ಯರಗಟ್ಟಿ(ಏ.29): ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣದ ಕಾಯಿಪಲ್ಯೆ ಸಂತೆ ಬಂದ್‌ ಆಗಿದೆ. ಆದರೆ, ರೈತರು ಕಾಯಿಪಲ್ಲೆಯನ್ನು ಮನೆಮನೆಗೆ ಹೋಗಿ ಮಾರುತ್ತಿದ್ದಾರೆ. ಹೀಗೆ ಮಾರುತ್ತಿರುವ ರೈತರನ್ನು ಪೊಲೀಸರು ಲಾಠಿಯಿಂದ ಹೊಡೆಯುತ್ತಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.

ಇದಷ್ಟೇ ಅಲ್ಲದೇ ರಾಜ್ಯ ಸಿಎಂ ಅವರೇ ರೈತರ ಮಾರಾಟಕ್ಕೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಆದರೆ, ಪಟ್ಟಣದಲ್ಲಿ ಸಿಎಂ ಮಾತಿಗೆ ಪೊಲೀಸರು ಕಿಮ್ಮತ್ತು ಕೊಡದೇ ತರಕಾರಿ ಮಾರಾಟಕ್ಕೆ ಬಂದ ರೈತರಿಗೆ ನಿತ್ಯ ತೊಂದರೆ ನೀಡುತ್ತಿದ್ದಾರೆ.

ಕಮಾಂಡೋ-ಪೊಲೀಸ್‌ ಜಟಾಪಟಿ ಕೇಸ್‌: CRPF ಯೋಧನಿಗೆ ಷರತ್ತುಬದ್ಧ ಜಾಮೀನು

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂತೆ ಬಂದಿರುವುದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಾಯಿಪಲ್ಯೆ ಹಾಗೂ ಹಣ್ಣು ಹಾಳಾಗುತ್ತಿದ್ದು ಸ್ವಲ್ಪವಾದರು ಮಾರಾಟ ಮಾಡೋಣವೆಂದು ಪಟ್ಟಣದ ಮನೆ ಮನೆಗೆ ತೆರಳಿ ಮಾರುತ್ತಿರುವಾಗ ಪೊಲೀಸ್‌ರು ಆಗಮಿಸುತ್ತಿರುವುದನ್ನು ಕಂಡು ಹೆದರಿ ಓಡಿ ಹೋದಾಗ ತಕ್ಕಡಿಯನ್ನು ತೆಗೆದುಕೊಂಡು ಪೊಲೀಸರು ಹೋದರೆ ಅಲ್ಲಿನ ಕಿಡಿಗೇಡಿಗಳು ಬುಟ್ಟಿಯಲ್ಲಿರುವ ಕಾಯಿಪಲ್ಲೆ ಮತ್ತು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಚುಂಚನೂರ ಗ್ರಾಮದ ರೈತ ಸಿದ್ದಪ್ಪ ಜೆಟ್ಟೆಪ್ಪನವರ ಪಟ್ಟಣದಲ್ಲಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂತು.

ಪ್ರತಿದಿನ ಬೆಳಗ್ಗೆ 10 ಗಂಟೆವರೆಗೆ ಅಂಗಡಿಯ ಮುಂದೆ ನೂರಾರು ಜನರನ್ನು ಸೇರಿಸಿಕೊಂಡು ಕಾನೂನು ಉಲ್ಲಂಘನೆ ಮಾಡುತ್ತಾ ಹೆಚ್ಚಿನ ಬೆಲೆಯಲ್ಲಿ ವ್ಯಾಪಾರ ಮಾಡುವ ಕಿರಾಣಿ ವ್ಯಾಪಾರಸ್ಥರನ್ನು ನೋಡಿ ನೋಡದ ಹಾಗೆ ಇರುತ್ತಿದ್ದಾರೆ ಪೊಲೀಸರು ಎಂದು ಗ್ರಾಮಸ್ಥರು ರೈತರ ಪರವಾಗಿ ಮಾತನಾಡಿಕೊಳ್ಳುತ್ತಿರುವುದು ಕಂಡುಬಂತು.

ಕಾಯಿಪಲ್ಲೆ ಮಾರುತ್ತಿರುವ ರೈತರನ್ನು ಪೊಲೀಸರು ಹೊಡೆಯುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಇದರಿಂದ ಲಾಕ್‌ಡೌನ್‌ದಲ್ಲಿರುವ ಗ್ರಾಮಸ್ಥರಿಗೆ ಕಾಯಿಪಲ್ಲೆ ದೊರೆಯದೆ ತೊಂದರೆಯಾಗಿದೆ ಎಂದು ಯರಗಟ್ಟಿ ಗ್ರಾಪಂ ಅಧ್ಯಕ್ಷೆ ಕಸ್ತೂರಿ ಕಡೆಮನಿ ಅವರು ಹೇಳಿದ್ದಾರೆ.