ಬೆಂಗಳೂರು[ಮಾ. 21]: ಮಹಾಮಾರಿ ಕೊರೋನಾ ಸೋಂಕು ವಿರುದ್ಧ ‘ಜನತಾ ಕರ್ಫ್ಯೂ’ಗೆ ಪ್ರಧಾನ ಮಂತ್ರಿಗಳು ನೀಡಿದ ಕರೆಗೆ ಬೆಂಬಲಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಇತಿಹಾಸದಲ್ಲೇ ಮೊದಲ ಬಾರಿಗೆ ಭಾನುವಾರ ಪೊಲೀಸ್ ಆಯುಕ್ತರ ಕಚೇರಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ. 

ಭಾನುವಾರ ಜನತಾ ಕರ್ಫ್ಯೂ: ಏನಿರುತ್ತೆ, ಏನೇನಿರಲ್ಲ?

ಇನ್ನು ಪೊಲೀಸರನ್ನು ಪಾಳಿ ಮೇರೆಗೆ ಕೆಲಸಕ್ಕೆ ನಿಯೋಜಿಸುವ ಕುರಿತು ಸಹ ಚಿಂತನೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಈ ಸಂಬಂಧ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಕೊರೋನಾ ಸೋಂಕು ಹರಡದಂತೆ ಪ್ರಧಾನ ಮಂತ್ರಿಗಳ ಸೂಚನೆಯನ್ನು ಸ್ವಯಂಪ್ರೇರಿತರಾಗಿ ಜನರು ಪಾಲಿಸಬೇಕು ಎಂದರು. ‘ಜನತಾ ಕರ್ಫ್ಯೂ’ ನಲ್ಲಿ ಪೊಲೀಸರು ಸಹ ಪಾಲ್ಗೊಳ್ಳಲಿದ್ದಾರೆ. ಪೊಲೀಸ್ ಕಚೇರಿಯಲ್ಲಿ ಭಾನುವಾರ ತುರ್ತು ಸೇವೆಗಳಿಗೆ ಸ್ಪಂದಿಸುವ ಕಮಾಂಡ್ ಸೆಂಟರ್ ಹಾಗೂ ನಿಯಂತ್ರಣ ಕೊಠಡಿ (ಡಯಲ್ 100) ಮಾತ್ರ ಕೆಲಸ ಮಾಡಲಿದೆ. ಇನ್ನುಳಿದ ವಿಭಾಗಗಳಿಗೆ ಬಿಡುವು ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. 

ಜನತಾ ಕರ್ಫ್ಯೂ: ಪ್ರಧಾನಿ ಮೋದಿ ಕರೆಗೆ ದೇವೇಗೌಡ ಬೆಂಬಲ

ಎಂದಿನಂತೆ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸಲಿವೆ. ಆದರೆ ಸಣ್ಣಪುಟ್ಟ ವಿಚಾರಗಳಿಗೆ ಠಾಣೆಗಳಿಗೆ ದೂರು ತೆಗೆದುಕೊಂಡು ಸಾರ್ವಜನಿಕರು ಹೋಗಬಾರದು ಎಂದು ಮನವಿ ಮಾಡಿದ ಆಯುಕ್ತರು, ತುರ್ತು ವಿಚಾರಗಳ ಹೊರತುಪಡಿಸಿ ಇನ್ನುಳಿದ ದೂರುಗಳಿಗೆ ಒಂದು ದಿನ ಮಟ್ಟಿಗೆ ಮುಂದೂಡಬೇಕು ಎಂದು ಹೇಳಿದರು.