ಬೆಳಗಾವಿ(ಏ.29):  ಕೊಬ್ರಾ ಕಮಾಂಡೊ ಹಾಗೂ ಬೆಳಗಾವಿ ಜಿಲ್ಲೆ ಸದಲಗಾ ಪೊಲೀಸರ ಮಧ್ಯೆ ಈಚೆಗೆ ನಡೆದಿದ್ದ ಜಗಳಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲು ಸೇರಿದ್ದ ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ ಅವರಿಗೆ ಚಿಕ್ಕೋಡಿ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಏ.23ರಂದು ಮಾಸ್ಕ್‌ ಧರಿಸುವ ವಿಷಯವಾಗಿ ಸಿಆರ್‌ಪಿಎಫ್‌ನ ಕೊಬ್ರಾ ಕಮಾಂಡೋ ಸಚಿನ್‌ ಸಾವಂತ್‌ ಹಾಗೂ ಪೊಲೀಸರ ಮಧ್ಯೆ ವಾದ ವಿವಾದ ನಡೆದಿದ್ದಲ್ಲದೇ ಪರಸ್ಪರ ಹಲ್ಲೆಯೂ ನಡೆದಿತ್ತು. ಏತನ್ಮಧ್ಯೆ ಯೋಧನಿಗೆ ಪೊಲೀಸರು ಕೈಕೋಳ ತೊಡಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. 

ಯೋಧನ ಮೇಲೆ ಪೊಲೀಸರ ದರ್ಪ: ಶಾಸಕರಿಗೆ ಮೃದುಧೋರಣೆ, ದೇಶ ಕಾಯುವವರಿಗೆ ಕಠಿಣ ಶಿಕ್ಷೆ!

ಘಟನೆಗೆ ಸಂಬಂಧಿಸಿದಂತೆ ಯೋಧ ಸಚಿನ್‌ ಸಾವಂತನ ವಿರುದ್ಧ ಐಪಿಸಿ 353, 323 ಮತ್ತು 504 ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ - 1987ರ ಸೆಕ್ಷನ್‌ 3ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದರು. 

ಮಂಗಳವಾರ ಈ ಪ್ರಕರಣದ ವಿಚಾರಣೆ ಮಂಗಳವಾರ ನಡೆಸಿದ ನ್ಯಾಯಾಲಯ ತನಿಖೆಯಲ್ಲಿ ಪೊಲೀಸರಿಗೆ ಸಹಕಾರ ನೀಡಬೇಕು. ಸಾಕ್ಷಿಗಳನ್ನು ಹೆದರಿಸಬಾರದು ಎಂಬ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಪ್ರತಿಯನ್ನು ವಕೀಲರೊಂದಿಗೆ ಸಿಆರ್‌ಪಿಎಫ್‌ ಅಧಿಕಾರಿಗಳು ಹಿಂಡಲಗಾ ಕಾರಾಗೃಹದ ಅಧಿಕಾರಿಗಳಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ.