ಹುಬ್ಬಳ್ಳಿ(ಸೆ.07): ಕಾಂಗ್ರೆಸ್‌ನ ಜಿಲ್ಲಾ ಮಹಾನಗರ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ, ಶ್ವಾಜಮಾನ ಮುಜಾಹಿದ್ ವಿರುದ್ಧ ಹಾಕಲಾಗಿರುವ ಪ್ರಕರಣವನ್ನು ಮಹಾನಗರ ಪಾಲಿಕೆ ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್‌ನ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಕೇಸ್ ವಾಪಸ್ ಪಡೆಯದಿದ್ದರೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸುತ್ತೇವೆ. ಯಾವುದೇ ಅನುಮತಿಯನ್ನೂ ಪಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪ್ರತ್ಯಕ್ಷ !

ಕಾನೂನು ಬದ್ಧವಾಗಿಯೇ ಬ್ಯಾನರ್ ಹಾಕಿದ್ದೆವು:

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡುವುದೇ ತಪ್ಪಾ? ಪ್ರಶ್ನೆ ಮಾಡಿದರೆ ಕೇಸ್ ಹಾಕಿಸುತ್ತಿದ್ದಾರೆ. ಇದು ಸರ್ವಾಧಿಕಾರಿ ನೀತಿ. ಜನರ ಪರವಾಗಿ ನಮ್ಮ ಯುವ ಮುಖಂಡರು ಕಾನೂನು ಬದ್ಧವಾಗಿಯೇ ಬ್ಯಾನರ್
ಹಾಕಿದ್ದಾರೆ ಎಂದರು. ಬಿಜೆಪಿ ಮುಖಂಡರು ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ರೀತಿ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂಬಂತಾಗಿದೆ.

ಪ್ರಕರಣ ಹಿಂಪಡೆಯಿರಿ:

ಒಂದೋ ಅವರ ಪಕ್ಷವನ್ನೇ ಸೇರಬೇಕು. ಇಲ್ಲವೇ ತೆಪ್ಪಗಿರಬೇಕು ಎಂಬ ಮನೋಭಾವನೆ ಇವರದ್ದು. ಇದಕ್ಕೆ ಕಾಂಗ್ರೆಸ್ ಪಕ್ಷ ಜಗ್ಗಲ್ಲ. ಮಹಾನಗರ ಪಾಲಿಕೆಯಿಂದ ಬ್ಯಾನರ್ ಅಳವಡಿಸಲು ಅನುಮತಿ ಪಡೆದಿಲ್ಲ. ಇದೊಂದು ಪ್ರತಿಭಟನಾರ್ಥವಾಗಿ ಹಾಕಿರುವ ಬ್ಯಾನರ್. ಅದಕ್ಕೆ ಅನುಮತಿ ಕೊಡುವ ಪ್ರಶ್ನೆಯೇ ಬರಲ್ಲ. ಅನುಮತಿ ಕೇಳಿದರೂ ಅದನ್ನು ಪಾಲಿಕೆ ಕೊಡುತ್ತಿರಲಿಲ್ಲ. ಅದಕ್ಕಾಗಿ
ನಮ್ಮ ಮುಖಂಡರು ಹಾಕಿದ್ದಾರೆ. ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೇಸ್ ವಾಪಸ್ ಪಡೆಯದಿದ್ರೆ ಜಿಲ್ಲಾದ್ಯಂತ ಬ್ಯಾನರ್:

ಒಂದು ವೇಳೆ ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಜಿಲ್ಲಾದ್ಯಂತ ಎಲ್ಲೆಡೆ ಬಿಜೆಪಿ ವಿರುದ್ಧ ವ್ಯಂಗ್ಯ ಭರಿತವಾಗಿಯೇ ಬ್ಯಾನರ್‌ಗಳನ್ನು ಅಳವಡಿಸುತ್ತೇವೆ. ಈ ಸಂಬಂಧ ಈಗಾಗಲೇ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಮೊದಲಿಗೆ ನನ್ನ ಹೆಸರಲ್ಲೇ ಬ್ಯಾನರ್ ಅಳವಡಿಸುತ್ತೇನೆ. ನಾಳೆಯೊಳಗೆ ನನ್ನ ಹೆಸರಲ್ಲಿ ಬ್ಯಾನರ್ ಹಾಕುತ್ತೇನೆ. ಅದಕ್ಕೆ ಪಾಲಿಕೆಯಿಂದ ಅನುಮತಿಯನ್ನೇ ಪಡೆಯಲ್ಲ. ಬೇಕಾದರೆ
ನನ್ನ ವಿರುದ್ಧ ಪ್ರಕರಣ ದಾಖಲಿಸಲಿ ನೋಡೋಣ ಎಂದು ಸವಾಲು ಹಾಕಿದರು.

ಬೆಂಗಳೂರಿಗೆ ಮೋದಿ: ಸ್ವಾಗತ ಕೋರಿದವರ ವಿರುದ್ಧ FIR

ಕಾಂಗ್ರೆಸ್ ಹೋರಾಟ ಹಾಗೂ ಮುಖಂಡರನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಮ್ಮ ರಾಷ್ಟ್ರೀಯ ನಾಯಕರಾದ ಪಿ. ಚಿದಂಬರಂ, ರಾಜ್ಯ ನಾಯಕ ಡಿ.ಕೆ. ಶಿವಕುಮಾರ ಅವರನ್ನು ಇದೇ ರೀತಿ ಬಂಧಿಸಲಾಗಿದೆ ಎಂದು ಟೀಕಿಸಿದರು. ಈ ವೇಳೆ ರಜತ್ ಉಳ್ಳಾಗಡ್ಡಿಮಠ, ಶ್ವಾಜಮಾನ ಮುಜಾಹಿದ್ ಸೇರಿದಂತೆ ಹಲವರಿದ್ದರು.