ನಮ್ಮ ಮೆಟ್ರೋ ವೈಟ್‌‘ಫೀಲ್ಡ್‌’ಗೆ ಮೋದಿ ಚಾಲನೆ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಜತೆ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಮೆಟ್ರೋ’ದ ಮೊದಲ ಐಟಿ ಕಾರಿಡಾರ್‌ ಆಗಿರುವ ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮಾರ್ಗವನ್ನು ಶನಿವಾರ ಉದ್ಘಾಟಿಸಿ ಸಂಚರಿಸಿದರು. ‘ನಮ್ಮ ಮೆಟ್ರೋ’ ಮಾರ್ಗವೊಂದಕ್ಕೆ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಚಾಲನೆ ನೀಡಿದ ಹೆಗ್ಗಳಿಕೆಯನ್ನು ಬಿಎಂಆರ್‌ಸಿಎಲ್‌ ಪಡೆದುಕೊಂಡಂತಾಗಿದೆ. 

PM Narendra Modi inaugurates KR Puram To Whitefield Namma Metro Line In Bengaluru gvd

ಬೆಂಗಳೂರು (ಮಾ.26): ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಮೆಟ್ರೋ’ದ ಮೊದಲ ಐಟಿ ಕಾರಿಡಾರ್‌ ಆಗಿರುವ ವೈಟ್‌ಫೀಲ್ಡ್‌-ಕೆ.ಆರ್‌.ಪುರ ಮಾರ್ಗವನ್ನು ಶನಿವಾರ ಉದ್ಘಾಟಿಸಿ ಸಂಚರಿಸಿದರು. ‘ನಮ್ಮ ಮೆಟ್ರೋ’ ಮಾರ್ಗವೊಂದಕ್ಕೆ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಚಾಲನೆ ನೀಡಿದ ಹೆಗ್ಗಳಿಕೆಯನ್ನು ಬಿಎಂಆರ್‌ಸಿಎಲ್‌ ಪಡೆದುಕೊಂಡಂತಾಗಿದೆ. ಮಧ್ಯಾಹ್ನ ನಗರದ ವೈಟ್‌ಫೀಲ್ಡ್‌ (ಕಾಡುಗೋಡಿ) ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು .4249 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೇರಳೆ ಮಾರ್ಗದ ರೀಚ್‌-1 ವಿಸ್ತೃತ 13.71 ಕಿ.ಮೀ. ನೂತನ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಜನಸಾಮಾನ್ಯರಂತೆ ಟಿಕೆಟ್‌ ಕೌಂಟರ್‌ನಲ್ಲಿ ಮೊದಲ ಬಾರಿ ರುಪೇ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡನ್ನು (ಎನ್‌ಸಿಎಂಸಿ) ಅವರು ಪಡೆದರು. ಈ ವೇಳೆ ಭಾರತಿ ಅಯ್ಯರ್‌ ಅವರು ಮೋದಿ ಅವರಿಗೆ ಟಿಕೆಟ್‌ (ಕಾರ್ಡ್‌) ನೀಡಿದರು. ನಂತರ ಪ್ಲಾಟ್‌ಫಾರ್ಮ್‌ಗೆ ಆಗಮಿಸಿ ಹೂವುಗಳಿಂದ ಅಲಂಕೃತವಾಗಿದ್ದ ಮೆಟ್ರೋ ರೈಲನ್ನು ಏರಿ ಸುಮಾರು 4 ಕಿಲೋ ಮೀಟರ್‌ವರೆಗೆ ಸಂಚರಿಸಿದರು. ಮೊದಲ ರೈಲು ಸಂಚಾರವನ್ನು ಮಹಿಳಾ ಲೋಕೋ ಪೈಲಟ್‌ ಪಿ.ಪ್ರಿಯಾಂಕಾ ಚಲಾಯಿಸಿದರು. ರೈಲು ಹೋಪ್‌ಫಾಮ್‌ರ್‍, ಚನ್ನಸಂದ್ರ, ಕಾಡುಗೋಡಿ, ಟ್ರೀಪಾರ್ಕ್, ಪಟ್ಟಂದೂರು ಅಗ್ರಹಾರ ನಿಲ್ದಾಣದ ಮೂಲಕ ಸತ್ಯಸಾಯಿ ಹಾಸ್ಪಿಟಲ್‌ ನಿಲ್ದಾಣ ತಲುಪಿ ಬಳಿಕ ರೈಲು ವಾಪಸ್‌ ಸಂಚಾರ ಆರಂಭಿಸಿತು. ಈ ವೇಳೆ ಪ್ರಿಯಾಂಕಾ ಬಳ್ಳಾರಿ ರೈಲನ್ನು ಚಲಾಯಿಸಿದರು.

ಪ್ರಧಾನಿ ಮೋದಿ ‘ಮಹಾ’ ಮತ ಕಹಳೆ: ಸಿದ್ದರಾಮಯ್ಯಗೆ ಕಪಾಳಮೋಕ್ಷ ಟಾಂಗ್‌!

ರೈಲಿನಲ್ಲಿ ಸ್ಥಳೀಯ ಕಾಡುಗೋಡಿ ಸರ್ಕಾರಿ ವಿದ್ಯಾರ್ಥಿಗಳು, ಮೆಟ್ರೋ ರೈಲಿನ ಚಾಲನಾ ಹಾಗೂ ಇತರೆ ವಿಭಾಗದ ಮಹಿಳಾ ಸಿಬ್ಬಂದಿ ಶ್ರುತಿ, ವೇದಾ ಹಾಗೂ ಉಮಾ ಎಂಬುವರ ಜೊತೆಗೆ ಹಾಗೂ ಮೆಟ್ರೋದ ಸ್ವಚ್ಛತಾ, ಕಾರ್ಮಿಕ ಸಿಬ್ಬಂದಿ ಜೊತೆ ಮಾತನಾಡಿದರು. ಇದಕ್ಕೂ ಮುನ್ನ ಬಿಎಂಆರ್‌ಸಿಲ್‌ ಕೈಗೊಳ್ಳಲಿರುವ ಮುಂದಿನ ಯೋಜನೆ, ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳ ಮಾಹಿತಿ ಫಲಕವುಳ್ಳ ಪ್ರದರ್ಶನ ವೀಕ್ಷಿಸಿ, ಅಧಿಕಾರಿಗಳಿಂದ ವಿವರ ಪಡೆದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ನಮ್ಮ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಮೊದಲ ಪ್ರಧಾನಿ: ನರೇಂದ್ರ ಮೋದಿ ಅವರು ‘ನಮ್ಮ ಮೆಟ್ರೋ’ದ ಮಾರ್ಗವೊಂದಕ್ಕೆ ಚಾಲನೆ ನೀಡಿದ ಮೊದಲ ಪ್ರಧಾನಿ ಎನ್ನಿಸಿಕೊಂಡಿದ್ದಾರೆ. 2017ರಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಹಸಿರು ಮಾರ್ಗವೊಂದನ್ನು ಉದ್ಘಾಟಿಸಿದ್ದರು. ಮಾಜಿ ಪ್ರಧಾನಿ ಮನ್‌ಮೋಹನ್‌ಸಿಂಗ್‌ ಅವರು ಹಂತ-1ರ ಎಂ.ಜಿ.ರೋಡ್‌-ಬೈಯಪ್ಪನಹಳ್ಳಿವರೆಗಿನ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.

ರಾಜ್ಯಪಾಲರಿಗೆ ಮುಚ್ಚಿದ ದ್ವಾರ!: ಪ್ರಧಾನಿ ಮೋದಿ ಅವರು ಟೋಕನ್‌ ಬಳಸಿ ಮೆಟ್ರೋದ ಪ್ಲಾಟ್‌ಫಾಮ್‌ರ್‍ನ ಪ್ರವೇಶ ದ್ವಾರ ದಾಟಿ ಮುನ್ನಡೆದರು. ಆದರೆ, ಅವರ ಹಿಂದೆಯೇ ಬಂದ ರಾಜ್ಯಪಾಲ ಥಾವರ್‌ಚಂದ ಗೆಹಲೋತ್‌ ಅವರ ಬಳಿ ಟೋಕನ್‌ ಇರಲಿಲ್ಲ. ಹೀಗಾಗಿ ಅವರು ದಾಟುವ ಮುನ್ನವೇ ದ್ವಾರದ ಬಾಗಿಲು ಮುಚ್ಚಿಬಿಟ್ಟವು. ಅರೆಕ್ಷಣ ರಾಜ್ಯಪಾಲರು ನಿಂತುಕೊಂಡರು. ಬಳಿಕ ಸಿಬ್ಬಂದಿ ಅವರ ನೆರವಿಗೆ ಬಂದು ಪಕ್ಕದಲ್ಲಿ ತೆರೆದುಕೊಂಡಿದ್ದ ಸ್ಥಳದಿಂದ ಪ್ಲಾಟ್‌ಫಾರ್ಮ್‌ಗೆ ಹೋಗಲು ನೆರವಾದರು.

ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್‌ ಸಂಚು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಮೋದಿ ನೋಡಲು ಕಿಕ್ಕಿರಿದ ಜನ: ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗ ಸಂಚಾರದ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ವೈಟ್‌ಫೀಲ್ಡ್‌ ಮಾರ್ಗದುದ್ದಕ್ಕೂ ಇಕ್ಕೆಲದಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಯುವಕರು-ಮಹಿಳೆಯರು ಕೇಸರಿ ಪೇಟ ಧರಿಸಿ ಮೋದಿ ಪರ ಘೋಷಣೆ ಕೂಗಿದರು. ‘ಮತ್ತೊಂದ್‌ ಸಾರಿ ಮೋದಿ ಸರ್ಕಾರ’, ‘ಏಕ್‌ದೋ ತೀನ್‌ ಚಾರ್‌ ಮೋದಿಜಿಕಿ ಜೈಜೈಕಾರ್‌’, ‘ಹರ್‌ಹರ್‌ ಮೋದಿ’, ‘ಘರ್‌ ಘರ್‌ ಮೋದಿ’ ಘೋಷಣೆ ಮೊಳಗಿದವು.

Latest Videos
Follow Us:
Download App:
  • android
  • ios