ನಾರಾಯಣ ಹೆಗಡೆ 

ಹಾವೇರಿ(ಫೆ.09): ಈ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣವಾಗಿ 70 ವರ್ಷಗಳೇ ಕಳೆದಿವೆ. ಇವು ವಸತಿಗೆ ಅಯೋಗ್ಯವಾಗಿದ್ದು, ನೆಲಸಮ ಮಾಡಬೇಕು ಎಂದು ಎಂಜಿನಿಯರ್‌ಗಳು ವರದಿ ನೀಡಿದ್ದಾರೆ. ಆದರೂ ಪರ್ಯಾವ ವ್ಯವಸ್ಥೆ ಇಲ್ಲದ್ದರಿಂದ ಭಯದ ವಾತಾವರಣದಲ್ಲೇ ಪೊಲೀಸರ ಕುಟುಂಬಗಳು ಇದೇ ವಸತಿ ಗೃಹಗಳಲ್ಲಿ ಜೀವನ ಸಾಗಿಸುತ್ತಿವೆ. ಇದು ಜಿಲ್ಲಾ ಕೇಂದ್ರ ಹಾವೇರಿ ಶಹರ ಠಾಣೆ ಹಿಂಭಾಗದಲ್ಲಿರುವ 47 ವಸತಿಗೃಹಗಳ ಸ್ಥಿತಿ. 

1950ರಲ್ಲಿ ಈ ವಸತಿಗೃಹಗಳು ನಿರ್ಮಾಣವಾಗಿವೆ. 4 ಪೊಲೀಸ್ ಅಧಿಕಾರಿಗಳ ಹಾಗೂ 43 ಸಿಬ್ಬಂದಿ ವಾಸಿಸುವ ಸೇರಿದಂತೆ 47 ವಸತಿಗೃಹಗಳು ಇಂದೇ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ. ಹೆಂಚುಗಳು ಒಡೆದು ಹೋಗಿ ಮಳೆಗಾಲದಲ್ಲಿ ನೀರು ಸೋರುತ್ತಿರುತ್ತದೆ. ಹಗಲು ರಾತ್ರಿಯೆನ್ನದೇ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಹೆಂಡತಿ ಮಕ್ಕಳನ್ನು ಇಂಥ ಸ್ಥಿತಿಯಲ್ಲಿ ಬಿಟ್ಟು ಆತಂಕದಲ್ಲೇ ಕೆಲಸ ಮಾಡುವ ಸ್ಥಿತಿಯಿದೆ. ವಿಶ್ರಾಂತಿ ವೇಳೆ ಮನೆಗೆ ಬಂದರೂ ನೆಮ್ಮದಿಯಿಲ್ಲ. ಜಿಲ್ಲಾ ಕೇಂದ್ರದಲ್ಲೇ ಈ ರೀತಿಯ ಪರಿಸ್ಥಿತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಪೊಲೀಸ್ ಕುಟುಂಬಗಳು ವಾಸಿಸುತ್ತಿವೆ. 

ಭಯದಲ್ಲೇ ಜೀವನ: 

ಹಳೆ ಪಿಬಿ ರಸ್ತೆ ಪಕ್ಕದ, ನಗರ ಪೊಲೀಸ್ ಠಾಣೆ ಹಿಂಭಾಗದಲ್ಲಿ ಸುಮಾರು 3 ಎಕರೆ ಜಾಗದಲ್ಲಿ 70 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಪೊಲೀಸ್ ಕ್ವಾರ್ಟರ್ಸ್‌ಗಳು ಈಗ ಬಳಕೆಗೆ ಯೋಗ್ಯವಿಲ್ಲ. ಈ ಕುರಿತು ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳೇ ಪರಿಶೀಲನೆ ನಡೆಸಿ ನೆಲಸಮಗೊಳಿಸುವ ಕುರಿತು ವರದಿ ನೀಡಿದ್ದಾರೆ. ಆದರೂ ಅನಿವಾರ್ಯ ಎಂಬಂತೆ ಪೊಲೀಸ್ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಇಲ್ಲಿ ಬಿಟ್ಟರೆ ಬೇರೆ ಕಡೆ ದುಬಾರಿ ಬಾಡಿಗೆ ಮನೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಪೊಲೀಸರು ಇದ್ದ ವಸತಿಗೃಹವನ್ನು ತಮ್ಮ ಕೈಯಿಂದಲೇ ಖರ್ಚು ಮಾಡಿ ರಿಪೇರಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಯಾವಾಗ ಬೀಳುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿದೆ. ಅರ್ಧ ತಾಸು ಮಳೆಯಾದರೂ ಪಿಬಿ ರಸ್ತೆ ತುಂಬಿ ನೀರು ಪೊಲೀಸ್ ಕ್ವಾರ್ಟರ್ಸ್ ಹೊಕ್ಕುತ್ತದೆ. ಕಳೆದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಂತೂ ಪೊಲೀಸ್ ಸಿಬ್ಬಂದಿಯ ಕುಟುಂಬದವರ ಕತೆ ಯಾರಿಗೂ ಬೇಡ ಎಂಬಂತಾಗಿತ್ತು. ಯಜಮಾನರು ಕರ್ತವ್ಯದಲ್ಲಿದ್ದರೆ, ಮನೆಯಲ್ಲಿದ್ದ ಹೆಂಡಿರು ಮಕ್ಕಳು ಆತಂಕದಲ್ಲೇ ಕಾಲ ಕಳೆದಿದ್ದಾರೆ. ಹೆಂಚು ಒಡೆದ ಕಡೆ ಪ್ಲಾಸ್ಟಿಕ್ ಹಾಕಿಕೊಂಡು ಸಿಬ್ಬಂದಿ ವಾಸಿಸುತ್ತಿದ್ದಾರೆ. 

ಮೂಲಸೌಕರ್ಯವೂ ಇಲ್ಲ: 

ನಗರದ ಮಧ್ಯಭಾಗದಲ್ಲೇ ಪೊಲೀಸ್ ವಸತಿಗೃಹಗಳಿದ್ದರೂ ಯಾವ ಸೌಕರ್ಯಗಳೂ ಇಲ್ಲದೇ ಕಾಲ ಕಳೆಯುತ್ತಿದ್ದಾರೆ. ಸಮರ್ಪಕ ಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರಿನ ಸೌಲಭ್ಯವೂ ಸರಿಯಿಲ್ಲ. ನಗರಸಭೆಯವರೂ ಈ ಕಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಸೊಳ್ಳೆ ಕಾಟ ಹೆಚ್ಚಿದೆ. ಹಂದಿ, ಬೀದಿ ನಾಯಿ ಕಾಟ ವಿಪರೀತವಾಗಿದೆ. ನಮ್ಮ ಕತೆ ಯಾರಿಗೂ ಬೇಡ. ಮಳೆ ಬಂತೆಂದರೆ ಜೀವ ಹಿಡಿದುಕೊಂಡು ಕೂರುವ ಪರಿಸ್ಥಿತಿ ಯಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಕುಟುಂಬದ ಮಹಿಳೆಯೊಬ್ಬರು ತಿಳಿಸಿದ್ದಾರೆ.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ ಜನರ ಆಸ್ತಿಪಾಸ್ತಿ ರಕ್ಷಣೆ ಮಾಡಲು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕುಟುಂಬಗಳು ಆತಂಕದಲ್ಲೇ ಬದುಕುವಂತಾಗಿದೆ. ಜಿಲ್ಲೆಯ 20 ಕಡೆಗಳಲ್ಲಿ ಪೊಲೀಸ್ ಕ್ವಾರ್ಟರ್ಸ್‌ಗಳಿದ್ದು, ಅವುಗಳಲ್ಲಿ ಬಹುತೇಕ ವಾಸಿಸಲು ಅಯೋಗ್ಯ ಸ್ಥಿತಿಯಲ್ಲಿವೆ. ಅವುಗಳಲ್ಲಿ ಕೆಲವು 70 ವರ್ಷಗಳ ಹಳೆಯ ವಸತಿಗೃಹಗಳೂ ಇವೆ. ಇನ್ನು ಈ ಕ್ವಾರ್ಟರ್ಸ್‌ಗಳಲ್ಲಿ ಮೂಲಸೌಕರ್ಯವಂತೂ ಮರೀಚಿಕೆ ಎನ್ನಬಹುದು. ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ವಸತಿ ಗೃಹಗಳು ಜಲಾವೃತಗೊಂಡು ಸಮಸ್ಯೆಯಾಗಿದ್ದು, ಇನ್ನೂ ಮಾಸಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಂಬರುವ ಬಜೆಟ್‌ನಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ವಸತಿಗೃಹಗಳ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಇಂದಿನಿಂದ ಸರಣಿ ವರದಿ ಪ್ರಕಟಿಸಲಿವೆ.

ಈ ಬಗ್ಗೆ ಮಾತನಾಡಿದ ಹಾವೇರಿ ಎಸ್ಪಿ ಕೆ.ಜಿ. ದೇವರಾಜ್ ಅವರು, ಶಹರ ಠಾಣೆ ಪಕ್ಕದಲ್ಲಿರುವ ಪೊಲೀಸ್ ವಸತಿಗೃಹಗಳು ತುಂಬಾ ಹಳೆಯದಾದ್ದರಿಂದ ಅವುಗಳನ್ನು ನೆಲಸಮಗೊಳಿಸುವ ಕುರಿತು ಇಲಾಖೆಗೆ ಬರೆದಿದ್ದೇವೆ. ಅನುಮತಿ ಸಿಕ್ಕ ತಕ್ಷಣ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು. ಅಲ್ಲಿವರೆಗೆ ಸಿಬ್ಬಂದಿ ಇರಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.