ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನಿ ಭದ್ರ ಅಡಿಪಾಯ; ಸಂಸದ ಬಿ.ವೈ.ರಾಘವೇಂದ್ರ
ಆರ್ಥಿಕ ಯುದ್ಧದ ಸಂದರ್ಭದಲ್ಲಿಯೂ ದೇಶದ ಒಟ್ಟು ಜಿಡಿಪಿಯ ಶೇ.10 ರಷ್ಟುಪ್ಯಾಕೇಜ್ ಘೋಷಿಸುವ ಮೂಲಕ ಸ್ವಾವಲಂಬನೆ ಭಾರತಕ್ಕೆ ಪ್ರಧಾನಿ ಭದ್ರ ಅಡಿಪಾಯ ಹಾಕಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.16): ಸ್ವಾವಲಂಬಿ ಭಾರತ ನಿರ್ಮಾಣ ಮತ್ತು ಆರ್ಥಿಕತೆಯ ಸದೃಢತೆಗಾಗಿ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಯುದ್ಧದ ಸಂದರ್ಭದಲ್ಲಿಯೂ ದೇಶದ ಒಟ್ಟು ಜಿಡಿಪಿಯ ಶೇ.10 ರಷ್ಟುಪ್ಯಾಕೇಜ್ ಘೋಷಿಸುವ ಮೂಲಕ ಸ್ವಾವಲಂಬನೆ ಭಾರತಕ್ಕೆ ಪ್ರಧಾನಿ ಭದ್ರ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಕೊರೋನಾ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿ ಜೀವ ಉಳಿಸಿಕೊಳ್ಳಲು ಪ್ರಧಾನಿ ಮೋದಿ ಕ್ಷಣ ಕ್ಷಣವೂ ಶ್ರಮಿಸುತ್ತಿದ್ದಾರೆ. ವಿಶ್ವದ ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ತತ್ತರಿಸಿದ್ದರೂ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳೇ ಕಾರಣ ಎಂದು ವಿಶ್ಲೇಷಿಸಿದರು.
ರೈತರು, ಕಾರ್ಮಿಕರು, ಕೈಗಾರಿಕಾ ವಲಯ ಹಾಗೂ ಜನರಿಗೆ ತೊಂದರೆ ಆಗಬಾರದೆಂದು ಪ್ರಧಾನಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಗುತ್ತಿಗೆದಾರರು ಸೇರಿದಂತೆ ಅನೇಕರಿಗೆ ಅನುಕೂಲವಾಗಿದೆ. ಕೃಷಿಕರು, ರಸ್ತೆ ಬದಿ ವ್ಯಾಪಾರಿಗಳು, ಮಧ್ಯಮ ವರ್ಗದವರಿಗೆ ಪ್ರಯೋಜನವಾಗಿದೆ ಎಂದು ಹೇಳಿದರು.
ಕೊರೋನಾ ಸೋಂಕಿನಲ್ಲಿ ಚೀನಾ ಹಿಂದಿಕ್ಕಿದ ಭಾರತ, ಆದ್ರೆ ಸಾವಿನ ಸಂಖ್ಯೆ ಕಡಿಮೆ!
ಸ್ವಾವಲಂಬಿ ಭಾರತಕ್ಕೆ ಮತ್ತು ದೇಶದ ಆರ್ಥಿಕತೆ ಹೆಚ್ಚಿಸಲು, ಉದ್ಯೋಗ ಸೃಷ್ಟಿಗಾಗಿ ಪ್ರಧಾನಿ ದಿಟ್ಟಹೆಜ್ಜೆ ಇಟ್ಟಿದ್ದಾರೆ. 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆಯಿಂದ ಬಹುತೇಕ ಎಲ್ಲ ವಲಯಗಳಿಗೂ ಸಹಾಯ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಎರಡು ಬಾರಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಯಾವ ಯೋಜನೆಯೂ ದುರ್ಬಳಕೆ ಆಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಗಾ ವಹಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶ ಕಟ್ಟುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಹೊರವರ್ತುಲ ರಸ್ತೆಗೆ ಚಾಲನೆ:
ಸುಮಾರು 20 ಕೋಟಿ ರು. ವೆಚ್ಚದಲ್ಲಿ ನಗರದ ರೈಲ್ವೆ ನಿಲ್ದಾಣದ ವರ್ತುಲ ರಸ್ತೆಗೆ ಚಾಲನೆ ನೀಡಲಾಗುವುದು. ನೂರು ಅಡಿ ವರ್ತುಲ ರಸ್ತೆಯ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ರಸ್ತೆ, ಯುಜಿಡಿ, ವಿದ್ಯುತ್ ಕಂಬ ಅಳವಡಿಕೆ, ಭೂ ಸ್ವಾಧೀನ ಸೇರಿದಂತೆ ಹಲವು ಪ್ರಕ್ರಿಯೆ ಬಹುತೇಕ ಮುಗಿದಿವೆ. ರೈಲ್ವೆ ಇಲಾಖೆಯಿಂದ ಭೂ ಸ್ವಾಧೀನ ಕೂಡ ಆಗಿದ್ದು, ಅಲ್ಲಿದ್ದ ವಸತಿ ಗೃಹಗಳನ್ನು ತೆರವುಗೊಳಿಸಲಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸಂಸದ ರಾಘವೇಂದ್ರ ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್. ಅರುಣ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಎಪಿಎಂಸಿ ಸದಸ್ಯ ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ಬಿ. ಅಣ್ಣಪ್ಪ ಮುಂತಾದವರು ಇದ್ದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ವರ್ಗದ ಜನರಿಗೆ ನೆರವು ನೀಡಿರುವುದು ಸ್ವಾಗತಾರ್ಹ. ವಲಸಿಗರು, ಅಸಂಘಟಿತ ಕಾರ್ಮಿಕರು, ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡು ಸಂಕಷ್ಟಅನುಭವಿಸುತ್ತಿರುವ ಕುಟುಂಬಗಳಿಗೆ ನೇರ ನೆರವು ಕಲ್ಪಿಸಲಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಮೂಲಕ ದೇಶದ ಎಲ್ಲಿ ಬೇಕಾದರೂ ಪಡಿತರ ಪಡೆಯಬಹುದಾಗಿದೆ. ಆ ಮೂಲಕ ಬಡವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲಕರ ವಾತಾವರಣ ಪ್ರಧಾನಿ ಸೃಷ್ಟಿಸಿದ್ದಾರೆ.
- ಬಿ.ವೈ. ರಾಘವೇಂದ್ರ, ಸಂಸದ