Pocso case: ತನಿಖೆ ವಿಳಂಬದಿಂದ ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು: ನ್ಯಾ.ನ್ಯಾಯಾಧೀಶೆ ಬಿ.ಕೆ ಕೋಮಲಾ

  • ಪೋಕ್ಸೋ ಪ್ರಕರಣದ ತನಿಖೆ ವಿಳಂಬ ಆದಲ್ಲಿ ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
  •  ಪೋಕ್ಸೊ ಕಾಯ್ದೆ ಕುರಿತು ನಡೆದ ಕಾರ್ಯಾಗಾರದಲ್ಲಿ ನ್ಯಾಯಾಧೀಶೆ ಬಿ.ಕೆ ಕೋಮಲಾ ಕಳವಳ.
Pocso case Accused is more likely to escape due to delay in investigation says Justice BK Komala rav

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.29) : ಲೈಂಗಿಕ ಶೋಷಣೆಯಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ತಂತ್ರಜ್ಞಾನ ಬದಲಾದಂತೆ, ಅಪರಾಧಿಗಳ ಪತ್ತೆಗೆ ತನಿಖೆಯ ಸ್ವರೂಪವೂ ಬದಲಾಗಬೇಕಿದೆ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ. ಕೋಮಲ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುತ್ತಾಶ್ರಯದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪೋಕ್ಸೋ ಕಾಯ್ದೆ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚು ದಾಖಲಾಗುತ್ತಿದ್ದವು, ಆದರೆ ಇತ್ತೀಚೆಗೆ ಸೈಬರ್ ಪ್ರಕರಣಗಳು ಸಣ್ಣ ಸಣ್ಣ ನಗರಗಳಲ್ಲಿಯೂ ಹೆಚ್ಚುತ್ತಿವೆ.  ಸಾಮಾಜಿಕ ಜಾಲತಾಣಗಳು, ಮೆಸೇಜ್ ಆಪ್‍ಗಳ ಮೂಲಕವೂ ಕೂಡ ಅಪ್ರಾಪ್ತರ ಮೇಲಿನ ಶೋಷಣೆ, ಅಪರಾಧಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.  

ಏಕಾಏಕಿ ಮಠದ ಜಾಗ ಖಾಲಿ ಮಾಡಿಕೊಂಡು ಪರಾರಿಯಾದ ಮುರುಘಾ ಶರಣರ ಆಪ್ತೆ!

ಸೈಬರ್ ಕ್ರೈಂ, ಹಾಗೂ ಅದಕ್ಕೆ ಬಳಸುವ ಆಧುನಿಕ ತಂತ್ರಜ್ಞಾನಗಳು, ಮೊಬೈಲ್, ಫೇಸ್‍ಬುಕ್, ಸಾಮಾಜಿಕ ಜಾಲತಾಣಗಳಲ್ಲಿಯೂ ಅಪರಾಧ ಹೆಚ್ಚಾಗುತ್ತಿದೆ.  ಇಂತಹ ಪ್ರಕರಣಗಳಲ್ಲಿಯೂ ಕೂಡ ಎಲೆಕ್ಟ್ರಾನಿಕ್ ಸಾಕ್ಷ್ಯ ಕಾಯ್ದೆ ಅನ್ವಯ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು ಅತಿ ಮುಖ್ಯವಾಗುತ್ತದೆ,  ಇದರಲ್ಲಿ ಸರಿಯಾದ ರೀತಿಯಲ್ಲಿ ಸಾಕ್ಷ್ಯಾಧಾರ ಸಂಗ್ರಹಿಸಿದಿದ್ದರೆ, ತನಿಖಾಧಿಕಾರಿಗಳ ಶ್ರಮ ವ್ಯರ್ಥವಾಗಿ, ಅಪರಾಧ ಸಾಬೀತು ಕಷ್ಟಸಾಧ್ಯವಾಗುತ್ತದೆ. ತಂತ್ರಜ್ಞಾನ ಮುಂದುವರೆದಿದ್ದು,, ಅದಕ್ಕನುಗುಣವಾಗಿ ತನಿಖೆಯ ಸ್ವರೂಪ ಕೂಡ ಬದಲಾಗಬೇಕಿದೆ ಎಂದರು.

ಯಾವುದೇ ಕಾನೂನು ಅನುಷ್ಠಾನಗೊಳಿಸಲು, ಆ ಕಾನೂನು ಯಾವ ಹಿನ್ನೆಲೆಯಲ್ಲಿ ಜಾರಿಗೆ ಬಂದಿದೆ, ಕಾನೂನಿನ ಮೂಲ ಉದ್ದೇಶ ಏನು ಎಂಬ ಪ್ರಾಥಮಿಕ ಅಂಶಗಳನ್ನು ತಿಳಿದಾಗ ಮಾತ್ರ ಅದನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯ.   ಪೋಕ್ಸೋ ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ.  ಪ್ರತಿ ಹಂತದಲ್ಲೂ ಪ್ರತಿ ಇಲಾಖೆಗಳು, ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಮನ್ವಯ ಬಹು ಪ್ರಮುಖವಾಗಿದೆ.  ಪ್ರತಿ ಹಂತದಲ್ಲೂ ತನಿಖಾಧಿಕಾರಿಗಳು, ಸಿಡಿಪಿಒ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ವೈದ್ಯರು, ಮತ್ತಿತರ ಅಧಿಕಾರಿಗಳ ಸಮನ್ವಯ ಕಾಯ್ದುಕೊಳ್ಳುವುದು ತುಂಬಾ ಮಹತ್ವ ಪಡೆಯುತ್ತದೆ.  ತನಿಖಾಧಿಕಾರಿ, ವೈದ್ಯಾಧಿಕಾರಿ, ನ್ಯಾಯಾಂಗ, ಪೊಲೀಸ್ ಅಧಿಕಾರಿ ಸೇರಿದಂತೆ ಇದರಲ್ಲಿ ಯಾವುದೇ ಒಂದು ಅಂಗದ ಕಾರ್ಯದಿಂದ ಕಾನೂನು ಅನುಷ್ಠಾನ ಸಾಧ್ಯವಿಲ್ಲ.

ಪ್ರಕರಣದ ಫಲಿತಾಂಶದ ಬಗ್ಗೆ ಯೋಚಿಸದೆ ಇದರಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಲೋಪವಿಲ್ಲದಂತೆ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು.   ಪೋಕ್ಸೋ ಪ್ರಕರಣಗಳಲ್ಲಿ ಸಕಾಲದಲ್ಲಿ ತನಿಖೆ ನಡೆಯುವುದು ಅತ್ಯಂತ ಅಗತ್ಯವಾಗಿದೆ.  60 ರಿಂದ 90 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಲಾಗುತ್ತಿದೆ.  ಆದರೆ ಕೆಲವು ಪ್ರಕರಣಗಳಲ್ಲಿ 170 ದಿನಗಳ ಕಾಲವೂ ಸಮಯ ತೆಗೆದುಕೊಂಡು ಚಾರ್ಜ್ ಶೀಟ್ ಹಾಕಲಾಗುತ್ತಿದೆ.  ಕೆಲವೊಮ್ಮೆ ಕೇವಲ ಕಾಲಮಿತಿಯೊಳಗೆ ಚಾರ್ಜ್ ಶೀಟ್ ಹಾಕುವ ಸಲುವಾಗಿಯೇ ಅವಸರವಾಗಿ ತನಿಖೆ ಪೂರ್ಣಗೊಳಿಸುವುದು ಸರಿಯಲ್ಲ.  ಪೋಕ್ಸೊ ಕಾಯ್ದೆ ಜೊತೆಗೆ ಇತರೆ ಕಾಯ್ದೆಗಳ ಬಗ್ಗೆಯೂ ಅರಿವಿರಬೇಕು.  

POCSO case: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ: ಪೋಕ್ಸೋ ಆರೋಪಿ ಖುಲಾಸೆ ತೀರ್ಪು

ಇದರಲ್ಲಿ ಆರೋಪಿ ಹಾಗೂ ಸಂತ್ರಸ್ತರ ವಯಸ್ಸನ್ನು ಕೂಡ ಗಮನಿಸುವುದು ಅಗತ್ಯವಾಗಿದ್ದು, ವಯಸ್ಸು ಸಾಬೀತುಪಡಿಸುವ ದಾಖಲೆಗಳನ್ನು ಸಮರ್ಪಕವಾಗಿ ಸಲ್ಲಿಸುವುದು ಕೂಡ ಮುಖ್ಯವಾಗಿರುತ್ತದೆ.  ಪೋಕ್ಸೋ ಕಾಯ್ದೆ ಅಂದರೆ 18 ವರ್ಷದೊಳಗಿನ ಬರೀ ಹೆಣ್ಣು ಮಕ್ಕಳಿಗೆ ಮಾತ್ರ ಸಂಬಂಧಿಸಿದ್ದು ಎಂಬ ತಪ್ಪು ಕಲ್ಪನೆ ಇದೆ.  ಆದರೆ ವಾಸ್ತವವಾಗಿ ಪೋಕ್ಸೋ ಕಾಯ್ದೆ 18 ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳು ಇಬ್ಬರಿಗೂ ಅನ್ವಯಿಸುತ್ತದೆ.  ಲೈಂಗಿಕ ಶೋಷಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವೈದ್ಯಕೀಯ ವರದಿ ಕೊಡುವಾಗ ತಜ್ಞ ವೈದ್ಯರು ಯಾವ ಯಾವ ಕ್ಲಿನಿಕಲ್ ತಪಾಸಣೆ ಮಾಡಬೇಕು, ಯಾವ ರೀತಿ ತಮ್ಮ ವರದಿ, ಅಭಿಪ್ರಾಯ ಒದಗಿಸಬೇಕು ಎಂಬುದಕ್ಕೂ ನಿಯಮ, ಮಾರ್ಗಸೂಚಿಗಳಿದ್ದು, ಅದನ್ನು ತಪ್ಪದೆ ಅನುಸರಿಸಬೇಕು.  ಸರಿಯಾದ, ಅಗತ್ಯಕ್ಕನುಗುಣವಾಗಿ ಮಾದರಿಗಳ ಸಂಗ್ರಹ ಹಾಗೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸದಿದ್ದರೆ, ಕಷ್ಟಪಟ್ಟು ಮಾಡಿದ ಶ್ರಮ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಾಧೀಶರಾದ ಬಿ.ಕೆ. ಕೋಮಲ ಅವರು ಹೇಳಿದರು.....,

Latest Videos
Follow Us:
Download App:
  • android
  • ios