ಕಲಬುರಗಿ ಮೊದಲ ಪ್ಲಾಸ್ಟಿಕ್ ಸರ್ಜನ್ ಬಡಶೇಷಿ ಇನ್ನಿಲ್ಲ
ಹೈಕಶಿ ಸಂಸ್ಥೆಯ ರಾಂಪೂರೆ ವೈದ್ಯ ವಿದ್ಯಾಲಯದಲ್ಲಿ ಶಸ್ತ್ರ ಚಿಕಿತ್ಸಾ ಪರಿಣಿತರಾಗಿ, ಪ್ರಾಧ್ಯಾಪಕರಾಗಿ, ನಂತರ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿ ಹೆಸರು ಪಡೆದು ತಮ್ಮದೇ ಕೌಶಲ್ಯಗಳಿಂದ ಛಾಪು ಮೂಡಿಸಿದ್ದ ಡಾ.ಬಡಶೇಷಿ| ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಿತಿ ಪಡೆದು ಕಲಬುರಗಿಯ ಮೊದಲ ಪ್ಲಾಸ್ಟಿಕ್ ಸರ್ಜನ್‌ರಾಗಿಯೂ ಹೆಸರು ಮಾಡಿದ್ದ ಡಾ.ಬಡಶೇಷಿ|
ಕಲಬುರಗಿ(ಜು.26): ನಗರದ ಖ್ಯಾತ ಶಸ್ತ್ರ ಚಿಕಿತ್ಸಾ ಪರಿಣಿತ, ಕಲಬುರಗಿಯ ಮೊದಲ ಪ್ಲಾಸ್ಟಿಕ್ ಸರ್ಜನ್ ಡಾ.ಅರುಣ ಕುಮಾರ್ ಬಡಶೇಷಿ ಶನಿವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಕಲಬುರಗಿ ಪ್ರದೇಶ ಕೌಶಲ್ಯಪೂರ್ಣ ಶಸ್ತ್ರ ಚಿಕಿತ್ಸಕನನ್ನು ಕಳೆದುಕೊಂಡು ಬಡವಾಗಿದೆ. ಇಲ್ಲಿನ ಚಿತ್ತಾರಿ ಸಾ ಮಿಲ್‌ನ ರುದ್ರಭೂಮಿಯಲ್ಲಿ ಶನಿವಾರ ಮಧಾಹ್ನ ಅಂತ್ಯ ಸಂಸ್ಕಾರ ನಡೆದಿದೆ.
ಇಲ್ಲಿನ ಹೈಕಶಿ ಸಂಸ್ಥೆಯ ರಾಂಪೂರೆ ವೈದ್ಯ ವಿದ್ಯಾಲಯದಲ್ಲಿ ಶಸ್ತ್ರ ಚಿಕಿತ್ಸಾ ಪರಿಣಿತರಾಗಿ, ಪ್ರಾಧ್ಯಾಪಕರಾಗಿ, ನಂತರ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿ ಹೆಸರು ಪಡೆದಿದ್ದ ಡಾ.ಬಡಶೇಷಿ ತಮ್ಮದೇ ಕೌಶಲ್ಯಗಳಿಂದ ಛಾಪು ಮೂಡಿಸಿದ್ದರು. ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಿತಿ ಪಡೆದು ಕಲಬುರಗಿಯ ಮೊದಲ ಪ್ಲಾಸ್ಟಿಕ್ ಸರ್ಜನ್‌ರಾಗಿಯೂ ಹೆಸರು ಮಾಡಿದವರು. ಇಲ್ಲಿ ತಮ್ಮದೇ ಆದಂತಹ ಗಣೇಶ ನರ್ಸಿಂಗ್ ಹೋಂ ಸ್ಥಾಪಿಸಿದ್ದರು.
ಕಲ್ಯಾಣ ಕರ್ನಾಟಕದಲ್ಲಿ ಮುಂದುವರಿದ ಮಳೆ: ತುಂಬಿದ ಹಳ್ಳಕೊಳ್ಳಗಳು
ಡಾ.ಬಡಶೇಷಿ ನಿಧನದಿಂದ ಕಲಬುರಗಿ ಭಾಗಕ್ಕೆ, ವೈದ್ಯಕೀಯ ರಂಗಕ್ಕೆ, ರೋಗಿಗಳ ಚಿಕಿತ್ಸೆ ಸಂಬಂಧಿಸಿದಂತೆ ತುಂಬಲಾರದ ನಷ್ಟಉಂಟಾಗಿದೆ ಎಂದು ಖ್ಯಾತ ಸರ್ಜನ್ ಡಾ.ಶರದ್ ತಂಗಾ ಕಂಬನಿ ಮಿಡಿದಿದ್ದಾರೆ. ಡಾ.ಬಡಶೇಷಿ ಕೇವಲ ವೈದ್ಯರಲ್ಲದೆ ಮಾನವೀಯತೆ, ಅಂತಃಕರಣ, ಪ್ರೀತಿಯ ಸೆಲೆಯಾಗಿದ್ದರು. ಇವರಲ್ಲೊಬ್ಬ ಕಲಾವಿದ ಜೀವಂತವಾಗಿದ್ದ. ಇವರು ಅನೇಕ ಅತ್ಯುತ್ತಮ ಕಲಾಕೃತಿಗಳನ್ನು ರಚಿಸುವ ಮೂಲಕ ಉತ್ತಮ ಕಲಾಕಾರರಾಗಿಯೂ ಹೆಸರು ಮಾಡಿದವರ. ಹಿಂದಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಡಾ.ಬಡಶೇಷಿ ಕ್ರಿಕೆಟ್ ಆಟಗಾರರು ಆಗಿದ್ದರೆಂದು ಡಾ.ಬಡಶೇಷಿಯವರ ಬಹುಮುಖಿ ವ್ಯಕ್ತಿತ್ವ, ಸಮಾಜಮುಖಿ ಕೆಲಸಗಳನ್ನು ಡಾ.ತಂಗಾ ಸ್ಮರಿಸಿದ್ದಾರೆ.
ವಿಪ್ರ ಸಮಾಜದ ಮುಖಂಡರಾದ ರವಿ ಲಾತೂರಕರ್, ನವಲಿ ಕೃಷ್ಣಾಚಾರ್ಯ, ಆರ್ಜೆ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಪ್ರಲ್ಹಾದ ಬುರ್ಲಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಜಗದೀಶ ಹುನಗುಂದ, ದಯಾಘನ ಧಾರವಾಡಕರ್, ಜಿಮ್ಸ್ ಆಡಳಿತ ಸಲಹಾ ಮಂಡಳಿ ಸದಸ್ಯ ಪ್ರಲ್ಹಾದ ಪೂಜಾರಿ, ವಿಶ್ವ ಮಧ್ವ ಪರಿಷತ್‌ನ ರಾಮಾಚಾರ್ಯ ಮೋಗರೆ, ವಿಪ್ರ ಸಮಾಜದ ನರಹಿ ಪಾಟೀಲ್, ರಾಘವೇಂದ್ರರಾವ ಕೋಗ್ನೂರ್ ಕಂಬನಿ ಮಿಡಿದಿದ್ದಾರೆ.