ಕಮಾಯಿ 2 ಸಾವಿರ ಆಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಇಂತಹದೊಂದು ಪ್ರಕರಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

-ಶಿವಾನಂದ ಗೊಂಬಿ

Police officers are much intrested to join traffic department