ಧಾರವಾಡ[ಆ.31]: ಜನಸಾಮಾನ್ಯರಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಭಾರತೀಯ ಅಂಚೆ ಇಲಾಖೆಯು ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಸೆ. 1ರಿಂದ ರಾಷ್ಟ್ರಾದಾದ್ಯಂತ ಆರಂಭಿಸಲಿದ್ದು ಧಾರವಾಡದಲ್ಲೂ ಈ ಕೇಂದ್ರ ಅಂದು ಕಾರ್ಯಾರಂಭ ಮಾಡಲಿದೆ.

ಧಾರವಾಡ ಕೇಂದ್ರಸ್ಥಾನವಾಗಿರುವ ಉತ್ತರ ವಲಯದ 14 ಜಿಲ್ಲೆಯ 70 ಶಾಖೆಗಳಲ್ಲಿ ಈ ಬ್ಯಾಂಕಿಂಗ್ ಸೇವೆ ಆರಂಭವಾಗಲಿದ್ದು, ಈಗಾ ಗಲೇ 50 ಸಾವಿರಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಪೋಸ್ಟ್ ಬ್ಯಾಂಕ್ ಖಾತೆಗಳನ್ನು ಆರಂಭಿಸಿದ್ದಾರೆ. ಸಾಂಕೇತಿಕವಾಗಿ ಉತ್ತರ ವಲಯದ ಸೇವೆಗೆ ಧಾರವಾಡದ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸಂಸದ ಪ್ರಹ್ಲಾದ ಜೋಶಿ ಅಂದು ಮಧ್ಯಾಹ್ನ 2ಕ್ಕೆ ಚಾಲನೆ ನೀಡಲಿದ್ದಾರೆ.

ಜನಸಾಮಾನ್ಯರ ಕೈಗೆಟುಕುವ ಸರಳ ವ್ಯವಹಾರದ ಮತ್ತು ನಂಬಿಕಾರ್ಹ ಬ್ಯಾಂಕಿಂಗ್ ವ್ಯವಸ್ಥೆಯ ನಿರ್ಮಾಣ, ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿರುವ ಜನತೆ ಮತ್ತು ಅಲ್ಪಪ್ರಮಾಣದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಹೊಂದಿರುವ ವರ್ಗಕ್ಕೆ ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಸೇವೆ ಒದಗಿಸಲು ಇರುವ ಅಡೆತಡೆಗಳನ್ನು ನಿವಾರಿಸಿ ಸೇರ್ಪಡೆಯ ಗುರಿಯನ್ನು ಸಾಧಿಸುವುದರಲ್ಲಿ ಮುಂಚೂಣಿ ಪಾತ್ರ ವಹಿಸುವುದೆ ಇದರ ಉದ್ದೇಶವಾಗಿದೆ.

ಬ್ಯಾಂಕಿಂಗ್ ವ್ಯವಸ್ಥೆಯ ಪರಿಣಾಮಕಾರಿ ತಂತ್ರಜ್ಞಾನವನ್ನು ಬಳಸಿಕೊಂಡು (ಕೌಂಟರ್, ಮೈಕ್ರೋ, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಇತ್ಯಾದಿಗಳು) ಗ್ರಾಹಕರಿಗೆ ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಸಂದಾಯ, ಹಣ ವಗಾ ವರ್ಣೆ, ಫಲಾನುಭವಿಗಳಿಗೆ ನೇರ ವರ್ಗಾವಣೆ ವ್ಯವಸ್ಥೆ, ಬಿಲ್ ಪಾವತಿ, ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಹಣ ಪಾವತಿ ಸೇವೆಯನ್ನು ಒದಗಿಸುತ್ತದೆ. ಇದರ ಜೊತೆಗೆ ಆರ್ಥಿಕ ಸಂಸ್ಥೆಗಳ ಸಹಭಾಗೀತ್ವದೊಂದಿಗೆ ಸಾಲ, ಹೂಡಿಕೆ ಮತ್ತು ವಿಮಾ ಸೌಲಭ್ಯಗಳನ್ನು ಕೂಡಾ ಒದಗಿಸುವ ಒಪ್ಪಂದಗಳನ್ನು ಕೂಡಾ ಮಾಡಿಕೊಂಡಿದೆ. ಆಧಾರ್ ಕಾರ್ಡ್ ಮತ್ತು ಮೊಬೈಲ್ ಬಳಸುವ ಮೂಲಕ ಕಾಗದ ರಹಿತ ಖಾತೆ ತೆರೆದು ವ್ಯವಹಾರವನ್ನು ಮಾಡಬಹುದು.

ಗ್ರಾಹಕರು ಬಯೋಮೆಟ್ರಿಕ್ ತಂತ್ರಜ್ಞಾನ ಮತ್ತು ಒಟಿಪಿ ಪಡೆಯುವ ಮೂಲಕ ಅತೀ ಸರಳ ವ್ಯವಹಾರ ನಡೆಸಬಹುದಾಗಿದೆ. ಪ್ರತಿ ಐಪಿಪಿಬಿ ಗ್ರಾಹಕನಿಗೆ ಕ್ಯೂಆರ್ ಕಾರ್ಡ್ ನೀಡಲಾಗುವುದು ಇದು ಐಪಿಪಿಬಿ ಖಾತೆಯ ಮಾಹಿತಿ ಒಳಗೊಂಡಿ ರುತ್ತದೆ.

ಹಿರಿಯ ನಾಗರಿಕರು, ವಿದ್ಯಾರ್ಥಿ -ವಿದ್ಯಾರ್ಥಿನಿಯರು, ಗ್ರಹಿಣಿಯರು, ನಗರಕ್ಕೆ ವಲಸೆ ಬಂದಿರುವವರು, ರೈತರು, ಕಾರ್ಮಿಕರು, ರಾಜ್ಯ ಸರ್ಕಾರದ ಯೋಜನೆಯ ನೇರ ಫಲಾನುಭವಿಗಳು, ಗ್ರಾಮೀಣ ಪ್ರದೇಶದಲ್ಲಿರುವ ವ್ಯಾಪಾರಿಗಳು, ಕಿರಾಣಿ ವ್ಯಾಪಾರಿ ಗಳು ಮತ್ತು ಸಣ್ಣ ಉದ್ಯಮಿಗಳು ಇವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರುವ ಉದ್ದೇಶ ವನ್ನು ಐಪಿಪಿಬಿಯು ಹೊಂದಿದೆ ಎನ್ನುತ್ತಾರೆ ಉತ್ತರ ವಲಯದ ಪೋಸ್ಟ್‌ಮಾಸ್ಟರ್ ಜನರಲ್ ವೀಣಾ ಆರ್. ಶ್ರೀನಿವಾಸ ಅವರು.