ಮೈಸೂರು [ಸೆ.09]:  ಪ್ರತಿಪಕ್ಷಗಳ ಮೇಲಿನ ಕೋಪದ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಜನರ ಮೇಲೂ ದ್ವೇಷ ಯಾಕಿದೆ? ಕರ್ನಾಟಕ 25 ಸೀಟುಗಳನ್ನು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದರೂ ಜನರ ಮೇಲೆ ಯಾಕೆ ಕಾಳಜಿ ತೋರಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಬಿ. ಖಂಡ್ರೆ ಪ್ರಶ್ನಿಸಿದರು.

ಭಾನುವಾರ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅವರದೇ ಪಕ್ಷ ಆಡಳಿತದಲ್ಲಿದೆ. ಸಂಪೂರ್ಣ ಕರ್ನಾಟಕವನ್ನು ಕಡೆಗಣಿಸಿದ್ದಾರೆ. 2008ರಲ್ಲಿ ಪ್ರವಾಹ ಬಂದಿದ್ದಾಗ ಡಾ. ಮನಮೋಹನ್‌ ಸಿಂಗ್‌ 4 ದಿನಗಳಲ್ಲಿ 2000 ಕೋಟಿ ರು.ಅನುದಾನ ಘೋಷಣೆ ಮಾಡಿದರು. ಈಗ ಪ್ರವಾಹ ಸಂಭವಿಸಿ 40 ದಿನ ಕಳೆದರೂ ಕೇಂದ್ರದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. ಎಲ್ಲವೂ ಮುಗಿದ ಮೇಲೆ ಬರುತ್ತೀರಾ? ಕಾಂಗ್ರೆಸ್‌- ಜೆಡಿಎಸ್‌ ಪಕ್ಷಗಳ ಮೇಲಿನ ದ್ವೇಷದಂತೆ ಕರ್ನಾಟಕದ ಜನರ ಮೇಲೆ ಯಾಕೆ ತೋರಿಸಲಾಗುತ್ತಿದೆ? ಜನ ಏನು ಮಾಡಿದ್ದಾರೆ? ಎಂದು ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರವಾಹದ ವೇಳೆಯಲ್ಲೂ ಮಲತಾಯಿ ಧೋರಣೆ ಅನುಸರಿಸಲಾಯಿತು. ಆವಾಗ ಮೈತ್ರಿ ಸರ್ಕಾರ ಇತ್ತು ಅಂತ ಹೇಳಿ ತಾರತಮ್ಯ ಮಾಡಿದರು. ಈಗ ಬಿಜೆಪಿ ಸರ್ಕಾರ ಇದ್ದರೂ ಈಗ ಏನಾಗಿದೆ? ಎಲ್ಲಾವೂ ಮುಗಿದ ಮೇಲೆ ಘೋಷಣೆ ಮಾಡಿದರೆ ಉಪಯೋಗ ಆಗುತ್ತಾ? ಎಂದು ಖಂಡ್ರೆ ಖಂಡಿಸಿದರು.