ಸುಪ್ರೀಂ ಕೋರ್ಟ್‌ ನಿರ್ದೇಶನ ಪ್ರಕಾರ 100ಕ್ಕಿಂತ ಅಧಿಕ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಲೇವಾರಿಗೆ ಬಾಕಿ ಇರುವ ಮಂಗಳೂರು ಸಹಿತ ರಾಜ್ಯದ 17 ಜಿಲ್ಲೆಗಳಲ್ಲಿ ವಿಶೇಷ ಪೋಕ್ಸೋ ನ್ಯಾಯಾಲಯ ಗುರುವಾರ ಆರಂಭಗೊಂಡಿದೆ. 

ಮಂಗಳೂರು(ಮಾ.06): ಸುಪ್ರೀಂ ಕೋರ್ಟ್‌ ನಿರ್ದೇಶನ ಪ್ರಕಾರ 100ಕ್ಕಿಂತ ಅಧಿಕ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಲೇವಾರಿಗೆ ಬಾಕಿ ಇರುವ ಮಂಗಳೂರು ಸಹಿತ ರಾಜ್ಯದ 17 ಜಿಲ್ಲೆಗಳಲ್ಲಿ ವಿಶೇಷ ಪೋಕ್ಸೋ ನ್ಯಾಯಾಲಯ ಗುರುವಾರ ಆರಂಭಗೊಂಡಿತು.

ನಗರದ ದ.ಕ. ಜಿಲ್ಲಾ ನ್ಯಾಯಾಲಯದ ಆರನೇ ಮಹಡಿಯಲ್ಲಿ ಸಜ್ಜುಗೊಂಡಿರುವ ಪೋಕ್ಸೋ ವಿಶೇಷ ನ್ಯಾಯಾಲಯವನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್‌ ಉದ್ಘಾಟಿಸಿದರು.

ಪ್ಲೇ ಸ್ಕೂಲ್‌ ವಾತಾವರಣ:

ಮಕ್ಕಳ ಆಟಿಕೆ, ಜಾರು ಬಂಡಿ, ಗೋಡೆಗಳಲ್ಲಿ ಮಕ್ಕಳನ್ನು ಸೆಳೆಯುವಂತಹ ಬಹುವರ್ಣದ ಚಿತ್ರಗಳಿರುವ ಕೊಠಡಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಇದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳನ್ನು ವಿಚಾರಣೆಗೆ ಮೊದಲು ಮಾನಸಿಕವಾಗಿ ಸಿದ್ಧಪಡಿಸುವ ಪ್ಲೇ ಸ್ಕೂಲ್‌ ಮಾದರಿ ಕೊಠಡಿ. ಅಲ್ಲದೆ ಪೋಕ್ಸೋ ನ್ಯಾಯಾಲಯವು ಇತರ ನ್ಯಾಯಾಲಯಕ್ಕಿಂತ ಪೂರ್ಣ ಭಿನ್ನ ಪರಿಸರವನ್ನು ಹೊಂದಿರಲಿದೆ. ಇಲ್ಲಿ ಪೊಲೀಸರು ತಮ್ಮ ಎಂದಿನ ಸಮವಸ್ತ್ರದಲ್ಲಿ ಇರುವುದಿಲ್ಲ. ಇದರ ಒಟ್ಟು ಉದ್ದೇಶ ಮಗು ಭಯ ಮುಕ್ತವಾಗಿ ತನ್ನ ಅನುಭವ- ಅಭಿಪ್ರಾಯ ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಿಸುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.

185 ಪ್ರಕರಣ ಬಾಕಿ:

ದ.ಕ. ಜಿಲ್ಲೆಯಲ್ಲಿ 2017ರಿಂದ ಸುಮಾರು 185 ಪೋಕ್ಸೋ ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. 2017 ಹಿಂದಿನ ಪ್ರಕರಣಗಳು ವಿಲೇವಾರಿಗೆ ಬಾಕಿ ಇಲ್ಲ ಎಂದು ಅಧಿಕೃತ ಮೂಲ ತಿಳಿಸಿದೆ.

ಮೀನುಗಾರ ಮಹಿಳೆಯರಿಗೆ ಬೈಕ್ : ಬಜೆಟ್ ನಲ್ಲಿ ಮತ್ತೇನು ಸಿಕ್ತು..?

ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕರಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್‌ ಅವರು, ಈ ಹಿಂದೆ ಕುಟುಂಬ ನ್ಯಾಯಾಲಯದ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್‌, ವಕೀಲರ ಸಂಘದ ಉಪಾಧ್ಯಕ್ಷ ರಾಘವೇಂದ್ರ, ಮಾಜಿ ಉಪಾಧ್ಯಕ್ಷೆ ಪುಷ್ಪಲತಾ ಇದ್ದರು.