ಹುಬ್ಬಳ್ಳಿ (ಮೇ.17): ನೇಕಾರ ನಗರದ ಹೋಟೆಲ್‌ ಒಂದರ ಬಳಿ ಎಂಜಲು ಉಗಿದು ಗಲಾಟೆ ಮಾಡಿಕೊಂಡು ಪೊಲೀಸ್‌ ಸುಪರ್ದಿಯಲ್ಲಿರುವ ಸುಪಾರಿ ಹಂತಕ ಸಲೀಂ ಬಳ್ಳಾರಿಯನ್ನು ಕೊರೋನಾ ಟೆಸ್ಟ್‌ಗೆ ಒಳಪಡಿಸಿ ಎಕ್ಸಿಕ್ಯೂಟಿವ್‌ ಮ್ಯಾಜಿಸ್ಪ್ರೇಟ್‌ (ಡಿಸಿಪಿ- ಕಾನೂನು ಮತ್ತು ಸುವ್ಯವಸ್ಥೆ) ಎದುರು ಹಾಜರುಪಡಿಸಲಾಗಿದೆ.

ಶುಕ್ರವಾರ ರಾತ್ರಿ ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ಬಳಿಕ ಈತನನ್ನು ಜಾಮೀನಾಗುತ್ತದೆ. ಆದರೆ, ಈತ ಗೂಂಡಾ ಪ್ರವೃತ್ತಿಯವನಾದ ಕಾರಣ ಐಪಿಸಿ 110 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಶಕ್ಕೆ ಪಡೆದರು. ಕೊರೋನಾ ಲಾಕ್‌ಡೌನ್‌ ಇರುವ ಕಾರಣ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿ ಜಾಮೀನಿನ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸಂಜೆ ವೇಳೆಗೆ ಆತನನ್ನು ಡಿಸಿಪಿ ಎದುರು ಹಾಜರುಪಡಿಸಲಾಗಿದೆ. ಅಲ್ಲಿಯೂ ಆತನಿಗೆ ಜಾಮೀನು ಸಿಗುವುದು ಅನುಮಾನ. ಹೀಗಾಗಿ ಪೊಲೀಸರ ಸುಪರ್ದಿಯಲ್ಲೇ ಕ್ವಾರಂಟೈನ್‌ನಲ್ಲಿ ಇರಲಿದ್ದಾನೆ. ಪರಿಸ್ಥಿತಿ ತಿಳಿಗೊಂಡ ಬಳಿಕ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಿಂದ ಹೊರಬರಲು ಮುಂದಾದ MNC ಕಂಪನಿಗಳು: ಕರ್ನಾಟಕದತ್ತ ಸೆಳೆಯಲು ಕಾರ್ಯಪಡೆ

ಈ ಕುರಿತು ಮಾತನಾಡಿದ ಕಸಬಾಪೇಟ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ಯಾಮರಾವ್‌ ಸಜ್ಜನ, ಸಲೀಂ ಬಳ್ಳಾರಿ ಮೇಲೆ ಕಲಬುರಗಿ ಜಿಲ್ಲೆಯಲ್ಲಿನ ಕೊಲೆ ಪ್ರಕರಣವೊಂದು ಸೇರಿ ಹಲವು ಪ್ರಕರಣಗಳಲ್ಲಿ ವಾರಂಟ್‌ ಇದೆ. ಈತ ರೌಡಿಶೀಟರ್‌. ಜಾಮೀನಿನ ಮೇಲೆ ಬಿಟ್ಟರೆ ಪುನಃ ಗೂಂಡಾಗಿರಿ ಪ್ರವೃತ್ತಿ ಮುಂದುವರಿಸಬಹುದು. ಹೀಗಾಗಿ ನಮ್ಮ ವಶದಲ್ಲಿಯೇ  ಇಟ್ಟುಕೊಳ್ಳಲಿದ್ದೇವೆ ಎಂದರು.

ಆಗಿದ್ದೇನು?:

ಶುಕ್ರವಾರ ರಾತ್ರಿ ನೇಕಾರ ನಗರದ ಅಂಬಿಕಾ ಹೋಟೆಲ್‌ ಬಳಿ ಈತ ಊಟಕ್ಕಾಗಿ ಕೇಳಿದ್ದಾನೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊಟ ನೀಡಲು ಸಾಧ್ಯವಿಲ್ಲ ಎಂದಾಗ ಗಲಾಟೆ ಮಾಡಿ ಎಂಜಲು ಉಗಿದಿದ್ದಾನೆ. ಇದರಿಂದ ವಾಗ್ವಾದ, ಗಲಾಟೆ ಉಂಟಾಗಿದ್ದು, ಸಾರ್ವಜನಿಕರು ಈತನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಸಲೀಂ ಕೂಡ ಸೈಕೋಪಾತ್‌ನಂತೆ ವರ್ತಿಸಿದ್ದು, ಕಲ್ಲಿನಿಂದ ತಾನೆ ತಲೆಗೆ ಜಜ್ಜಿಕೊಂಡಿದ್ದಾನೆ. ಬಳಿಕ ಕಸಬಾಪೇಟ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ವಶಕ್ಕೆ ಪಡೆದು ಕಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.

ಯಾರೀತ?

ಈತನ ಮೇಲೆ ಕಲಬುರಗಿಯಲ್ಲಿ ಸುಪಾರಿ ಪಡೆದು ಕೊಲೆ ಮಾಡಿದ ಆರೋಪವಿದೆ. ರೌಡಿಶೀಟರ್‌ ಆಗಿರುವ ಸಲೀಂ ಕೊಲೆ, ಕಳ್ಳತನ, ಬೆದರಿಸಿ ಹಣ ಕೀಳುವುದು ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಪ್ರಮುಖ ಆರೋಪಿ. ಪೊಲೀಸರಿಂದ ತಲೆಮರೆಸಿಕೊಂಡಿದ್ದ ಸಲೀಂ ಬಳ್ಳಾರಿ ತಾನೆ ಕೈಗೆ ಪೊಲೀಸ್‌ ಕೋಳ ಬೀಳುವಂತೆ ಮಾಡಿಕೊಂಡಿದ್ದಾನೆ.