ಬೀದರ್‌ (ಮಾ.23):  ಜಲ ಸಂರಕ್ಷಣೆ ವಿಚಾರದಲ್ಲಿ ಹೊಸಕ್ರಾಂತಿಯನ್ನೇ ಮೆರೆದಿರುವ ಬೀದರ್‌ ಜಿಲ್ಲೆಯ ದುಫತ್‌ಮಹಾಗಾಂವ್‌ ಇದೀಗ ಇಡೀ ರಾಷ್ಟ್ರದ ಗಮನಸೆಳೆದಿದೆ. ಕಳೆದ 70 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 12ನೇ ಶತಮಾನದ ಬಸವಾದಿ ಶರಣೆ ಗುಗ್ಗವ್ವ ಕೆರೆಯ ಅಭಿವೃದ್ಧಿಯ ಮೂಲಕ ಗ್ರಾಮದ 800ಕ್ಕೂ ಅಧಿಕ ಮನೆಗಳಿಗೆ ಸಮರ್ಪಕ ನೀರು ಪೂರೈಸುವಲ್ಲಿ ಯಶಸ್ವಿಯಾಗಿರುವ ಗ್ರಾಮಸ್ಥರ ಕಾರ್ಯಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದು ದೇಶದ ಇತರೆ ಗ್ರಾಮಗಳೂ ಇದನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.

ಸೋಮವಾರ ವಿಶ್ವ ಜಲ ಸಂರಕ್ಷಣೆ ದಿನದಂಗವಾಗಿ ದುಫತ್‌ಮಹಾಗಾಂವ್‌ ಸೇರಿ ದೇಶದ 5 ಗ್ರಾಮ ಪಂಚಾಯ್ತಿ ಅಧ್ಯಕ್ಷರ ಜೊತೆಗೆ ಪ್ರಧಾನಿ ವರ್ಚುವಲ್‌ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ದುಫತ್‌ಮಹಾಗಾಂವ್‌ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ್‌ ಜೊನ್ನಿಕೇರಿ ಅವರು ತಮ್ಮ ಗ್ರಾಮದ ಜಲಕ್ಷಾಮವನ್ನೆದುರಿಸಲು ಕೈಗೊಂಡ ಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಗ್ರಾಮಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಉದ್ಯೋಗ ಖಾತ್ರಿ ಯೋಜನೆಯಡಿ ಗಗ್ಗೆವ್ವ ಕೆರೆಯ ಹೂಳೆತ್ತುವ ಕಾರ್ಯ ಕಳೆದ ಸಾಲಿನಲ್ಲಿಯೇ ಕೈಗೆತ್ತಿಕೊಳ್ಳಲಾಯಿತು. ಆದರಿಂದಾಗಿ ಇದೀಗ 800 ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಅಂತರ್ಜಲ ಮಟ್ಟ150 ಅಡಿಗೇರಿದೆ ಎಂದು ವಿವರಿಸಿದರು.

2500ಕ್ಕೂ ಹೆಚ್ಚು ನೀರಿಲ್ಲದ ಬೋರ್‌ಗಳಲ್ಲಿ ನೀರುಕ್ಕಿಸಿದ ಸಿಕಂದರ್

ಮಧ್ಯಪ್ರವೇಶಿಸಿ ಮೋದಿ, ನೀವು ಜನರ ಮನವೊಲಿಸಿದ್ದು ಹೇಗೆ? ಇದು ಸರ್ಕಾರದ ಕೆಲಸ, ಸರ್ಕಾರ ಬಜೆಟ್‌ ಕೊಡಲಿ, ಮೋದಿ ಅದು ಮಾಡಲಿ ಇದು ಮಾಡಲಿ, ನಾವು ನೋಡೋಣ ಎಂದು ಜನ ಹೇಳುತ್ತಿಲ್ಲವಲ್ಲ ಎಂದು ಹಾಸ್ಯಭರಿತವಾಗಿ ಪ್ರಶ್ನೆಗಳನ್ನು ಮುಂದಿಟ್ಟರು.

ಅದಕ್ಕೆ ಶ್ರೀನಿವಾಸ್‌, ಇದು ಜನರಿಂದ ಜನರಿಗಾಗಿ ಮಾಡಿದ ಕಾರ್ಯವಾದದ್ದರಿಂದ ಅಪಾರವಾಗಿ ಜನಬೆಂಬಲ ಸಿಕ್ಕಿದೆ. ಸರ್ಕಾರ ತನ್ನ ಕೆಲಸ ಮಾಡುತ್ತದೆ. ನಾವೂ ಅದರೊಟ್ಟಿಗೆ ಕೈ ಜೋಡಿಸಬೇಕೆಂದು ಕಳೆದ ನವೆಂಬರ್‌ನಿಂದಲೇ ಇಲ್ಲಿನ ಟೀಂ ಯುವಾ ಸಂಘಟನೆಯೊಂದಿಗೆ ಸೇರಿ 4 ತೆರೆದ ಬಾವಿ, 4 ಚೆಕ್‌ ಡ್ಯಾಂ ಸಂರಕ್ಷಣೆ ಕಾರ್ಯ ಮಾಡಿದ್ದೇವೆ. ಬರುವ ಮಳೆಗಾಲದಲ್ಲಿ ನೀರು ತುಂಬಿಕೊಳ್ಳಲು ಎರಡು ಸ್ಟೆಪ್‌ವೆಲ್‌ ತಯಾರಿವೆ ಎಂದು ಮಾಹಿತಿ ನೀಡಿದರು.

ಈ ಉತ್ತರದಿಂದ ಸಂತಸಗೊಂಡ ಪ್ರಧಾನಿ ಬೀದರ್‌ ಜಿಲ್ಲೆಯ ದುಫತ್‌ಮಹಾಗಾಂವ್‌ ಮುಖೇನ ದೇಶದ ಎಲ್ಲ ಗ್ರಾಪಂ ಅಧ್ಯಕ್ಷರಿಗೆ ಮಳೆಗಾಲ ಆರಂಭಕ್ಕೂ ಮುನ್ನ ಜಲ ಮೂಲಗಳ ಸಂರಕ್ಷಣೆಗೆ ಮುಂದಾಗಲು ಕೋರುತ್ತೇನೆ ಎಂದು ಕರೆ ನೀಡಿದರು.

ಮೋದಿ ಸಲಹೆ ಪಾಲನೆಗೆ ಗ್ರಾಮಸ್ಥರ ಪ್ರತಿಜ್ಞೆ

ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ಪುಳಕಿತನಾಗಿದ್ದೇನೆ, ಪ್ರೋತ್ಸಾಹಿತನಾಗಿದ್ದು ಜಲಸಂರಕ್ಷಣೆ ಬಗ್ಗೆ ಅವರು ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸುವುದಾಗಿ ಎಂದು ದುಫತ್‌ಮಹಾಗಾಂವ್‌ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ ಜೊನ್ನಿಕೇರಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೇವೇಳೆ ಮೋದಿ ಸಲಹೆ ಪಾಲಿಸಲು ಪ್ರತಿಜ್ಞೆ ಮಾಡುವ ಸಂಬಂಧ ಗ್ರಾಮ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಿರುವುದಾಗಿ ತಿಳಿಸಿದ್ದಾರೆ. ಅವರು ನೀಡಿದ ಸಲಹೆಗಳನ್ನು ತಪ್ಪದೇ ಪಾಲಿಸುತ್ತೇವೆ. ನಾಳೆಯಿಂದ 100 ದಿನ ಜಲ ಸಂರಕ್ಷಣೆಯದ್ದೇ ಕೆಲಸ. ಗ್ರಾಮಸ್ಥರೊಂದಿಗೆ ಸೇರಿ ಜಲಮೂಲಗಳ ಸಂರಕ್ಷಣೆಗೆ ಪಣ ತೊಡುತ್ತೇವೆ ಎಂದು ತಿಳಿಸಿದ