ಕೊರೋನಾದಿಂದಾಗಿ ಹೋಟೆಲ್‌ಗಳಿಗೆ ನಿರ್ಬಂಧ ವಿಧಿಸಿದ್ದ ಪೊಲೀಸರು, ಹೋಟೆಲ್ ಮಾಲಿಕರ ಮನವಿಗೆ ಸ್ಪಂದನೆ, ಬೆಳಗ್ಗೆ 6ರಿಂದ ಮಧ್ಯರಾತ್ರಿ 1ರವರೆಗೆ ಹೋಟೆಲ್ ವಹಿವಾಟಿಗೆ ಅನುಮತಿ
ಬೆಂಗಳೂರು(ಅ.15): ರಾಜಧಾನಿಯ ಹೋಟೆಲ್‌ಗಳಿಗೆ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಸಿಹಿ ಸುದ್ದಿ ನೀಡಿದ್ದು, ತಡರಾತ್ರಿ ರಾತ್ರಿ 1ರವರೆಗೆ ಅಭಾದಿತವಾಗಿ ವಹಿವಾಟು ನಡೆಸಲು ಅನುಮತಿ ನೀಡಿದ್ದಾರೆ. ಈ ಸಂಬಂಧ ಶುಕ್ರವಾರ ಸುತ್ತೋಲೆ ಹೊರಡಿಸಿರುವ ನಗರ ಪೊಲೀಸ್ ಆಯುಕ್ತರು, ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 6ರಿಂದ ರಾತ್ರಿ 1ರವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿ ಹೋಟೆಲ್‌ಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವಂತೆ ಡಿಸಿಪಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಹಿಂದೆ 2016ರಲ್ಲಿ ಎನ್.ಎಸ್.ಮೇಘರಿಕ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ನಗರ ವ್ಯಾಪ್ತಿ ರಾತ್ರಿ 1ರವರೆಗೆ ಹೋಟೆಲ್‌ಗಳನ್ನು ತೆರೆಯಲು ಅನುಮತಿ ನೀಡಿದ್ದರು. ಈ ಸಂಬಂಧ ರಾಜ್ಯ ಸರ್ಕಾರವು ಅಧಿಕೃತ ಆದೇಶ ಸಹ ಮಾಡಿತ್ತು. ಅಲ್ಲದೆ ಸುನೀಲ್ ಕುಮಾರ್ ಅವರು ಆಯುಕ್ತರಾಗಿದ್ದಾಗ ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳಲ್ಲಿ 24 ತಾಸು ವಹಿವಾಟು ನಡೆಸಲು ಹೋಟೆಲ್‌ಗಳಿಗೆ ಅವಕಾಶ ನೀಡಿದ್ದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಗರಕ್ಕೆ ಬರುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೆಜೆಸ್ಟಿಕ್ ಹಾಗೂ ಸ್ಯಾಟ್‌ಲೈಟ್ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಹೋಟೆಲ್‌ಗಳಿಗೆ ದಿನ ಪೂರ್ತಿ ಕಾರ್ಯನಿರ್ವಹಿಸಲು ಸುನೀಲ್ ಕುಮಾರ್ ಅನುಮತಿ ನೀಡಿದ್ದರು.
ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅವಕಾಶವಿಲ್ಲ: ಸಿಎಂ
ಆದರೆ ಇತ್ತೀಚೆಗೆ ಪೊಲೀಸರು, ರಾತ್ರಿ 10ರ ಬಳಿಕ ಹೋಟೆಲ್‌ಗಳನ್ನು ಬಂದ್ ಮಾಡಿಸುತ್ತಿದ್ದರು. ಇದರಿಂದ ಹೋಟೆಲ್‌ಗಳಿಗೆ ನಷ್ಟಉಂಟಾಗುತ್ತಿತ್ತು. ಇನ್ನು ಕೊರೋನಾ ಸೋಂಕು ಬಳಿಕ ಹೋಟೆಲ್‌ಗಳಿಗೆ ಪೊಲೀಸರ ನಿರ್ಬಂಧ ಹೆಚ್ಚಾಯಿತು. ಪೊಲೀಸರ ಕಿರುಕುಳದಿಂದ ಬೇಸತ್ತ ಹೋಟೆಲ್ ಮಾಲಿಕರ ಸಂಘವು, ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ಭೇಟಿಯಾಗಿ 2016ರ ಆದೇಶದಂತೆ ರಾತ್ರಿ 1 ಗಂಟೆವೆರೆಗೆ ವಹಿವಾಟು ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಆಯುಕ್ತರು, ಹೋಟೆಲ್‌ಗಳನ್ನು ಅವಧಿ ಮುಂಚೆ ಬಂದ್ ಮಾಡಿಸದಂತೆ ಪೊಲೀಸರಿಗೆ ಕಟ್ಟಾಜ್ಞೆ ಮಾಡಿದ್ದಾರೆ.
